ಬುಧವಾರ, ಸೆಪ್ಟೆಂಬರ್ 22, 2021
28 °C
ಹೆಣ್ಣು ಕಪ್ಪೆಗೆ ಕಾಲುಂಗುರ, ಕರಿಮಣಿ ಅಲಂಕಾರ, ಮದುವೆ ಬಳಿಕ ಕೆರೆಗೆ ವಿಸರ್ಜನೆ

ಉಡುಪಿ: ಮಳೆಗಾಗಿ ಮಂಡೂಕಗಳ ಮದುವೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನಗರದ ಕಿದಿಯೂರು ಹೋಟೆಲ್ ಪಾರ್ಕಿಂಗ್ ಪ್ರದೇಶದಲ್ಲಿ ಶನಿವಾರ ಸಂಭ್ರಮ ಮನೆಮಾಡಿತ್ತು. ಕಲ್ಸಂಕದ ವರುಣನಿಗೂ, ಕೊಳಲಗಿರಿಯ ವರ್ಷಾಳಿಗೂ ಸಂಪ್ರದಾಯಬದ್ಧವಾಗಿ ವಿವಾಹ ನೆರವೇರಿಸಲಾಯಿತು. ಮದುವೆಗೆ ಬಂದವರೆಲ್ಲ ಅಕ್ಷತೆ ಹಾಕಿ ಕೇಸರಿಬಾತ್, ಬಾದಾಮಿ ಹಾಲು, ಕಟ್ಲೆಟ್‌ ಸವಿದರು. ಬಳಿಕ ವರುಣ ಹಾಗೂ ವರ್ಷಾಳನ್ನು ಮಣ್ಣಪಳ್ಳದ ಕೆರೆಗೆ ಬಿಡಲಾಯಿತು.

ಗೊಂದಲ ಬೇಡ. ಇದು ಕಪ್ಪೆಗಳ ಮದುವೆ. ಕರಾವಳಿಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿರುವುದರಿಂದ ಮಳೆಗಾಗಿ ಪ್ರಾರ್ಥಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಪಂಚರತ್ನ ಸೇವಾ ಟ್ರಸ್ಟ್‌ನಿಂದ ಮಂಡೂಕಗಳ ಮದುವೆ ಮಾಡಿಸಲಾಯಿತು. ಹಿಂದೂ ಸಂಪ್ರದಾಯದಂತೆ ಶಾಸ್ತ್ರಬದ್ಧವಾಗಿ ವಿವಾಹ ನೆರವೇರಿಸಿದ್ದು ವಿಶೇಷವಾಗಿತ್ತು.

ಕಪ್ಪೆಗಳ ಆಯ್ಕೆ ಹೇಗೆ?
ಕಪ್ಪೆಗಳು ಗಂಡೊ ಹೆಣ್ಣೊ ಎಂದು ತಿಳಿಯಲು ನಾಲ್ಕು ಕಪ್ಪೆಗಳನ್ನು ಮಣಿಪಾಲದ ಜೀವಶಾಸ್ತ್ರ ವಿಭಾಗದ ತಜ್ಞರ ಬಳಿ ತೆಗೆದುಕೊಂಡು ಹೋಗಲಾಗಿತ್ತು. ವೈದ್ಯರು ಗಂಡು ಹಾಗೂ ಹೆಣ್ಣು ಕಂಪೆಗಳನ್ನು ಗುರುತಿಸಿ ಕೊಟ್ಟಿದ್ದರು. ಬಳಿಕ ಎರಡೂ ಕಪ್ಪೆಗಳನ್ನು ಮೂರು ಚಕ್ರದ ಸೈಕಲ್‌ನಲ್ಲಿ ಕೂರಿಸಿಕೊಂಡು ಕಿದಿಯೂರು ಹೋಟೆಲ್‌ವರೆಗೂ ಮೆರವಣಿಗೆ ಮಾಡಲಾಯಿತು.

ಅಮಿತಾ ಗಿರೀಶ್ ಎಂಬುವರು ಕಪ್ಪೆಗಳಿಗೆ ಆರತಿ ಮಾಡಿ, ಹೆಣ್ಣು ಕಪ್ಪೆಗೆ ಕಾಲುಂಗರ ಕರಿಮಣಿ ತೊಡಿಸಿ, ಅರಿಶಿನ ಕುಂಕುಮ ಹೂ ಮುಡಿಸಿದರು. ಬಳಿಕ ಎಲ್ಲರ ಸಮ್ಮುಖದಲ್ಲಿ ಮದುವೆ ನೆರವೇರಿಸಿ, ಬಂದವರಿಗೆ ಸಿಹಿ ವಿತರಿಸಲಾಯಿತು. ಬಳಿಕ ಕಪ್ಪೆಗಳನ್ನು ಮಣಿಪಾಲದ ಮಣ್ಣಪಳ್ಳ ಕೆರೆಗೆ ಬಿಡಲಾಯಿತು. 

ಈ ಸಂದರ್ಭ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವಳಕಾಡು, ‘ಕುಡಿಯಲು ನೀರಲ್ಲದೆ ಜನರು ತತ್ತರಿಸಿದ್ದಾರೆ. ಈ ಹಿಂದೆ ಕಪ್ಪೆಗಳ ಮದುವೆ ಮಾಡಿದಾಗ ಮಳೆ ಸುರಿದಿತ್ತು. ಅದಕ್ಕಾಗಿ ಈ ಬಾರಿಯೂ ಮದುವೆ ಮಾಡಿದ್ದೇವೆ ಎಂದರು.

‘ಕಪ್ಪೆಗಳ ಮದುವೆಯನ್ನು ಮೂಢನಂಬಿಕೆ ಎಂದು ಟೀಕಿಸುತ್ತಿದ್ದಾರೆ. ಸಂಪ್ರದಾಯ, ನಂಬಿಕೆಯ ಆಧಾರದಲ್ಲಿ ಮದುವೆ ಮಾಡಲಾಗಿದೆ. ಉಡುಪಿಯಲ್ಲಿ ಜಲಕ್ಷಾಮ ಎದುರಾಗಿದೆ. ಮಳೆ ಬರಲಿ ಎಂದು ಈ ಕಾರ್ಯ ಮಾಡಿದ್ದೇವೆ. ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಹೇಳಿದರು. 

‘ಮೌಢ್ಯದ ಪರಮಾವಧಿ’
ಕಪ್ಪೆಗಳ ಮದುವೆ ವಿಚಾರ ಕೇಳಿ ಬೇಸರ ಹಾಗೂ ಮುಜುಗರವಾಯಿತು. ವಿದ್ಯಾವಂತರ ಜಿಲ್ಲೆಯಲ್ಲಿ ಇಂತಹ ಮೌಢ್ಯಾಚರಣೆ ನಡೆದಿರುವುದು ಬೇಸರದ ಸಂಗತಿ. ಇದು ಅವೈಜ್ಞಾನಿಕ ಹಾಗೂ ಅವಿವೇಕತನದ ಕೃತ್ಯ. ಸ್ವಾರ್ಥಕ್ಕಾಗಿ, ಮೌಢ್ಯತೆ ಬಿತ್ತಲು ಕಪ್ಪೆಗಳ ಮಾಡಿರುವುದು ಜಿಲ್ಲೆಗೆ ಕಳಂಕ. ಮದುವೆ ನೆಪದಲ್ಲಿ ಮೂಕಪ್ರಾಣಿಗಳಿಗೆ ಹಿಂಸಿಸಿರುವುದು ಅನಾಗರಿಕತೆಯ ಪರಮಾವಧಿ. ನಾಗರಿಕರು ಇಂತಹ ಆಚರಣೆಗಳಿಗೆ ಬೆಂಬಲ ನೀಡಬಾರದು ಎಂದು ಸಮತಾ ಸೈನಿಕ ದಳದ ಜಿಲ್ಲಾ ಸಂಚಾಲಕ ವಿಶ್ವನಾಥ್ ಪೇತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು