ಬ್ಯಾಂಕ್ ಖಾತೆ ವಿವರ, ಒಟಿಪಿ ಪಡೆದು ₹ 1.6 ಲಕ್ಷ ವಂಚನೆ
ಉಡುಪಿ: ಕೆವೈಸಿ ಅಪ್‌ಡೇಟ್ ಮಾಡದ ಪರಿಣಾಮ ಬ್ಯಾಂಕ್ ಖಾತೆ ಬ್ಲಾಕ್ ಮಾಡಲಾಗಿದೆ ಎಂಬ ಸಂದೇಶ ಕಳಿಸಿದ ವಂಚಕರು ಮಣಿಪಾಲದ ಸ್ಟಾನ್ಲಿ ಪಿ.ಕುಂದರ್ ಖಾತೆಯಿಂದ ₹ 1,06,826 ಹಣ ದೋಚಿಸಿದ್ದಾರೆ.
ಸ್ಟಾನ್ಲಿ ಪಿ.ಕುಂದರ್ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿದ್ದು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು. ಈಚೆಗೆ ಅವರ ಮೊಬೈಲ್‌ಗೆ ಬ್ಯಂಕ್ ಖಾತೆ ಬ್ಲಾಕ್ ಮಾಡಿರುವ ಸಂದೇಶ ಹಾಗೂ ಸಂಪರ್ಕಿಸಬೇಕಾದ ಫೋನ್ ನಂಬರ್ ಸಂದೇಶ ಬಂದಿದೆ.
ಬಳಿಕ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಹೆಸರಿನಲ್ಲಿ ಕರೆ ಮಾಡಿದ ವಂಚಕರು ಬ್ಯಾಂಕ್ ಖಾತೆಯ ವಿವರ ಹಾಗೂ ಮೊಬೈಲ್‌ಗೆ ಬಂದ ಒಟಿಪಿ ಪಡೆದು ₹ 50,000, ₹ 14,330, ₹ 14,165, ₹ 14,165, ₹ 14,165ದಂತೆ ಹಣವನ್ನು ಆನ್‌ಲೈನ್‌ನಲ್ಲಿ ವರ್ಗಾವಣೆ ಮಾಡಿಕೊಂಡಿದ್ದಾರೆ. ವಂಚನೆ ಸಂಬಂಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು
ಉಡುಪಿ: ಮಾವಿನ ಕಾಯಿ ಕೀಳಲು ಮರ ಹತ್ತಿದ್ದಾಗ ಮರಕ್ಕೆ ಕಟ್ಟಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪಶ್ಚಿಮ ಬಂಗಾಳದ ಬಿಶುದಾಸ್ ಎಂಬುವರು ಮೃತಪಟ್ಟಿದ್ದಾರೆ.
ಸಂತೆಕಟ್ಟೆಯಲ್ಲಿರುವ ಅಪಾರ್ಟ್‌ಮೆಂಟ್ ಕೆಲಸಕ್ಕೆ ಮಾವಿನ ಮರಕ್ಕೆ ವಿದ್ಯುತ್ ಸರ್ವೀಸ್ ವಯರ್ ಕಟ್ಟಲಾಗಿತ್ತು. ಅಪಾರ್ಟ್‌ಮೆಂಟ್‌ನ ಪಕ್ಕದಲ್ಲೇ ಇದ್ದ ಮಾವಿನ ಮರದಲ್ಲಿ ಮಾವಿನ ಕಾಯಿ ಕೀಳಲು ಬಿಶುದಾಸ್ ಹತ್ತಿದ ಸಂದರ್ಭ ಶಾಕ್ ಒಡೆದು ಮೃತಪಟ್ಟಿದ್ದಾರೆ.
ಘಟನೆಗೆ ನಿರ್ಲಕ್ಷ್ಯ ಕಾರಣ ಎಂದು ಅಪಾರ್ಟ್‌ಮೆಂಟ್‌ನ ಸೂಪರ್‌ವೈಸರ್ ಆಲ್ವಿನ್ ಕ್ವಾಡ್ರಸ್ ಹಾಗೂ ಎಲೆಕ್ಟ್ರಿಷಿಯನ್ ಮಂಜುನಾಥ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗಳು ನಾಪತ್ತೆ: ಸ್ನೇಹಿತನ ವಿರುದ್ಧ ದೂರು
ಉಡುಪಿ: ಮೂರು ವರ್ಷದ ಪುತ್ರಿಯನ್ನು ಕರೆದೊಯ್ದ ಸಂಗಮೇಶ್ ಎಂಬಾತ ಮರಳಿ ಮಗಳನ್ನು ಮನೆಗೆ ಕರೆತಂದಿಲ್ಲ ಎಂದು ತಾಯಿ ಶಾಂತಾ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಡುಸಗ್ರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಾಂತಾ ಎಂಬುವರ ಮಗಳನ್ನು ಸಂಗಮೇಶ ಎಂಬಾತ ಕರೆದೊಯ್ದಿದ್ದ. ಮಗಳನ್ನು ಶಂಕರ್ ಎಂಬುವರ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮಗಳನ್ನು ವಾಪಸ್ ಕರೆತರದೆ ಒಂಟಿಯಾಗಿ ಬಂದಿದ್ದ.
ಮಗಳ ಬಗ್ಗೆ ಪ್ರಶ್ನೆ ಮಾಡಿದಾಗ ಕರೆತರುವುದಾಗಿ ತಿಳಿಸಿ ಹೋದವನು ಮತ್ತೆ ಬಂದಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಶಂಕರ್ ಅವರನ್ನು ವಿಚಾರಿಸಿದಾಗ ಮಗಳನ್ನು ಅವರ ಮನೆಗೂ ಕರೆದೊಯ್ದಿಲ್ಲ ಎಂಬ ಮಾಹಿತಿ ಸಿಕ್ಕಿದ್ದು, ಪುತ್ರಿಯನ್ನು ಹುಡುಕಿ ಕೊಡುವಂತೆ ಮಹಿಳಾ ಠಾಣೆಗೆ ಶಾಂತಾ ದೂರು ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.