ಗುರುವಾರ , ಮಾರ್ಚ್ 30, 2023
32 °C
ಜಿಲ್ಲೆಯಲ್ಲಿ ಭತ್ತ ಕಟಾವು ಆರಂಭವಾಗಿ ತಿಂಗಳಾದರೂ ತೆರೆಯದ ಭತ್ತ ಖರೀದಿ ಕೇಂದ್ರ

ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರಾವಳಿಯಲ್ಲಿ ಭತ್ತದ ಕಟಾವು ಆರಂಭವಾಗಿ ತಿಂಗಳು ಕಳೆದರೂ ರಾಜ್ಯ ಸರ್ಕಾರ ಬೆಂಬಲ ಬೆಲೆಯಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಪಾತಾಳಕ್ಕೆ ಕುಸಿದಿದ್ದು, ಮಿಲ್ ಮಾಲೀಕರು, ದಲ್ಲಾಳಿಗಳು ಮನಸ್ಸಿಗೆ ತೋಚಿದಷ್ಟು ದರಕ್ಕೆ ಭತ್ತವನ್ನು ಖರೀದಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಧೋರಣೆ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಖರೀದಿ ಕೇಂದ್ರ ಆರಂಭವಾದರೆ ದರ ಹೆಚ್ಚಳ:‌ ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಭತ್ತಕ್ಕೆ ₹ 1,500 ರಿಂದ ₹ 1,600 ದರವಿದೆ. ಸರ್ಕಾರ ಕ್ವಿಂಟಲ್‌ಗೆ ₹ 1,940 ಬೆಂಬಲ ಬೆಲೆ ನಿಗದಿಪಡಿಸಿದ್ದು, ಅದರಂತೆ ಖರೀದಿ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಆರಂಭಿಸಿದರೆ, ಮಾರುಕಟ್ಟೆಯಲ್ಲಿ ಏಕಾಏಕಿ ಭತ್ತದ ದರ ಹೆಚ್ಚಳವಾಗಲಿದೆ ಎನ್ನುತ್ತಾರೆ ರೈತ ಮುಖಂಡರು.

ಖರೀದಿ ಕೇಂದ್ರಗಳನ್ನು ತೆರೆಯಲು ತಡ ಮಾಡಿದರೆ ಜಿಲ್ಲೆಯಲ್ಲಿ ಭತ್ತದ ಕಟಾವು ಮುಗಿಯುತ್ತದೆ. ರೈತರು ಕಷ್ಟಪಟ್ಟು ಬೆಳೆದ ಭತ್ತ ಕಡಿಮೆ ದರಕ್ಕೆ ಮಿಲ್‌ ಮಾಲೀಕರ ಹಾಗೂ ದಲ್ಲಾಳಿಗಳ ಗೋಡೋನ್ ಸೇರಲಿದೆ. ಸುಗ್ಗಿ ಮುಗಿದ ಮೇಲೆ ಖರೀದಿ ಕೇಂದ್ರ ತೆರೆದರೆ ರೈತರ ಬದಲಾಗಿ, ಮಿಲ್ ಮಾಲೀಕರಿಗೆ ದಲ್ಲಾಳಿಗಳಿಗೆ ಸರ್ಕಾರವೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ ರೈತರು.

ಕರಾವಳಿಗೆ ಪ್ರತ್ಯೇಕ ನೀತಿ ಅಗತ್ಯ: ರಾಜ್ಯ ಸರ್ಕಾರ ಮಲೆನಾಡು, ಬಯಲುಸೀಮೆ ಹಾಗೂ ಕರಾವಳಿ ರೈತರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. ಸಾಮಾನ್ಯವಾಗಿ ರಾಜ್ಯದ ಇತರ ಭಾಗಗಳಿಗಿಂತ ಕರಾವಳಿಯಲ್ಲಿ ನಾಟಿ ಬೇಗ ಶುರುವಾಗುತ್ತದೆ. ಜೂನ್‌ನಲ್ಲಿ ನಾಟಿ ಆರಂಭವಾಗಿ, ಅಕ್ಟೋಬರ್‌ನಲ್ಲಿ ಕೊಯ್ಲು ಶುರುವಾಗಿ, ನವೆಂಬರ್‌ ಅಂತ್ಯಕ್ಕೆ ಸುಗ್ಗಿ ಮುಕ್ತಾಯವಾಗುತ್ತದೆ.

ಆದರೆ, ಮಲೆನಾಡು ಹಾಗೂ ಬಯಲುಸೀಮೆಯಲ್ಲಿ ಒಂದು ತಿಂಗಳು ತಡವಾಗಿ ನಾಟಿ, ಕೊಯ್ಲು ಆರಂಭವಾಗುತ್ತದೆ. ರಾಜ್ಯದ ಎಲ್ಲ ಭಾಗಗಳಲ್ಲಿ ಕೊಯ್ಲು ಆರಂಭವಾದ ಬಳಿಕ ಖರೀದಿ ಕೇಂದ್ರ ತೆರೆದರೆ, ಕರಾವಳಿಯ ರೈತರಿಗೆ ಅನ್ಯಾಯವಾಗಲಿದೆ. ಈ ನಿಟ್ಟಿನಲ್ಲಿ ಕರಾವಳಿಗೆ ಪ್ರತ್ಯೇಕ ನೀತಿ ಜಾರಿ ಅಗತ್ಯ ಎಂದು ಪ್ರತಿಪಾದಿಸುತ್ತಾರೆ ರೈತರು.

ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಹಾಕಲಾಗಿರುವ ನಿಯಮಗಳನ್ನು ಕೂಡ ಬದಲಿಸಬೇಕು. ಕರಾವಳಿಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಎಂಒ–4 ತಳಿಯನ್ನು ಖರೀದಿ ಕೇಂದ್ರಗಳಲ್ಲಿ ಖರೀದಿಸಬೇಕು. ಕರಾವಳಿಯಲ್ಲಿ ನವೆಂಬರ್‌ವರೆಗೂ ಮಳೆಗಾಲವಿರುವ ಕಾರಣ ಹಾಗೂ ಭತ್ತ ಒಣಗಿಸಲು ಸೂಕ್ತ ವ್ಯವಸ್ಥೆಯೂ ಇಲ್ಲದ್ದರಿಂದ ತೇವಾಂಶ ಸಾಮಾನ್ಯ. ಭತ್ತದಲ್ಲಿ ತೇವಾಂಶ ಇದೆ ಎಂಬ ಕಾರಣಕ್ಕೆ ತಿರಸ್ಕರಿಸಬಾರದು. 

ಜಮೀನಿಗೆ ಹಕ್ಕುಪತ್ರ ಇಲ್ಲದ ಸಾವಿರಾರು ರೈತರು ಭತ್ತದ ಕೃಷಿ ಮಾಡುತ್ತಿದ್ದು, ಪಹಣಿ ಕಡ್ಡಾಯ ನಿಯಮ ಕೈಬಿಡಬೇಕು. ಖರೀದಿ ಕೇಂದ್ರಕ್ಕೆ 50 ಕೆ.ಜಿ ಚೀಲಗಳಲ್ಲಿ ಭತ್ತ ತರಬೇಕು, ಲೋಡಿಂಗ್ ಹಾಗೂ ಅನ್‌ಲೋಡಿಂಗ್ ವೆಚ್ಚವನ್ನು ರೈತರೇ ಭರಿಸಬೇಕು, ಎಕರೆಗೆ 16 ಕ್ವಿಂಟಲ್‌ ಮಾತ್ರ ಖರೀದಿ ಎಂಬ ಅವೈಜ್ಞಾನಿಕ ನಿಯಮಗಳನ್ನು ಕೂಡ ಕೈಬಿಡಬೇಕು ಎಂದು ಒತ್ತಾಯಿಸುತ್ತಾರೆ ರೈತ ಮುಖಂಡರಾದ ಶಿವಮೂರ್ತಿ.

ಎಂಒ 4 ಖರೀದಿಗೆ ನಿರ್ಣಯ

‘ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಡಿ ಎಂಒ–4 ಅಕ್ಕಿ ವಿತರಣೆಗೆ ಅವಕಾಶ ಇಲ್ಲದ ಕಾರಣ ಖರೀದಿ ಕೇಂದ್ರಗಳಲ್ಲಿ ಎಂಒ–4 ಭತ್ತ ಖರೀದಿ ಮಾಡಲಾಗುತ್ತಿರಲಿಲ್ಲ. ಆದರೆ, ಈ ವರ್ಷದಿಂದ ಎಂಒ–4 ಭತ್ತ ಖರೀದಿಸುವಂತೆ ಜಿಲ್ಲಾಡಳಿತ  ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಅಕ್ಟೋಬರ್ 18ರಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದ್ದು, ಅನುಮತಿ ಸಿಕ್ಕ ಕೂಡಲೇ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎನ್ನುತ್ತಾರೆ ಎಪಿಎಂಸಿ ಸಹಾಯಕ ನಿರ್ದೇಶಕಿ ಗಾಯತ್ರಿ.

ಪ್ರತಿವರ್ಷ ಇದೇ ಗೋಳು...

ಜಿಲ್ಲೆಯಲ್ಲಿ ಪ್ರತಿ ಬಾರಿ ಭತ್ತದ ಕಟಾವು ಸಂಪೂರ್ಣ ಮುಗಿದ ನಂತರವೇ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಇದರಿಂದ ಜಿಲ್ಲೆಯ ರೈತರಿಗೆ 100 ಕೋಟಿ ನಷ್ಟವಾಗುತ್ತಿದೆ. ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರದಿರುವುದನ್ನು ನೋಡಿದರೆ, ಮಿಲ್ ಮಾಲೀಕರ ಜತೆ ಶಾಮೀಲಾಗಿದ್ದಾರೆಯೇ ಎಂಬ ಅನುಮಾನ ರೈತರನ್ನು ಕಾಡುತ್ತಿದೆ. ಖರೀದಿ ಕೇಂದ್ರ ತೆರೆಯುವಂತೆ ಜೂನ್‌ನಲ್ಲಿಯೇ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಕೃಷಿ ಸಚಿವರು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಕರಾವಳಿಯ ಭತ್ತ ಕೃಷಿಯ ಬಗ್ಗೆ ನಿರ್ಲಕ್ಷ್ಯ ಮುಂದುವರಿದರೆ, ರೈತರು ಕೃಷಿಯಿಂದ ವಿಮುಖರಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಜಿಲ್ಲಾ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು