ಜ್ಯೋತಿಷ್ಯದ ಮೇಲೆ ಹೆಚ್ಚುತ್ತಿದೆ ನಂಬಿಕೆ

ಮಂಗಳವಾರ, ಜೂಲೈ 23, 2019
25 °C
ಜ್ಯೌತಿಷವಿಶ್ವಕೋಶದ ಗ್ರಂಥ ಬಿಡುಗಡೆಯಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಜ್ಯೋತಿಷ್ಯದ ಮೇಲೆ ಹೆಚ್ಚುತ್ತಿದೆ ನಂಬಿಕೆ

Published:
Updated:
Prajavani

ಉಡುಪಿ: ಇಂದು ಜ್ಯೋತಿಷ್ಯದ ಬಗ್ಗೆ ನಂಬಿಕೆ ಜಾಸ್ತಿಯಾಗಿದೆ. ಇಡೀ ವಿಶ್ವದಲ್ಲಿ ಇದರ ಕುತೂಹಲ ಹೆಚ್ಚಾಗಿದೆ. ವಿದೇಶಿಯರು ಕೂಡ ಎಲ್ಲಾ ಧರ್ಮಗಳಲ್ಲಿರುವ ಜ್ಯೋತಿಷ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ವತಿಯಿಂದ ಉಡುಪಿ ಶ್ರೀಮನ್‌ ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಸಹಯೋಗದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜ್ಯೋತಿಷ್ಯವಿಶ್ವಕೋಶದ ಡಿಜಿಟಲ್‌ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರಸ್ತುತ ವಿಜ್ಞಾನಿಗಳು ಗ್ರಹಗಳ ಚಲನವಲನ ಹಾಗೂ ಗ್ರಹಣಗಳಿಗೆ ಸಂಬಂಧಿಸಿದಂತೆ ಲೆಕ್ಕಚಾರ ಮಾಡುತ್ತಿದ್ದಾರೆಯೋ ಅದನ್ನು ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯರು ಅತ್ಯಂತ ಸ್ಪಷ್ಟವಾಗಿ ಮಾಡಿ ತೋರಿಸಿದ್ದಾರೆ. ಹಾಗಾಗಿ ನೊಬೆಲ್‌ ಪ್ರಶಸ್ತಿ ಕೊಡಬೇಕಾದದ್ದು ಈಗಿನ ವಿಜ್ಞಾನಿಗಳಿಗಲ್ಲ, ಹಿಂದಿನ ವಿಜ್ಞಾನಿಗಳಿಗೆ ನೀಡಬೇಕು ಎಂದರು.

ಆಂಗ್ಲರ ಪ್ರವೇಶವಾದ ಬಳಿಕ ಭಾರತದ ಅನೇಕ ಭಾಷೆ, ಸಂಸ್ಕೃತಿ, ಸಂಸ್ಕಾರಗಳೆಲ್ಲವೂ ನಾಶವಾಯಿತು. ನಮಗೆ ಅರಿವಿಲ್ಲದೆಯೇ ನಮ್ಮತನವನ್ನು ಕಳೆದುಕೊಂಡಿದ್ದೇವೆ. ವಿದ್ವಾಂಸರು, ವಿದ್ವತ್‌ ಹಾಗೂ ಪರಂಪರೆಯಿಂದ ಬಂದ ಜ್ಞಾನ ಸಂಪತ್ತು ಮೂಲೆಗುಂಪಾಗಿ ಕರಗುತ್ತಾ ಹೋಯಿತು ಎಂದು ಹೇಳಿದರು.

‘ಸ್ವೇಚ್ಛೆಯಿಂದ ಇರಬೇಕು. ಯಾವುದೇ ಬಂಧನ, ಕಟ್ಟುಪಾಡುಗಳಿರಬಾರದು. ಆಚಾರ–ವಿಚಾರಗಳ ಬಂಧನ ಇರಬಾರದು. ಹೇಗೆ ಬೇಕೋ ಹಾಗೆ ಬದುಕುವುದೇ ಪಾಶ್ಚತ್ಯರ ಸಂಸ್ಕೃತಿ ಎಂಬ ವಿಚಾರ ನಮ್ಮ ತಲೆಗೆ ಹೊಳೆಯಿತು. ‘ವಿದೇಶಿಗರಿಗೂ ಅವರ ಭಾಷೆ, ಸಂಸ್ಕೃತಿಯ ಬಗ್ಗೆ ಗೌರವವಿದೆ. ಅದನ್ನು ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಆದರೆ ನಮಗೆ ನಮ್ಮ ಸಂಸ್ಕೃತಿ, ಪರಂಪರೆಯ ಮೇಲಾದ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಬನಾರಸ್‌ ವಿಶ್ವವಿದ್ಯಾಲಯದಲ್ಲಿ ಸ್ವಲ್ಪ ಜ್ಞಾನ ಸಂಪತ್ತು ಉಳಿದಿದ್ದರೆ, ಉಳಿದೆಲ್ಲ ಕಡೆಗಳಲ್ಲಿ ಇದ್ದ ವಿಷಯಗಳು ಮೂಲೆ ಸೇರಿದವು’ ಎಂದು ತಿಳಿಸಿದರು.

ಜ್ಯೋತಿಷ್ಯ ವಿಶ್ವಕೋಶ ಗ್ರಂಥ ಬಿಡುಗಡೆಗೊಳಿಸಿದ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ’ಜ್ಯೋತಿಷ್ಯ ನಮಗೆ ಗೊತ್ತಿರದ ತಪ್ಪುಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಇದು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಿದೆ. ಎಷ್ಟೇ ಬೈದರೂ ಎಲ್ಲರಿಗೂ ಜ್ಯೋತಿಷ್ಯ ಮಾತ್ರ ಬೇಕು ಎಂದರು.

ಕಾಣಿಯೂರು ಮಠ ವಿದ್ಯಾವಲ್ಲಭ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ಸ್ವಾಮೀಜಿ ಮಾತನಾಡಿದರು.

ವೇದಾದಂತ ವಿಭಾಗದ ಅಧ್ಯಕ್ಷ ಸಗ್ರಿ ರಾಘವೇಂದ್ರ ಆಚಾರ್ಯ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಯಶೋವರ್ಮ ಹೆಗ್ಡೆ, ಮಠದ ದಿವಾನ ವೇದವ್ಯಾಸ ತಂತ್ರಿ, ಆಡಳಿತ ಮಂಡಳಿ ಕಾರ್ಯದರ್ಶಿ ರತ್ನಕುಮಾರ್‌, ಸಂಸ್ಕೃತ ಕೇಂದ್ರದ ನಿರ್ದೇಶಕ ಕಡಂದಲೆ ಗಣಪತಿ ಭಟ್‌ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ‘ಜ್ಯೌತಿಷಾರವಿಂದಭಾಸ್ಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !