ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆಯ ಎಸ್‌ಐ ಮಹಾಬಲ ಶೆಟ್ಟಿ ಅವರು ಶುಕ್ರವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿ, ಮಧ್ಯಾಹ್ನ 1.30ರ ವೇಳೆಗೆ ರಾಜೀನಾಮೆ ಪತ್ರದ ಜತೆಗೆ ಇಲಾಖೆಯ ಮೊಬೈಲ್ ಅನ್ನು ಟೇಬಲ್ ಮೇಲಿಟ್ಟು ಮನೆಗೆ ಹೋದ ಘಟನೆ ನಡೆದಿದೆ.
ಈ ಸುದ್ದಿ ಹರಡುತ್ತಿದ್ದಂತೆ ಉನ್ನತಾಧಿಕಾರಿಗಳು ಇಲಾಖೆಯ ಹಲವರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದರು. ಅದರಂತೆ ಎಸ್‌ಐ ಮಹಾಬಲ ಶೆಟ್ಟಿ ಅವರು ಹೆಬ್ರಿ ಠಾಣಾ ವ್ಯಾಪ್ತಿಯ ಕಳ್ತೂರು ಸಂತೇಕಟ್ಟೆಯಲ್ಲಿ ಜಮೀನಿಗೆ ಸಂಬಂಧಿಸಿದ ಪ್ರಕರಣವನ್ನು ಗುರುವಾರ ದಾಖಲಿಸಿದ್ದರು. ಪ್ರಕರಣದ ಇನ್ನೊಂದು ಕಡೆಯವರು ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿ ಹೆಬ್ರಿ ಪೊಲೀಸರ ಬಗ್ಗೆ ದೂರು ನೀಡಿದ್ದು, ಈ ವಿಚಾರವಾಗಿ ಪೊಲೀಸ್ ಅಧೀಕ್ಷಕರು ಠಾಣಾಧಿಕಾರಿಯನ್ನು ಕರೆಯಿಸಿ ವಿಚಾರಿಸಿದ್ದಾರೆ ಎನ್ನಲಾಗಿದೆ. ಅದಾದ ಕೆಲವೇ ಹೊತ್ತಿನಲ್ಲಿ ಠಾಣಾಧಿಕಾರಿ ಮಹಾಬಲ ಶೆಟ್ಟಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿಜವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಮನ ಒಲಿಸಿದ ಅಧಿಕಾರಿಗಳು: ಎಸ್.ಐ ಮಹಾಬಲ ಶೆಟ್ಟಿ ಅವರು ರಾಜೀನಾಮೆ ಪತ್ರ ಬರೆದಿಟ್ಟು ಸ್ವಂತ ಊರಾದ ಕುಂದಾಪುರ ತಾಲ್ಲೂಕಿನ ಸಿದ್ಧಾಪುರಕ್ಕೆ ಹೋಗಿದ್ದರು. ಈ ಮಾಹಿತಿ ಕಲೆ ಹಾಕಿದ ಪೊಲೀಸ್ ಉನ್ನತಾಧಿಕಾರಿಗಳು ಕಾರ್ಕಳ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಜಾಯ್ ಅಂತೋನಿಯವರನ್ನು ಅವರ ಮನೆಗೆ ಕಳುಹಿಸಿ ಮನಒಲಿಸಿ ಹೆಬ್ರಿ ಠಾಣೆಗೆ ಕರೆದು ತಂದಿದ್ದಾರೆ.
ಮಹಾಬಲ ಶೆಟ್ಟಿ ಅವರು ಮೇ ತಿಂಗಳಲ್ಲಿ ಪದೋನ್ನತಿ ಹೊಂದಿ ಉಡುಪಿ ಜಿಲ್ಲೆ ಅಮಾವಾಸ್ಯೆಬೈಲು ಠಾಣೆಯಿಂದ ವರ್ಗಾವಣೆಗೊಂಡು ಹೆಬ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.