ಸೋಮವಾರ, ಏಪ್ರಿಲ್ 6, 2020
19 °C
ಪುನಶ್ಚೇತನ ಅರಿವು ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್

ಅಂಗವಿಕಲರಿಗೆ ಉದ್ಯೋಗಾವಕಾಶ ಸೃಷ್ಟಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಂಗವಿಕಲರಿಗೆ ಅನುಕಂಪ ತೋರುವ ಬದಲು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ, ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಮಂಗಳವಾರ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ ಜಿಲ್ಲಾಡಳಿತ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕೈಗಾರಿಕಾ ಕೇಂದ್ರ, ಸಣ್ಣ ಕೈಗಾರಿಕಾ ಸಂಘ ಸೇರಿದಂತೆ ಹಲವು ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಂಗವಿಕಲತೆ, ಉದ್ಯೋಗ ಮತ್ತು ಪುನಶ್ಚೇತನ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರು ದೈಹಿಕವಾಗಿ ಅಸಮರ್ಥರಿದ್ದರೂ ಸಾಮಾನ್ಯರಿಗಿಂತ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುತ್ತಾರೆ. ಅತ್ಯಂತ ಪರಿಶ್ರಮದಿಂದ ದುಡಿಯುವ ಸಾಮರ್ಥ್ಯ ಹೊಂದಿರುತ್ತಾರೆ. ಅಂಗವಿಕಲರಿಗೆ ಉದ್ಯೋಗ ಒದಗಿಸಿ, ಸ್ವಾಭಿಮಾನದ ಬದುಕು ನಡೆಸಲು ಜಿಲ್ಲಾಡಳಿತ ಹಾಗೂ ಎಲ್ಲ ಇಲಾಖೆಯ ನೆರವು ಅಗತ್ಯವಿದೆ. ಸಮಾಜ ಸಹ ಅಂಗವಿಕಲರಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ ಅಂಗವಿಕಲರಿಗೆ ಉದ್ಯೋಗ ನೀಡಲು 7 ತಾಲ್ಲೂಕುಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ, 100ಕ್ಕೂ ಹೆಚ್ಚು ಜನರನ್ನು ನೋಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯ ಕೈಗಾರಿಕೋದ್ಯಮಿಗಳು ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ಸಂಸ್ಥೆಗಳಲ್ಲಿ ಲಭ್ಯವಿರುವ ಉದ್ಯೋಗಗಳನ್ನು ಅಂಗವಿಕಲರಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚಿನ ಕೌಶಲದ ಅಗತ್ಯವಿದ್ದಲ್ಲಿ ಜಿಲ್ಲಾಡಳಿತದಿಂದ ಕೌಶಲ ತರಬೇತಿ ನೀಡಲಾಗುವುದು. ಮುಂದೆ ಅಂಗವಿಕಲರಿಗಾಗಿಯೇ ಪ್ರತ್ಯೇಕ ಉದ್ಯೋಗಮೇಳ ಕೂಡ ಆಯೋಜಿಸಲಾಗುವುದು ಎಂದು ಡಿಸಿ ತಿಳಿಸಿದರು.

ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಐ.ಆರ್. ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಅಂಗವಿಕಲರ ಸಬಲಿಕರಣ ಅಧಿಕಾರಿ ಚಂದ್ರನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಡುಪಿ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಯೂತ್ ಫಾರ್ ಜಾಬ್ಸ್ ಸಂಸ್ಥೆಯ ಮುಖ್ಯಸ್ಥೆ ಮೀರಾ ಶೆಣೈ, ಕೌಶಲಾಭಿವೃದ್ಧಿ, ಉದ್ದಿಮೆ ಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಅಧಿಕಾರಿ ಭಾಸ್ಕರ್‌ ಎ.ಅಮೀನ್, ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್ ಸ್ವಾಗತಿಸಿದರು. ರೂಪಲಕ್ಷ್ಮಿ ವಂದಿಸಿದರು, ಸುಬ್ರಮಣಿ ಕಾರ್ಯಕ್ರಮ ನಿರೂಪಿಸಿದರು. ಉದ್ಯಮಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು