ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ| ಸಮೃದ್ಧ ಮೀನು ಸಿಗಲಿ: ಬೆಲೆಯೂ ದೊರೆಯಲಿ

ಇಂದಿನಿಂದ ಆಳಸಮುದ್ರ ಮೀನುಗಾರಿಕೆ ಆರಂಭ: ಭಾನುವಾರ ಮಾರಿಪೂಜೆ ಸಂಪನ್ನ
Published 7 ಆಗಸ್ಟ್ 2023, 6:59 IST
Last Updated 7 ಆಗಸ್ಟ್ 2023, 6:59 IST
ಅಕ್ಷರ ಗಾತ್ರ

ಉಡುಪಿ: 2 ತಿಂಗಳ ಕಾಲ ಸ್ತಬ್ಧವಾಗಿದ್ದ ಆಳ ಸಮುದ್ರ ಮೀನುಗಾರಿಕೆ ಆ.7ರಿಂದ ಆರಂಭವಾಗುತ್ತಿದ್ದು, ಮತ್ಸ್ಯಬೇಟೆಗೆ ಇಳಿಯಲು ಕಡಲ ಮಕ್ಕಳು ಸಜ್ಜಾಗಿದ್ದಾರೆ. ಸಂಪ್ರದಾಯದಂತೆ ಭಾನುವಾರ ಮಲ್ಪೆಯ ಕಲ್ಮಾಡಿಯ ಭಗವತಿ ದೇವಿಯ ದೇವಸ್ಥಾನದಲ್ಲಿ ಸಮಸ್ತ ಮೀನುಗಾರರು, ಮೀನುಗಾರರರ ಸಂಘಗಳ ಪ್ರಮುಖರು ಶ್ರದ್ಧಾಭಕ್ತಿಯಿಂದ ಮಾರಿ ಪೂಜೆ ನೆರವೇರಿಸಿದರು. ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಸಮೃದ್ಧಿಯಾಗಿ ಮೀನು ಸಿಗಲಿ ಎಂದು ಪ್ರಾರ್ಥಿಸಿದರು.

ಮಲ್ಪೆ ಬಂದರಿನಲ್ಲಿ ಜೀವಕಳೆ: ಆಳಸಮುದ್ರ ಮೀನುಗಾರಿಕೆ ನಿರ್ಬಂಧದಿಂದಾಗಿ ಕಳೆಗುಂದಿದ್ದ ಮಲ್ಪೆ ಬಂದರಿನಲ್ಲಿ ಮತ್ತೆ ಜೀವ ಕಳೆ ತುಂಬಿದೆ. ಸದ್ದು ನಿಲ್ಲಿಸಿದ್ದ ಐಸ್‌ ಪ್ಲಾಂಟ್‌ಗಳು, ಫಿಶ್‌ ಮಿಲ್‌ಗಳು ಸದ್ದು ಮಾಡಲಾರಂಭಿಸಿವೆ. ಮತ್ಸ್ಯೋದ್ಯಮದ ಮೇಲೆ ಅವಲಂಬಿತವಾಗಿರುವ ಸಣ್ಣ ಸಣ್ಣ ಉದ್ದಿಮೆಗಳು ಪುನಾರಂಭವಾಗಿವೆ. ಹೊರ ರಾಜ್ಯ, ಜಿಲ್ಲೆಗಳಿಗೆ ಮೀನುಗಳನ್ನು ಹೊತ್ತೊಯ್ಯಲು ಬಂದರಿನಲ್ಲಿ ವಾಹನಗಳು ತಯಾರಾಗಿ ನಿಂತಿವೆ. ತವರಿಗೆ ತೆರಳಿದ್ದ ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಮತ್ತೆ ಮಲ್ಪೆಯತ್ತ ಮುಖ ಮಾಡಿದ್ದು ಬಂದರು ಗಿಜಿಗಿಡುತ್ತಿದೆ.

ಮೀನುಗಾರಿಕೆಗೆ ತಯಾರಿ: 2 ತಿಂಗಳ ನಿಷೇಧದ ಅವಧಿಯಲ್ಲಿ ಬೋಟ್‌ಗಳು ಹಾಗೂ ಬಲೆಗಳ ದುರಸ್ತಿ ಮಾಡಿಕೊಂಡಿರುವ ಮೀನುಗಾರರು ಸಮುದ್ರಕ್ಕಿಳಿಯಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಬೋಟ್‌ಗಳ ಮುರಿದ ಹಲಗೆಗಳನ್ನು ಬದಲಿಸುವುದು, ಯಂತ್ರಗಳ ರಿಪೇರಿ, ಬೋಟ್‌ಗಳಿಗೆ ಬಣ್ಣ ಬಳಿದು ಸಿಂಗಾರ ಮಾಡಿಕೊಂಡಿದ್ದಾರೆ. 

ಆಳಸಮುದ್ರ ಮೀನುಗಾರಿಕೆಗೆ ಅಗತ್ಯವಿರುವ ಮಂಜುಗಡ್ಡೆಗಳನ್ನು ಬೋಟ್‌ಗಳಿಗೆ ತುಂಬಿಸುತ್ತಿದ್ದ ದೃಶ್ಯ ‌ಬಂದರಿನಲ್ಲಿ ಕಂಡುಬಂತು. ಸೋಮವಾರದಿಂದ ಹಂತ ಹಂತವಾಗಿ ಮಲ್ಪೆಯ ದಕ್ಕೆಯಿಂದ ಬೋಟ್‌ಗಳು ಆಳಸಮುದ್ರ ಮೀನುಗಾರಿಕೆಗೆ ತೆರಳಲಿದ್ದು ಈ ಬಾರಿ ಉತ್ತಮ ಮೀನು ಲಭ್ಯವಾಗುವ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಋತು ಹೇಗಿತ್ತು: 2020 ಹಾಗೂ 2021ರಲ್ಲಿ ಕೋವಿಡ್‌ನಿಂದಾಗಿ ನಿರೀಕ್ಷಿತ ಅವಧಿಯ ಆಳ ಸಮುದ್ರ ಮೀನುಗಾರಿಕೆ ನಡೆದಿರಲಿಲ್ಲ. ಪರಿಣಾಮ 2022ರಲ್ಲಿ ಉತ್ತಮ ಮತ್ಸ್ಯಸಂಪತ್ತು ಲಭ್ಯವಾಗಿತ್ತು. ಮೀನುಗಾರಿಕಾ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2019–20ರಲ್ಲಿ 1,21,479 ಟನ್‌, 2020–21ರಲ್ಲಿ 1,04,453 ಟನ್‌, 2021–22ರಲ್ಲಿ 1,80,035 ಟನ್‌ ಹಾಗೂ 2022–23ರಲ್ಲಿ 2,12,081 ಟನ್ ಮೀನಿನ ಉತ್ಪಾದನೆಯಾಗಿದೆ. ಅಂದರೆ ಕೋವಿಡ್ ಅವಧಿಗಿಂತಲೂ ದುಪ್ಪಟ್ಟು ಮೀನು ಕಳೆದ ವರ್ಷ ದಕ್ಕಿದೆ.

ಮೀನು ಸಿಕ್ಕರೂ ದರ ಸಿಗಲಿಲ್ಲ: ನಿರೀಕ್ಷೆಯಷ್ಟು ಮೀನು ಸಿಕ್ಕರೂ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯದ ಪರಿಣಾಮ ಹಾಗೂ ಡೀಸೆಲ್‌ ದರ ಭಾರಿ ಏರಿಕೆಯಾದ ಪರಿಣಾಮ ಮೀನುಗಾರರಿಗೆ ಲಾಭ ದೊರೆಯಲಿಲ್ಲ. ಹೆಚ್ಚು ರಫ್ತಾಗುವ, ಬೆಲೆಯೂ ಹೆಚ್ಚಾಗಿರುವ ಅಂಜಲ್‌, ಪಾಂಪ್ಲೆಟ್‌, ಕಿಂಗ್ ಪ್ರಾನ್ಸ್‌ನಂತಹ ಜಾತಿಯ ಮೀನುಗಳು ದೊರೆಯಲಿಲ್ಲ. ಹೇರಳವಾಗಿ ಸಿಕ್ಕ ಬಂಗುಡೆ ಮೀನನ್ನು ಕೊಳ್ಳುವವರು ಇಲ್ಲದೆ ತೀರಾ ಕಡಿಮೆ ಬೆಲೆಗೆ ಫಿಶ್‌ಮಿಲ್‌ಗೆ ಮಾರಾಟ ಮಾಡಲಾಯಿತು ಎನ್ನುತ್ತಾರೆ ಮೀನುಗಾರರು.

ಪ್ರಮುಖ ಬೇಡಿಕೆಗಳು ಏನು? ಬೆಂಬಲ ಬೆಲೆಯಲ್ಲಿ ರೈತರಿಂದ ಭತ್ತ, ರಾಗಿ, ಬೇಳೆಕಾಳುಗಳನ್ನು ಖರೀದಿಸುವಂತೆ ಮೀನುಗಾರರಿಂದಲೂ ಬೆಂಬಲ ಬೆಲೆಯಲ್ಲಿ ಮೀನು ಖರೀದಿ ಮಾಡಬೇಕು. ಇದರಿಂದ ಮಾರುಕಟ್ಟೆಯಲ್ಲಿ ಮೀನಿನ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು. ಮೀನುಗಾರರಿಗೂ ಹಾಗೂ ಗ್ರಾಹಕರಿಗೂ ಲಾಭವಾಗಲಿದೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.

500 ಲೀ ಡೀಸೆಲ್ ಕೊಡಿ: ಆಳ ಸಮುದ್ರ ಮೀನುಗಾರಿಕೆಗೆ ಡೀಸೆಲ್ ಪ್ರಮಾಣವನ್ನು 300 ರಿಂದ 500 ಲೀಗೆ ಹೆಚ್ಚಿಸಬೇಕು. ನಾಡದೋಣಿಗಳಿಗೂ ಕಾಲಕಾಲಕ್ಕೆ ಸೀಮೆಎಣ್ಣೆ ವಿತರಿಸಬೇಕು.

ಬಂದರು ವಿಸ್ತರಿಸಿ: ಬಂದರಿನ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಹೆಚ್ಚು ಬೋಟ್‌ಗಳು ದಕ್ಕೆಯಲ್ಲಿ ನಿಲ್ಲುತ್ತಿರುವುದರಿಂದ ವಿಪರೀತ ದಟ್ಟಣೆಯಾಗಿದೆ. ಬೋಟ್‌ ನಿಲ್ಲಿಸಲು ಜಾಗ ಸಿಗುತ್ತಿಲ್ಲ. ಗರಿಷ್ಠ 1 ಸಾವಿರ ಬೋಟ್‌ಗಳನ್ನು ನಿಲ್ಲಿಸಬಹುದಾದ ಜಾಗದಲ್ಲಿ 3 ಸಾವಿರಕ್ಕೂ ಹೆಚ್ಚು ಬೋಟ್‌ಗಳು ನಿಲ್ಲುತ್ತಿವೆ. ಈ ಸಮಸ್ಯೆಗೆ ಪರಿಹಾರವಾಗಿ ಬಂದರಿನ ವಿಸ್ತರಣೆ ಮಾಡಬೇಕು, ಪಡುಕರೆಯಲ್ಲಿ 1 ಸಾವಿರ ಮೀಟರ್‌ ಜೆಟ್ಟಿ ನಿರ್ಮಿಸಬೇಕು, ನಾಡದೋಣಿಗಳ ನಿಲುಗಡೆಗೆ ಪ್ರತ್ಯೇಕ ಜೆಟ್ಟಿ ನಿರ್ಮಿಸಬೇಕು.

ಮಲ್ಪೆ ಬಂದರಿನಲ್ಲಿ ಒಳಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ. ಚರಂಡಿಯ ತ್ಯಾಜ್ಯ ರಸ್ತೆಗೆ ಹರಿಯುತ್ತಿದೆ. ಸುವ್ಯವಸ್ಥಿತ ಒಳಚರಂಡಿ ನಿರ್ಮಾಣ ಮಾಡಬೇಕು, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ, ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಬೇಕು. ಮಲ್ಪೆಯ ರಸ್ತೆ ಸಂಪೂರ್ಣ ಹಾಳಾಗಿದ್ದು ತಾತ್ಕಾಲಿಕವಾಗಿ ಗುಂಡಿ ಮುಚ್ಚಬೇಕು ಎನ್ನುತ್ತಾರೆ ಮುಖಂಡರಾದ ದಯಾನಂದ ಸುವರ್ಣ.

ಸೀ ಆಂಬುಲೆನ್ಸ್‌ ಕೊಡಿ:

ನಾಡದೋಣಿ ಹಾಗೂ ಆಳಸಮುದ್ರ ಮೀನುಗಾರಿಕೆಗೆ ತೆರಳಿದಾಗ ಅನಾರೋಗ್ಯ ಕಾಡಿದರೆ, ತುರ್ತು ಅವಘಡಗಳು ಉಂಟಾದರೆ ನೆರವಿಗೆ ಧಾವಿಸಲು ಯಾವುದೇ ವ್ಯವಸ್ಥೆ ಇಲ್ಲ. ತುರ್ತು ಚಿಕಿತ್ಸಾ ಸೌಲಭ್ಯ ಒಳಗೊಂಡಿರುವ ಸೀ ಆಂಬುಲೆನ್ಸ್‌ ಸೌಲಭ್ಯ ನೀಡಿದರೆ ಬಹಳಷ್ಟು ಮೀನುಗಾರರ ಹಾಗೂ ಕೂಲಿ ಕಾರ್ಮಿಕರ ಜೀವ ಉಳಿಯಲಿದೆ.

ಬಂದರು ಹೂಳೆತ್ತಿ:

ಬಂದರು ಹೂಳೆತ್ತದ ಪರಿಣಾಮ ನೂರಾರು ಮಂದಿ ಆಯತಪ್ಪಿ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ಹೂಳಿನಡಿ ಸಿಲುಕಿ ಮೃತಪಡುತ್ತಿದ್ದಾರೆ. ನಿಯಮಿತವಾಗಿ ಬಂದರು ಹೂಳೆತ್ತಿದರೆ ಮೀನುಗಾರರ ಜೀವ ಉಳಿಯಲಿದೆ. ಜತೆಗೆ ಬೋಟ್‌ಗಳು ದಕ್ಕೆಯೊಳಗೆ ಸರಾಗವಾಗಿ ಬರಲು, ಹೊರಹೋಗಲು ಅನುಕೂಲವಾಗಲಿದೆ ಎನ್ನುತ್ತಾರೆ ಮೀನುಗಾರ ಮುಖಂಡರು.

ಮಲ್ಪೆ ಬಂದರಿನಲ್ಲಿ ಮೀನುಗಾರ ಮಹಿಳೆಯರು ಬಲೆಯಿಂದ ಮೀನು ಹೆಕ್ಕುತ್ತಿರುವ ದೃಶ್ಯ
ಮಲ್ಪೆ ಬಂದರಿನಲ್ಲಿ ಮೀನುಗಾರ ಮಹಿಳೆಯರು ಬಲೆಯಿಂದ ಮೀನು ಹೆಕ್ಕುತ್ತಿರುವ ದೃಶ್ಯ
ಮಲ್ಪೆ ಬಂದರಿನ ಚರಂಡಿ ಸಂಪೂರ್ಣವಾಗಿ ಹಾಳಾಗಿರುವುದು
ಮಲ್ಪೆ ಬಂದರಿನ ಚರಂಡಿ ಸಂಪೂರ್ಣವಾಗಿ ಹಾಳಾಗಿರುವುದು
ದಯಾನಂದ ಸುವರ್ಣ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ದಯಾನಂದ ಸುವರ್ಣ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ಮೀನುಗಾರಿಕೆಗೆ ಬಳಸುವ ಐಸ್‌
ಮೀನುಗಾರಿಕೆಗೆ ಬಳಸುವ ಐಸ್‌

ಮೀನುಗಾರಿಕೆಯ ಅವಧಿ ಪ್ರತಿ ವರ್ಷ ಜೂನ್ 1ರಿಂದ ಜುಲೈ ಅಂತ್ಯದವರೆಗೂ ಆಳಸಮುದ್ರ ಮೀನುಗಾರಿಕೆ ನಿಷಿದ್ಧ. ಆ.1ರಿಂದ ಮೀನುಗಾರಿಕಾ ಋತು ಆರಂಭವಾಗಲಿದ್ದು ಮುಂದಿನ 10 ತಿಂಗಳು ಆಳ ಸಮುದ್ರ ಮೀನುಗಾರಿಕೆಗೆ ಅನುಮತಿ ಇದೆ. ಮಧ್ಯೆ ಚಂಡಮಾರುತಗಳು ಬೀಸಿದಾಗ ಮೀನುಗಾರಿಕೆಗೆ ತೆರಳುವಂತಿಲ್ಲ.

‘ಸಬ್ಸಿಡಿ ಡೀಸೆಲ್ ವಿತರಣೆ’ ಆ.1ರಿಂದ ಮೀನುಗಾರಿಕಾ ಋತು ಆರಂಭವಾಗಿದೆ. ಮೀನುಗಾರರಿಗೆ ಡೆಲಿವರಿ ಪಾಯಿಂಟ್‌ನಲ್ಲಿ ಡೀಸೆಲ್ ವಿತರಿಸಲಾಗುತ್ತಿದ್ದು ಲೀಟರ್‌ಗೆ ₹ 10.97 ಸಬ್ಸಿಡಿ ದೊರೆಯುತ್ತಿದೆ. ನಾಡದೋಣಿಗಳಿಗೆ ವಾರ್ಷಿಕವಾಗಿ 300 ಲೀಟರ್ ಸೀಮೆಎಣ್ಣೆ ಆಳಸಮುದ್ರ ಮೀನುಗಾರಿಕಾ ಬೋಟ್‌ಗಳಿಗೆ ಗರಿಷ್ಠ 300 ಲೀಟರ್ ಸಬ್ಸಿಡಿ ಡೀಸೆಲ್‌ ನೀಡಲಾಗುತ್ತಿದೆ. ಮೀನುಗಾರಿಕಾ ಇಲಾಖೆಯಿಂದ ಹವಾಮಾನ ವೈಪರೀತ್ಯಗಳ ಬಗ್ಗೆ ನಿರಂತರವಾಗಿ ಎಚ್ಚರಿಕೆ ನೀಡುವ ವ್ಯವಸ್ಥೆ ಇದೆ. ಜತೆಗೆ ಮೀನಿನ ಲಭ್ಯತೆಯ ಸ್ಥಳಗಳನ್ನೂ ಮೀನುಗಾರರಿಗೆ ತಿಳಿಸಲಾಗುತ್ತಿದೆ ಎನ್ನುತ್ತಾರೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಆರ್‌.ವಿವೇಕ್‌.

‘ಮೀನುಗಾರಿಕೆಗೆ ಬೇಕು ಲಕ್ಷ ಲಕ್ಷ ಬಂಡವಾಳ’ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಒಂದು ಬೋಟ್‌ಗೆ 6000 ಲೀಟರ್‌ ಬೇಕು. ಸಬ್ಸಿಡಿಯಲ್ಲಿ ಡೀಸೆಲ್ ಖರೀದಿಸಿದರೂ ಕನಿಷ್ಠ ₹ 4.50 ಲಕ್ಷ ಖರ್ಚಾಗುತ್ತದೆ. ಕಾರ್ಮಿಕರಿಗೆ 10 ರಿಂದ 15 ದಿನಗಳಿಗೆ ಕೂಲಿ ಆಹಾರ ಮಂಜುಗಡ್ಡೆ ಸೇರಿ ₹ 1.25 ಲಕ್ಷ ಖರ್ಚಾಗುತ್ತದೆ. ಕನಿಷ್ಠ ₹ 6.50ಲಕ್ಷ ಮೌಲ್ಯದ ಮೀನು ಸಿಕ್ಕರೆ ಲಾಭ ನೋಡಬಹುದು. ಬಹಳಷ್ಟು ಸಲ ಹಾಕಿದ ಬಂಡವಾಳವೂ ಮೀನುಗಾರರಿಗೆ ಸಿಗುವುದಿಲ್ಲ ಎಂದು ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT