ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ನಲ್ಲಿ ತಾಯಿ ಶಿಶು ಪ್ರಮಾಣ ಹೆಚ್ಚಳ

ಮರಣ ತಡೆಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ
Last Updated 8 ಆಗಸ್ಟ್ 2021, 13:41 IST
ಅಕ್ಷರ ಗಾತ್ರ

ಉಡುಪಿ: ಆರಂಭದಲ್ಲೇ ಗರ್ಭಿಣಿಯರಿಗೆ ತಾಯಿ ಕಾರ್ಡ್ ವಿತರಿಸಿ ಉತ್ತಮ ಆರೋಗ್ಯ ಸೇವೆ ನೀಡುವ ಮೂಲಕ ಜಿಲ್ಲೆಯಲ್ಲಿ ಶಿಶು ಹಾಗೂ ತಾಯಿ ಮರಣ ಪ್ರಮಾಣ ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈಚೆಗೆ ಕಚೇರಿ ಸಭಾಂಗಣದಲ್ಲಿ ಶಿಶು ಮತ್ತು ತಾಯಿ ಮರಣ ನಿಯಂತ್ರಣ ಹಾಗೂ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿ, ಸರ್ಕಾರ ಶಿಶು ಹಾಗೂ ತಾಯಿ ಮರಣ ಪ್ರಮಾಣ ತಡೆಗೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರೂ ಲಾಕ್‌ಡೌನ್ ಅವಧಿಯಲ್ಲಿ ಮರಣ ಪ್ರಮಾಣ ಸ್ವಲ್ಪ ಹೆಚ್ಚಾಗಿರುವುದು ಕಂಡುಬಂದಿದೆ ಎಂದರು.

ಜಿಲ್ಲೆಯಲ್ಲಿ ಮಾರ್ಚ್‌ನಿಂದ ಜೂನ್‌ವರೆಗೆ 8 ತಾಯಂದಿರು ಮರಣ ಹೊಂದಿದ್ದು, ಫೆಬ್ರವರಿಯಿಂದ ಜೂನ್‌ವರೆಗೆ 52 ಶಿಶುಗಳು ಮೃತಪಟ್ಟಿವೆ. ಸಮಯಕ್ಕೆ ಸರಿಯಾಗಿ ಸಿಗದ ಅರೋಗ್ಯ ಸೇವೆ, ಕಡಿಮೆ ತೂಕ, ಅಪೌಷ್ಟಿಕತೆ, ಹೃದಯ ಸಂಬಂಧಿ ಸಮಸ್ಯೆ, ಅವಧಿಗೆ ಮುಂಚೆ ಹೆರಿಗೆಯ ಕಾರಣದಿಂದ ತಾಯಿ ಹಾಗೂ ಶಿಶು ಮರಣ ಹೆಚ್ಚಾಗುವ ಸಾಧ್ಯತೆಗಳಿದ್ದು, ತಡೆಗೆ ಅಗತ್ಯ ಕ್ರಮ ವಹಿಸಬೇಕು ಎಂದರು.

ತಾಯಿ ಮಗು ಮರಣವು ಆಕಸ್ಮಿಕವಲ್ಲದೆ ವೈದ್ಯರ ನಿರ್ಲಕ್ಷದಿಂದ ಉಂಟಾಗಿದ್ದರೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗರ್ಭಿಣಿಯರಿಗೆ ನೀಡುವ ಸವಲತ್ತುಗಳನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ತಲುಪಿಸಬೇಕು ಎಂದರು.

ಮಕ್ಕಳಿಗೆ ನಿಗದಿತ ಅವಧಿಯಲ್ಲಿ ಚುಚ್ಚುಮದ್ದು ನೀಡುವ ಕಾರ್ಯಕ್ರಮಗಳನ್ನು ತಪ್ಪದೇ ಅನುಷ್ಠಾನಗೊಳಿಸಬೇಕು. ಹೆಚ್ಚು ಕೋವಿಡ್‌ ಪ್ರಕರಣ ಕಂಡುಬರುವ ಪ್ರದೇಶಗಳಲ್ಲಿ ವಾಸವಾಗಿರುವವರಿಗೆ ಮೊದಲು ಕೋವಿಡ್ ಲಸಿಕೆ ಹಾಕಬೇಕು. ಗರ್ಭಿಣಿಯರಿಗೆ, ಅಪೌಷ್ಠಿಕತೆ ಹೊಂದಿರುವವರಿಗೆ, ಎಂಡೋ ಸಲ್ಫಾನ್ ಪೀಡಿತರಿಗೆ ಆದ್ಯತೆ ಮೇಲೆ ಲಸಿಕೆ ಹಾಕಬೇಕು ಎಂದು ಸೂಚನೆ ನೀಡಿದರು.

ಮಕ್ಕಳನ್ನು ಕೋವಿಡ್ 3ನೇ ಅಲೆಯಿಂದ ತಡೆಯಲು ವಾತ್ಸಲ್ಯ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ ನಡೆಯುತ್ತಿದ್ದು, ಶೀಘ್ರ ಪೂರ್ಣಗೊಳಿಸಬೇಕು. ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಗಳು ಆರೋಗ್ಯ ಇಲಾಖೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್ ಮಾತನಾಡಿ, ಗರ್ಭಿಣಿಯರು ನಿಯಮಿತ ಪರೀಕ್ಷೆಯ ಮೂಲಕ ರಕ್ತದೊತ್ತಡ, ಮಾನಸಿಕ ಒತ್ತಡ ಸೇರಿದಂತೆ ಮತ್ತಿತರ ಕಾಯಿಲೆಗಳ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ಕಾಯಿಲೆಗಳಿದ್ದರೆ ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಲು ಸಾಧ್ಯ ಎಂದರು.

ವಾತ್ಸಲ್ಯ ಯೋಜನೆಯಡಿ ಮಕ್ಕಳ ತಪಾಸಣಾ ಕಾರ್ಯ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಶೇ 65.73 ರಷ್ಟು ಶಾಲೆ ಹಾಗೂ ಶೇ 77.31ರಷ್ಟು ಅಂಗನವಾಡಿಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ನಡೆದಿದೆ. ತಪಾಸಣೆ ಮಾಡಿಸಿಕೊಳ್ಳದ ಮಕ್ಕಳನ್ನು ಪೋಷಕರು ತಪಾಸಣೆಗೆ ಕರೆತರಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ನಗರಸಭೆ ಅದ್ಯಕ್ಷೆ ಸುಮಿತ್ರಾ ನಾಯಕ್, ಡಿಎಚ್‌ಒ ಡಾ. ನಾಗಭೂಷಣ ಉಡುಪ, ಜಿಲ್ಲಾ ಲಸಿಕೆ ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಉಡುಪಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT