ಉಡುಪಿ: ಗಣೇಶ ಹಬ್ಬದ ಮುನ್ನಾದಿನವಾದ ಶುಕ್ರವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಹೂವು, ಹಣ್ಣು, ಕಬ್ಬು ಮಾರಾಟ ನಗರದೆಲ್ಲೆಡೆ ಗರಿಗೆದರಿತ್ತು. ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಮನೆಗಳಲ್ಲಿ ಗಣೇಶ ವಿಗ್ರಹವನ್ನಿಟ್ಟು ಪೂಜಿಸುವವರೂ ಪೂಜಾ ಸಾಮಗ್ರಿ, ಅಲಂಕಾರ ವಸ್ತುಗಳನ್ನು ಖರೀದಿಸಿದರು.
ಅಂತಿಮ ಸಿದ್ಧತೆ: ನಗರದ ಬಹುತೇಕ ಗಣೇಶೋತ್ಸವ ಸಮಿತಿಗಳ ಪೆಂಡಾಲ್‌ಗಳಲ್ಲಿ ಶುಕ್ರವಾರ ಸಂಜೆ ಅಂತಿಮ ಸಿದ್ಧತೆ ನಡೆದಿತ್ತು. ಪೆಂಡಾಲ್‌ಗಳ ಅಲಂಕಾರ ಜೋರಾಗಿಯೇ ನಡೆದಿತ್ತು.
ಪ್ರತಿಷ್ಠಾಪನೆಗಾಗಿ ಗಣೇಶ ವಿಗ್ರಹಗಳನ್ನು ವಾಹನಗಳಲ್ಲಿ ಕೊಂಡೊಯ್ಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜಿಲ್ಲೆಯಲ್ಲಿ ಒಟ್ಟು 481 ಪೆಂಡಾಲ್‌ಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿರುವುದಾಗಿ ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಗಣೇಶೋತ್ಸವ, ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬೀಗಿ ಬಂದೋಬಸ್ತು ಏರ್ಪಡಿಸಿದ್ದಾರೆ.
ಆಹಾರ ಪದಾರ್ಥ ಗುಣಮಟ್ಟ ಖಚಿತಪಡಿಸಿಕೊಳ್ಳಿ: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ವಿತರಿಸಲಾಗುವ ಆಹಾರ ಪದಾರ್ಥಗಳ ನೈರ್ಮಲ್ಯತೆ, ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ನೀಡುವ ಸಂದರ್ಭದಲ್ಲಿ ಎಫ್‌ಎಸ್‌ಎಸ್‌ಎಐ ನೋಂದಣಿ/ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಅಲ್ಲಿ ವಿನಿಯೋಗವಾಗುವ ಪ್ರಸಾದವನ್ನು ಸಿದ್ಧಪಡಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಹೆಚ್ಚಿನ ಸ್ಥಳಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆಯು ನಡೆಯುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಇದೇ 7ರಂದು ಉಡುಪಿ ಜಿಲ್ಲೆಯಾದ್ಯಂತ ಹಾಗೂ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಇದೇ 9 ಮತ್ತು 11ರಂದು ಮಧ್ಯಾಹ್ನ 2ರಿಂದ ಮದ್ಯರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಗಣೇಶ ಹಬ್ಬದ ಆಚರಣೆಗೂ ಮುನ್ನ ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಕುರಿತು ಬ್ಯಾನರ್,ಬಂಟಿಂಗ್ಸ್‌ಗಳನ್ನು ಯಾವುದೇ ಸ್ಥಳಗಳಲ್ಲಿ ಆಳವಡಿಸವ ಮುನ್ನ ಮತ್ತು ಗಣಪತಿ ವಿಗ್ರಹಗಳನ್ನು ತರುವ ಮತ್ತು ವಿಸರ್ಜನಾ ಕಾಲಕ್ಕೆ ನಡೆಸುವ ಮೆರವಣಿಗೆಗಳ ಮಾರ್ಗ ಸಂಬಂಧ ಅನುಮತಿಗೆ ಪೊಲೀಸ್ ಇಲಾಖೆಯ ಸಂಬಂಧಪಟ್ಟ ಠಾಣಾಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರವನ್ನು (ಎನ್.ಒ.ಸಿ) ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.