ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ತಿಂದರೆ ಕೋವಿಡ್-19 ಬರುವುದಿಲ್ಲ: ಕೃಷ್ಣ ಎಸ್‌. ಸುವರ್ಣ

Last Updated 17 ಮಾರ್ಚ್ 2020, 14:08 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಪರಿಣಾಮ ಮೀನುಗಾರಿಕೆಯ ಮೇಲೆ ಅಷ್ಟಾಗಿ ಬಿದ್ದಿಲ್ಲ. ಆದರೆ, ಜಾಲತಾಣಗಳಲ್ಲಿ ಮೀನಿನಲ್ಲಿ ಕೊರೊನಾ ವೈರಸ್‌ ಇದೆ ಎಂಬ ಅಪಪ್ರಚಾರ ನಡೆಯುತ್ತಿದೆ ಎಂದು ಮಲ್ಪೆ ಮಿನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್‌. ಸುವರ್ಣ ಹೇಳಿದರು.

ಮಲ್ಪೆ ಬಂದರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮೀನಿನ ಬಗ್ಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಲ್ಪೆ ಬಂದರಿನಲ್ಲಿ ವಹಿವಾಟು ಎಂದಿನಂತಿದ್ದು, ಮೀನು ಖರೀದಿಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಿನ ಇಳಿಕೆಯಾಗಿಲ್ಲ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಮೀನು ರಫ್ತಾಗುತ್ತಿದೆ. ಮಾರುಕಟ್ಟೆಗಳಿಗೂ ಮೀನು ಸಾಗಾಟವಾಗುತ್ತಿದೆ ಎಂದು ತಿಳಿಸಿದರು.

ವದಂತಿಗೆ ಕಿವಿಗೊಡಬೇಡಿ

ಮೀನುಗಳು ಸಮುದ್ರದ ಆಳದಲ್ಲಿ ದೊರೆಯುವುದರಿಂದ ಸೋಂಕು ತಗಲುವ ಸಾಧ್ಯತೆ ಕಡಿಮೆ. ತರಕಾರಿ, ಕೋಳಿ, ಕುರಿಗಳಂತೆ ಯಾವುದೇ ರಾಸಾಯನಿಕಗಳಿಂದ ಮೀನುಗಳು ಬೆಳೆಯುವುದಿಲ್ಲ ಎಂದರು.

ಹಿಂದೆ, ಮೀನಿನಲ್ಲಿ ರಾಸಾಯನಿಕ ಬಳಕೆಯಾಗುತ್ತಿದೆ ಎಂಬ ವದಂತಿ ಹಬ್ಬಿತ್ತು. ಮೀನುಗಳ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ನೆಗೆಟಿವ್‌ ಬಂದಿದೆ. ಮೀನುಗಾರಿಕೆ ಇಲಾಖೆಯೇ ಬಂದರಿನಲ್ಲಿ ಮೀನಿನ ಪರೀಕ್ಷೆ ನಡೆಸಿದ್ದು, ರಾಸಾಯನಿಕ ಕಂಡುಬಂದಿಲ್ಲ. ಜನರು ನಿರ್ಭಿತಿಯಿಂದ ಮೀನು ಸೇವಿಸಬಹುದು. ವದಂತಿಗೆ ಕಿವಿಗೊಡಬಾರದು ಎಂದರು.

ಮತ್ಸ್ಯಕ್ಷಾಮ, ಹವಾಮಾನ ವೈಪರೀತ್ಯ ಹೀಗೆ ಹಲವು ಕಾರಣಗಳಿಂದ ಮೀನುಗಾರಿಕೆ ಶೇ 80ರಷ್ಟು ನಷ್ಟ ಅನುಭವಿಸಿದೆ. ಮೀನುಗಾರಿಕೆ ಪೂರ್ಣ ಪ್ರಮಾಣದಲ್ಲಿ ನಡೆಯದ ಪರಿಣಾಂ ಶೇ 35ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿವೆ ಎಂದರು.

ಬಂದರಿನಲ್ಲಿ ಕೊರೊನಾ ಜಾಗೃತಿ

ಮಲ್ಪೆ ಮೀನುಗಾರರ ಸಂಘ ಹಾಗೂ ಮೀನುಗಾರಿಕಾ ಇಲಾಖೆ ಜಂಟಿಯಾಗಿ ಈಗಾಗಲೇ ಕೊರೊನಾ ಸೋಂಕು ಕುರಿತು ಬಂದರಿನಲ್ಲಿ ಮೀನುಗಾರರಿಗೆ ಜಾಗೃತಿ ಮಾಡಿಸಿದೆ. ರೋಗ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಬಂದರಿನಲ್ಲಿ ಬ್ಯಾನರ್‌ ಅಳವಡಿಕೆ ಹಾಗೂ ಮೀನುಗಾರರಿಗೆ, ಗ್ರಾಹಕರಿಗೆ ಕರಪತ್ರ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೇರಳಕ್ಕೆ ಹೋಗಬೇಡಿ: ಸೂಚನೆ

ಕೇರಳದಲ್ಲಿ ಕೊರೊನಾ ಸೋಂಕು ಪತ್ತೆಯಾದ ಕೂಡಲೇ ಕೇರಳಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಕೇರಳದ ಬಂದರಿನಲ್ಲಿ ಬೋಟ್‌ ನಿಲ್ಲಿಸದಂತೆ ತಿಳಿಸಲಾಗಿದೆ. ಕೇರಳದ ಬೋಟ್‌ಗಳು ಬಂದರೂ ಒಂದು ಕಿ.ಮೀ ದೂರದಿಂದಲೇ ಅವರೊಂದಿಗೆ ವಯರ್‌ಲೆಸ್‌ ಮೂಲಕ ಸಂವಹನ ನಡೆಸಬೇಕು ಎಂಬ ಮುನ್ಸೂಚನೆ ನೀಡಲಾಗಿದೆ ಎಂದು ಕೃಷ್ಣ ಸುವರ್ಣ ತಿಳಿಸಿದರು.

ಮಲ್ಪೆ ಬಂದರಿನಲ್ಲಿ 1,800 ಯಾಂತ್ರೀಕೃತ ಬೋಟ್‌ಗಳಿದ್ದು, ಅದರಲ್ಲಿ 1000 ಆಳಸಮುದ್ರ ಬೋಟ್‌, 150 ಪರ್ಸಿನ್‌, 250 ಸಣ್ಣ ಟ್ರಾಲ್‌ ಬೋಟ್‌, 500 ತ್ರೀಸೆವೆಂಟಿ ಬೋಟ್‌ ಹಾಗೂ 400 ನಾಡದೋಣಿಗಳಿವೆ. 2 ಸಾವಿರ ಮಹಿಳಾ ಮೀನು ಮಾರಾಟಗಾರರಿದ್ದಾರೆ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್‌ ಮೆಂಡನ್‌, ಕೋಶಾಧಿಕಾರಿ ಶಿವಾನಂದ ಕುಂದರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT