ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ವಿದ್ಯಾರ್ಥಿಗಳ ಮನೆಬಾಗಿಲಿಗೆ ಬಂತು ಶಿಕ್ಷಣ ಇಲಾಖೆ

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿನೂತನ ಕಾರ್ಯಕ್ರಮಗಳ ಅನುಷ್ಠಾನ
Last Updated 17 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಉಡುಪಿ: ಶೈಕ್ಷಣಿಕ ಗುಣಮಟ್ಟ ವೃದ್ಧಿ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ವಿನೂತನ ಪ್ರಯತ್ನಗಳಿಗೆ ಮುಂದಡಿ ಇಟ್ಟಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಮನೆ ಬಾಗಿಲು ತಟ್ಟುತ್ತಿದೆ. ಕೊರೊನಾ ಕಾರಣದಿಂದ ಶೈಕ್ಷಣಿಕ ಹಾಗೂ ಮಾನಸಿಕವಾಗಿ ಕುಗ್ಗಿರುವ ಮಕ್ಕಳಿಗೆ ಮನೋಸ್ಥೈರ್ಯ ತುಂಬುವುದರ ಜತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದೆ.

ಅನುತೀರ್ಣ ಪ್ರಮಾಣ ಕಡಿಮೆ ಗುರಿ:

ಕಳೆದ ಶೈಕ್ಷಣಿಕ ವರ್ಷದಲ್ಲಿ ಉಡುಪಿ ಜಿಲ್ಲೆಯ ಶೇ 88ರಷ್ಟು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅನುತೀರ್ಣ ಪ್ರಮಾಣ ಶೇ 12ರಷ್ಟಿತ್ತು. ಈ ವರ್ಷ ಅನುತೀರ್ಣ ಪ್ರಮಾಣವನ್ನು ಶೇ 5ಕ್ಕೆ ಇಳಿಸಲು ಶಿಕ್ಷಣ ಇಲಾಖೆ ರಚನಾತ್ಮಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ. ಅದರಲ್ಲಿ ಫೋನ್ ಇನ್‌ ಕಾರ್ಯಕ್ರಮ ಕೂಡ ಒಂದು.

ಜಿಲ್ಲೆಯಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಫೋನ್‌ ಇನ್‌ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಜ.8ರಿಂದ ಪ್ರತಿ ಶುಕ್ರವಾರ ಸಂಜೆ 5 ರಿಂದ 7ರವರೆಗೆ ನಡೆಯುತ್ತಿದೆ. ಪ್ರತಿ ವಾರ ನಿರ್ದಿಷ್ಟ ವಿಷಯದ ಕುರಿತು ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ಶಿಕ್ಷಕರಿಂದ ಉತ್ತರ ಪಡೆದುಕೊಳ್ಳಬಹುದು. ಪಠ್ಯಕ್ಕೆ ಸೀಮಿತವಲ್ಲದ, ಶೈಕ್ಷಣಿಕ ಪ್ರಗತಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೂ ಉತ್ತರ ಲಭ್ಯ.

‍ಪಾಲಕರೊಂದಿಗೆ ಸಂವಾದ

ಫೆ.1ರಿಂದಡಿಡಿಪಿಐ ಎನ್‌.ಎಚ್‌.ನಾಗೂರ ಅವರ ನೇತತ್ವದ ಅಧಿಕಾರಿಗಳ ತಂಡ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿಕೊಟ್ಟು ಪಾಲಕರೊಂದಿಗೆ ಸಂವಾದ ನಡೆಸುತ್ತಿದೆ. ಮನೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು, ಒತ್ತಡ ರಹಿತ ಕಲಿಕೆಗೆ ಅವಕಾಶ, ನಿರಂತರ ಅಧ್ಯಯನಕ್ಕೆ ಒತ್ತು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪೋಷಕರಿಗೆ ತಿಳಿ ಹೇಳಲಾಗುತ್ತಿದೆ.

ಪ್ರೇರಣಾ ಶಿಬಿರ

ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿಗಳಷ್ಟೆ, ಮುಖ್ಯೋಪಾಧ್ಯಯರು ಹಾಗೂ ಶಿಕ್ಷಕರೂ ಮುಖ್ಯ ಎಂಬ ಕಾರಣಕ್ಕೆ ಪ್ರೇರಣಾ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಶಿಕ್ಷಕರ ಜವಾಬ್ದಾರಿ, ಕರ್ತವ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಲಾಗಿದೆ. ಶಿಕ್ಷಕರು ಮಕ್ಕಳ ಮನಸ್ಸು ಅರಿತು ಪಾಠ ಮಾಡುವುದು, ಬೋಧನೆಗೂ ಮುನ್ನ ಪೂರ್ವತಯಾರಿ ಮಾಡಿಕೊಳ್ಳುವುದು, ಹೀಗೆ ಶಿಕ್ಷಕರ ಜ್ಞಾನದ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಡಿಡಿಪಿಐ ಎನ್‌.ಎಚ್‌.ನಾಗೂರ.

ನಿಧಾನಗತಿ ಕಲಿಕೆ ಮಕ್ಕಳ ಗುರುತಿಸುವಿಕೆ

ಕಳೆದ ವರ್ಷದ 9ನೇ ತರಗತಿ ಫಲಿತಾಂಶ ಹಾಗೂ ಈ ವರ್ಷದ ಶಾಲಾ ಹಂತದ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ 3,080 ಮಕ್ಕಳನ್ನು ಗುರುತಿಸಲಾಗಿದ್ದು, ಇವರಿಗೆ ಪಾಸಿಂಗ್ ಪ್ಯಾಕೆಜ್‌ನಡಿ ವಿಶೇಷ ಒತ್ತು ನೀಡಲಾಗಿದೆ. ಮಕ್ಕಳ ಮನೋಸ್ಥೈರ್ಯ ಕುಂದದಂತೆ ಆಪ್ತಸಮಾಲೋಚನೆಯ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವಂತೆ ತಯಾರು ಮಾಡಲಾಗುತ್ತಿದೆ ಎಂದು ಡಿಡಿಪಿಐ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT