ಭಾನುವಾರ, ಆಗಸ್ಟ್ 1, 2021
20 °C
ಆದಿವಾಸಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ

‘ಎಸ್‌ಟಿ ಬದಲು ಎಸ್‌ಸಿ ಪಟ್ಟಿಗೆ: ಹಸಲರಿಗೆ ಅನ್ಯಾಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯಲ್ಲಿ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಹಸಲ ಸಮುದಾಯವನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿಸಿರುವುದರಿಂದ ಸರ್ಕಾರದಿಂದ ಸಿಗಬೇಕಾದ ಪೌಷ್ಟಿಕ ಆಹಾರ, ಅರಣ್ಯ ಹಕ್ಕು, ಬುಡಕಟ್ಟು ಸಮುದಾಯಕ್ಕೆ ಮೀಸಲಿರುವ ಉದ್ಯೋಗದ ಅವಕಾಶಗಳಿಂದ ವಂಚಿತರಾಗಬೇಕಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ ನಾಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಘಟ್ಟದ ತಪ್ಪಲಿನ ಕೊಲ್ಲೂರು, ಕೆರಾಡಿಯ ಕಾರೆಬೈಲು, ಹಳ್ಳಿಹೊಳೆಯ ಕಬ್ಬಿನಾಲೆ, ದೇವರಬಾಳು ದಟ್ಟ ಕಾಡುಗಳಲ್ಲಿ ಹಸಲ ಸಮುದಾಯ ವಾಸವಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡಕ್ಕೆ ಹಸಲರನ್ನು ಸೇರಿಸಲಾಗಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಮಾತ್ರ ಇವರನ್ನು ಎಸ್‌ಸಿ ಪಟ್ಟಿಗೆ ಸೇರಿಸಲಾಗಿದ್ದು, ಮೀಸಲಾತಿ ಹಾಗೂ ಅವಕಾಶಗಳಿಂದ ದೂರವಾಗಿದ್ದಾರೆ ಎಂದು ದೂರಿದ್ದಾರೆ.

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸಲರಿಗೆ ಮಳೆಗಾಲದಲ್ಲಿ ಉಚಿತ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಉಡುಪಿಯಲ್ಲಿ ಉಚಿತ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಸರ್ಕಾರ ಆದಿವಾಸಿ ಜನಾಂಗಕ್ಕೆ ಮಾಡಿರುವ ಅನ್ಯಾಯ ಇದಾಗಿದ್ದು, ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಹಸಲರ ಸಾಂಪ್ರದಾಯಿಕ ಆಹಾರ ಪದ್ದತಿ ನಶಿಸಿ ಹೋಗಿದೆ. ಆರೋಗ್ಯಯುತ ಬದುಕು ನಡೆಸುತ್ತಿರುವ ಹಸಲರಿಗೆ ಅರಣ್ಯ ನೀತಿಗಳು, ವನ್ಯಜೀವಿ ಕಾಯ್ದೆ, ಜೀವ ವೈವಿಧ್ಯತೆ ಕಾಯ್ದೆ, ಆಹಾರ ಕಾಯ್ದೆಗಳಿಂದ ಕುಲಕಸುಬು ಅವನತಿಯತ್ತ ಸಾಗಿದೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಸಮುದಾಯ ಅಪೌಷ್ಟಿಕತೆಯಿಂದ ಬಳಲುತ್ತಿದೆ. ಕೋವಿಡ್ ಹಸಲರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು, ಜಿಲ್ಲಾಡಳಿತ ಹಸಲ ಸೇರಿದಂತೆ ಕೊರಗ, ಮಲೆಕುಡಿಯ, ಮರಾಠಿ ನಾಯಕ ಸಮುದಾಯಗಳ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಜಿಲ್ಲಾ ಸಂಘಟನಾ ಸಮಿತಿಯೊಂದಿಗೆ ಆದಿವಾಸಿ ಸಮುದಾಯಗಳ ನೆರವಿಗೆ ಧಾವಿಸಿದೆ. ಸರ್ಕಾರದ ಕಡೆಗಣನೆ ನೀತಿಯನ್ನು ಖಂಡಿಸಿ ಪ್ರತಿಭಟನಾ ಪ್ರತಿಕ್ರಿಯೆಯಾಗಿ ಆದಿವಾಸಿಗಳ ಗುಂಪುಗಳಿಗೆ ಅವರ ಆಹಾರದ ಹಕ್ಕುಗಳ ಕುರಿತು ಜಾಗೃತಿ ಮೂಡಿಸುತ್ತಿದೆ.

ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ದಾನಿಗಳ ನೆರವಿನಿಂದ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಭಾಗವಾಗಿ ಗುರುವಾರ ಜಿಲ್ಲೆಯ 150 ಆದಿವಾಸಿ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಯಿತು. ಜತೆಗೆ ಕೋವಿಡ್ ಲಸಿಕೆ ಪಡೆಯುವಂತೆ, ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು ಎಂದು ತಿಳಿಸಿದ್ದಾರೆ.

ಸಿಐಟಿಯು ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಸುರೇಶ್ ಕಲ್ಲಾಗರ್, ನರಸಿಂಹ ಆಚಾರ್ ಕೊಲ್ಲೂರು, ಮಹಾದೇವ ಹಸಲ, ಪ್ರಕಾಶ, ಸುಭಾಶ್, ಸುಧಾಕರ, ಸುರೇಶ್, ಸಂಜು ಕಾರೆಬೈಲು, ಮೂರ್ತಿ ಕಬ್ಬಿನಾಲೆ, ಬೇಬಿ ಕತ್ತಲಕೊಡು, ಶಿವರಾಜ್ ನಾಡ ಕಿಟ್ ವಿತರಣೆಗೆ ಸಹಕರಿಸಿದರು ಎಂದು ಶ್ರೀಧರ್ ನಾಡ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು