ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಶೇ 30ರಷ್ಟು ಅಧಿಕ ಸುರಿದ ಮಳೆ

ವಾಡಿಕೆಗಿಂತ ಕಡಿಮೆ ಎಲ್ಲೂ ಇಲ್ಲ * ಮಾಯಕೊಂಡ ಹೋಬಳಿ ಅತ್ಯಧಿಕ, ಹರಿಹರ, ಚನ್ನಗಿರಿ ಹೋಬಳಿ ಕನಿಷ್ಠ
Last Updated 21 ಅಕ್ಟೋಬರ್ 2020, 4:42 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಈ ವರ್ಷ ಯಾವುದೇ ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿಲ್ಲ. ಶೇ 30ರಷ್ಟು ಅಧಿಕ ಮಳೆಯಾಗಿದೆ. ಎಲ್ಲ 20 ಹೋಬಳಿಗಳಲ್ಲಿಯೂ ವಾಡಿಕೆಗಿಂತ ಹೆಚ್ಚು ಸುರಿದಿದೆ. ಅದರಲ್ಲಿ ಮಾಯಕೊಂಡ ಹೋಬಳಿ ಮೊದಲ ಸ್ಥಾನದಲ್ಲಿದ್ದರೆ ಹರಿಹರ ಮತ್ತು ಚನ್ನಗಿರಿ ಹೋಬಳಿಗಳು ಕೊನೇ ಸ್ಥಾನದಲ್ಲಿವೆ.

ಜಿಲ್ಲೆಯಲ್ಲಿ ಅಧಿಕ ಮಳೆ ಬೀಳುವ ತಾಲ್ಲೂಕು ಎಂದು ಚನ್ನಗಿರಿಯನ್ನು ಗುರುತಿಸಲಾಗುತ್ತದೆ. ಅಕ್ಟೋಬರ್‌ 19ರ ವರೆಗೆ ಅಲ್ಲಿ 740 ಮಿಲಿಮೀಟರ್‌ ಮಳೆಯಾಗಬೇಕು. ಚನ್ನಗಿರಿ, ಉಬ್ರಾಣಿ, ಬಸವಾಪಟ್ಟಣ–1,2, ಸಂತೇಬೆನ್ನೂರು–1,2 ಹೀಗೆ ಆರು ಹೋಬಳಿಗಳನ್ನು ಹೊಂದಿರುವ ಈ ತಾಲ್ಲೂಕಿನಲ್ಲಿ ಈ ಬಾರಿ 751 ಮಿಲಿಮೀಟರ್‌ ಆಗಿದೆ. ಉಳಿದ ತಾಲ್ಲೂಕುಗಳಲ್ಲಿ ಸುರಿದ ಹಾಗೆ ಇಲ್ಲಿ ವಾಡಿಕೆಗಿಂತ ಭಾರಿ ಮಳೆ ಸುರಿದಿಲ್ಲ. ಶೇ 2ರಷ್ಟು ಮಾತ್ರ ಹೆಚ್ಚಾಗಿದೆ.

ಪ್ರತಿ ಬಾರಿ ಮಳೆ ಕೊರತೆಯಾಗುವ ತಾಲ್ಲೂಕು ಎಂದು ಜಗಳೂರನ್ನು ಗುರುತಿಸಲಾಗುತ್ತದೆ. ಬಹುತೇಕ ವರ್ಷಗಳಲ್ಲಿ ಬರಪೀಡಿತ ಪಟ್ಟಿಯಲ್ಲಿ ಇರುವ ತಾಲ್ಲೂಕು ಇದು. ಈ ಬಾರಿ ಅಧಿಕ ಮಳೆ ಬಿದ್ದಿರುವ ತಾಲ್ಲೂಕು ಕೂಡ ಇದೇ ಆಗಿದೆ. ವಾಡಿಕೆಯಂತೆ 453 ಮಿಲಿಮೀಟರ್‌ ಮಳೆಯಾಗಬೇಕು. ಈ ಬಾರಿ 687 ಮಿಲಿಮೀಟರ್‌ ಮಳೆಯಾಗಿದೆ. ಜಗಳೂರು, ಸೊಕ್ಕೆ ಮತ್ತು ಬಿಳಿಚೋಡು ಹೋಬಳಿಗಳು ಇಲ್ಲಿವೆ. ಅದರಲ್ಲಿ ಬಿಳಿಚೋಡಿನಲ್ಲಿ ಶೇ 56ರಷ್ಟು ಅಧಿಕ ಮಳೆಯಾಗಿದೆ.

ಮಾಯಕೊಂಡ (ಶೇ 63), ಆನಗೋಡು (ಶೇ 58), ಬಿಳಿಚೋಡು (ಶೇ 56) ಶೇ 50ಕ್ಕಿಂತ ಅಧಿಕ ಮಳೆ ಬಿದ್ದ ಹೋಬಳಿಗಳಾಗಿವೆ. ಚನ್ನಗಿರಿ (ಶೇ 5), ಹರಿಹರ (ಶೇ 5) ಮತ್ತು ಸಂತೇಬೆನ್ನೂರು–2 ಹೋಬಳಿಗಳು ಶೇ 10ರೊಳಗೆ ಅಧಿಕ ಮಳೆಯಾದ ಹೋಬಳಿಗಳಾಗಿವೆ.

ಈ ವರ್ಷ ಜನವರಿ, ಫೆಬ್ರುವರಿಯಲ್ಲಿ ಮಳೆ ಸುರಿದಿಲ್ಲ. ಮಾರ್ಚ್‌, ಏಪ್ರಿಲ್‌ನಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಜೂನ್‌ನಿಂದ ವಾಡಿಕೆ ಮೀರಿದ್ದು, ಈಗಲೂ ನಿಂತಿಲ್ಲ.

‘ಈ ಬಾರಿ ಮಳೆ ಉತ್ತಮವಾಗಿ ಬಂದಿದೆ. ಅಲ್ಲದೇ ಇನ್ನೂ ಬರುತ್ತಲೇ ಇದೆ. ಇದರಿಂದಾಗಿ ಅಂತರ್ಜಲ ಹೆಚ್ಚಾಗುತ್ತದೆ. ಮುಂದಿನ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಜಿಲ್ಲೆಯಲ್ಲಿ ನಿರಂತರ ಮಳೆ ಬಂದಿದೆ. ಆದರೆ ಮನೆಮಠ ಕೊಚ್ಚಿಕೊಂಡು ಹೋಗುವ ರೀತಿಯಲ್ಲಿ ಭಾರಿ ಮಳೆ ಬಂದಿಲ್ಲ. ಹಾಗಾಗಿ ಭಾರಿ ನಷ್ಟ ಕೂಡ ಈ ವರ್ಷ ಉಂಟಾಗಿಲ್ಲ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್‌ ವಿ. ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕುವಾರು ಮಳೆ ವಿವರ (ಜನವರಿ 1ರಿಂದ ಅಕ್ಟೋಬರ್‌19)

ತಾಲ್ಲೂಕು ವಾಡಿಕೆಮಳೆ (ಮಿ.ಮೀ.) ಈ ಬಾರಿ ಮಳೆ ಶೇಕಡಾವಾರು ಹೆಚ್ಚಳ

ಜಗಳೂರು 453 687 52

ಹೊನ್ನಾಳಿ 563 760 35

ದಾವಣಗೆರೆ 555 729 31

ನ್ಯಾಮತಿ 737 854 16

ಹರಿಹರ 545 628 15

ಚನ್ನಗಿರಿ 740 751 2

ಜಿಲ್ಲೆಯಲ್ಲಿ 575 748 30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT