ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಜಿಲ್ಲೆಯಲ್ಲಿ ಕಪ್ಪುಶಿಲೀಂಧ್ರ ಪತ್ತೆ ಇಲ್ಲ

ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್‌ ನೇತೃತ್ವದ ತಂಡ ಭೇಟಿ ಪರಿಶೀಲನೆ
Last Updated 16 ಮೇ 2021, 16:43 IST
ಅಕ್ಷರ ಗಾತ್ರ

ಉಡುಪಿ: ತೌತೆ ಚಂಡಮಾರುತ ಸಾಗುವ ಹಾದಿಯಲ್ಲಿ ಉಡುಪಿ ಜಿಲ್ಲೆಯ ಗಡಿಗೆ ಅತ್ಯಂತ ಸಮೀಪ ಬಂದ ಪರಿಣಾಮ ಅತಿ ಹೆಚ್ಚು ಹಾನಿ‌ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಭಾನುವಾರ ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿ, ಚಂಡಮಾರುತದ ಹಾನಿ ಪ್ರಮಾಣವನ್ನು ಸಮರ್ಪಕವಾಗಿ ಅಂದಾಜು ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿವೆ. ಪ್ರಾಥಮಿಕ ವರದಿಯ ಪ್ರಕಾರ ಜಿಲ್ಲೆಯಲ್ಲಿ 36 ಮನೆಗಳಿಗೆ ಹಾನಿಯಾಗಿದೆ ಎಂದರು.

ಮೀನುಗಾರಿಕಾ ರಸ್ತೆಗಳಿಗೆ, ಲೋಕೋಪಯೋಗಿ ರಸ್ತೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಸಮುದ್ರ ಬದಿಯಲ್ಲಿರುವ ತೆಂಗಿನ ಮರಗಳು ಕಡಲ್ಕೊರೆತಕ್ಕೆ ಸಿಕ್ಕು ಸಮುದ್ರಪಾಲಾಗಿವೆ. ವಿದ್ಯುತ್ ಮಾರ್ಗ, ಲೈಟ್ ಕಂಬ, ಹಾಗೂ ಟ್ರಾನ್ಸ್‌ಫರಂಗಳಿಗೆ ಹಾನಿಯಾಗಿದೆ. ಎಲ್ಲ ಇಲಾಖೆಗಳು ನಷ್ಟದ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

60 ಜನರು ಸ್ಥಳಾಂತರವಾಗಿದ್ದು, ಸಂಬಂಧಿಕರ ಮನೆಗಳಲ್ಲಿ ಉಳಿದಿದ್ದಾರೆ. 14 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮನೆ ಕಳೆದುಕೊಂಡವರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್ ತಂತಿ ತುಳಿದು ರೈತ ಮೃತಪಟ್ಟಿದ್ದಾರೆ. ಮೊದಲೇ ಮುನ್ನಚ್ಚರಿಕೆ ನೀಡಿದ್ದರಿಂದ ಆಳಸಮುದ್ರ ಮೀನುಗಾರಿಕೆಗೆ ಮೀನುಗಾರರು ತೆರಳಿಲ್ಲ ಎಂದರು.

ಮಂಗಳೂರಿನಲ್ಲಿ ಎರಡು ಬೋಟ್‌ಗಳು ಸಂಪರ್ಕ ಕಡಿತಗೊಂಡು ಉಡುಪಿ ಭಾಗಕ್ಕೆ ಬಂದಿವೆ. ಒಂದು ಬೋಟ್‌ನಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ. ಒಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನೊಂದು ಬೋಟ್ ಕಾಪು ಸಮೀಪ ಬಂಡೆಕಲ್ಲಿನ ನಡುವೆ ಸಿಲುಕಿದ್ದು, ಅದರಲ್ಲಿರುವ ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದರು.

ಮಲ್ಪೆ, ಪಡುಕರೆ, ಮಟ್ಟು, ಕಾಪು, ಕುಂದಾಪುರ, ಮರವಂತೆ, ಗಂಗೊಳ್ಳಿಯ ಕಡಲ್ಕೊರೆತ ಪ್ರದೇಶಗಳಿಗೂ ಜಿಲ್ಲಾಧಿಕಾರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ. ನವೀನ್ ಭಟ್, ಎಸ್‌ಪಿ ಎನ್. ವಿಷ್ಣುವರ್ಧನ್ ಇದ್ದರು.

‘ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಪತ್ತೆ ಇಲ್ಲ’

ಹ್ಯಾಪಿ ಹೈಪೋಕ್ಸಿಯಾ ಹೆಚ್ಚಾಗಿ ಯುವಕರಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ರಕ್ತದಲ್ಲಿರುವ ಆಮ್ಲಜನಕ ಪ್ರಮಾಣವನ್ನು ನಿರಂತರವಾಗಿ ಪತ್ತೆಹಚ್ಚಲು 5 ಸಾವಿರ ಪಲ್ಸ್‌ ಆಕ್ಷಿಮೀಟರ್ ಖರೀದಿಗೆ ನಿರ್ಧರಿಸಲಾಗಿದೆ. ಇದಕ್ಕಾಗಿ ತಗುಲುವ ವೆಚ್ಚವನ್ನು ಶಾಸಕರ ನಿಧಿಯಿಂದ ಭರಿಸುವುದಾಗಿ ಶಾಸಕರು ತಿಳಿಸಿದ್ದಾರೆ. ಹೋಂ ಐಸೊಲೇಷನ್‌ನಲ್ಲಿರುವ ಸೋಂಕಿತರಿಗೆ ಪಲ್ಸ್ ಆಕ್ಸಿಮೀಟರ್‌ಗಳನ್ನು ಕೊಟ್ಟು, ಆಮ್ಲಜನಕ ಪ್ರಮಾಣ ಕುಸಿತವಾದ ಕೂಡಲೇ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗಿಲ್ಲ. ಆದರೂ ಸೋಂಕಿಗೆ ಅಗತ್ಯವಾದ ಚುಚ್ಚುಮದ್ದು ಸಂಗ್ರಹಿಸಿಟ್ಟುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT