ಶುಕ್ರವಾರ, ಜುಲೈ 1, 2022
25 °C
ಹಲಸಿನ ಹೋಳಿಗೆ, ಬರ್ಫಿ, ಐಎಸ್‌ಕ್ರೀಂ, ಹಲ್ವ ಸವಿದ ಗ್ರಾಹಕರು; 15ರವರೆಗೆ ಮೇಳ

ರುದ್ರಾಕ್ಷಿ, ಚಂದ್ರ ಹಲಸಿಗೆ ಮನಸೋತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದೊಳಗೆ ಕಾಲಿಡುತ್ತಿದ್ದಂತೆ ಹಲಸಿನ ಘಮಲು ಮೂಗಿಗೆ ಬಡಿಯುತ್ತಿತ್ತು. ಅಲ್ಲಿ, ಹಲಸು ಬರೀ ಹಣ್ಣಾಗಿ ಮಾತ್ರವಲ್ಲ; ವೈವಿಧ್ಯಮಯ ಉತ್ಪನ್ನಗಳಾಗಿ ರೂಪ ಪಡೆದಿತ್ತು. ಮೇಳಕ್ಕೆ ಬಂದವರೆಲ್ಲ ಹಲಸಿನ ಹಣ್ಣಿನ ಜತೆಗೆ, ಉಪ ಉತ್ಪನ್ನಗಳ ಸವಿಯನ್ನು ಸವಿದಿದ್ದು ವಿಶೇಷವಾಗಿತ್ತು.

ದೊಡ್ಡಬಳ್ಳಾಪುರ ರೈತ ರವಿಕುಮಾರ್ ತಂದಿದ್ದ ಚಂದ್ರ ಹಲಸು, ರುದ್ರಾಕ್ಷಿ ಹಲಸು, ಏಕಾದಶಿ ಹಲಸು ಎಲ್ಲರ ಗಮನ ಸೆಳೆಯಿತು. ಕೆಂಪು, ಹಳದಿ ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದ ಸೊಳೆಗಳನ್ನು ನೋಡಿದಾಕ್ಷಣ ಒಮ್ಮೆ ಸವಿಯಲೇ ಬೇಕು ಎನಿಸುವಂತಿತ್ತು. ಹಾಗಾಗಿ, ಸ್ವಲ್ಪ ದುಬಾರಿ ಎನಿಸಿದರೂ ಗ್ರಾಹಕರು ಖರೀದಿಗೆ ಮುಗಿಬಿದ್ದರು.

ಸುಮಾರು ಒಂದೂವರೆ ಟನ್‌ ಹಲಸು ತರಲಾಗಿದ್ದು, ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಈ ಬಾರಿ ಮಳೆಯ ಕೊರತೆಯಿಂದ ಹಣ್ಣಿನ ರುಚಿ ಸ್ವಲ್ಪ ಕಡಿಮೆಯಾಗಿದೆ. ಇಲ್ಲವಾದರೆ, ಬೆಲ್ಲದಂತ ಸಿಹಿ ಇರುತ್ತಿತ್ತು ಎಂದು ಮಾಲೀಕ ರವಿಕುಮಾರ್ ಹಣ್ಣಿನ ವಿಶೇಷತೆಯನ್ನು ತಿಳಿಸಿದರು.

ಕಳೆದ ವರ್ಷವೂ ಮೇಳದಲ್ಲಿ ಭಾಗವಹಿಸಿದ್ದೆ. ಹಲಸಿನ ಮೇಳಗಳು ಎಲ್ಲಿ ನಡೆದರೂ ಹಣ್ಣುಗಳನ್ನು ಮಾರಾಟ ಮಾಡುತ್ತೇನೆ. ಚಂದ್ರ ಹಲಸು, ರುದ್ರಾಕ್ಷಿ ಹಲಸಿಗೆ ಮನಸೋಲದವರಿಲ್ಲ ಎನ್ನುತ್ತಾರೆ ಅವರು.

ಹಲಸಿನ ಬೀಜದ ಹೋಳಿಗೆ:

ಮೇಳದ ದ್ವಾರದಲ್ಲೇ ಮರಿಕೇಸ್‌ ಕಂಪೆನಿಯ ಹಲಸಿನ ಬೀಜದ ಹೋಳಿಗೆ ಗಮನ ಸೆಳೆಯಿತು. ಹಲಸಿನ ಬೀಜಗಳನ್ನು ಪುಡಿಮಾಡಿ ಅದಕ್ಕೆ ಸಾವಯವ ಬೆಲ್ಲ ಸೇರಿಸಿ ಮಾಡಿದ್ದ ಹೋಳಿಗೆ ರುಚಿಯಾಗಿತ್ತು. ಒಂದು ಹೋಳಿಗೆಗೆ ₹ 20 ದರವಿತ್ತು.

ಇದೇ ಮರಿಕೇಸ್‌ ಕಂಪೆನಿಯ ನ್ಯಾಚುರಲ್ ಐಸ್‌ಕ್ರೀಂ ಕೂಡ ಗ್ರಾಹಕರನ್ನು ಆಕರ್ಷಿಸಿತು. ಹಲಸು, ಕಾಡು ಮಾವಿನಹಣ್ಣು, ಗಾಂಧಾರಿ ಮೆಣಸು, ನೇರಳೆ, ಬೊಂಡದಿಂದ ತಯಾರಿಸಲಾಗಿದ್ದ ಐಸ್‌ಕ್ರೀಂ ಅನ್ನು ಮಕ್ಕಳ ಜತೆಗೆ ಹಿರಿಯರೂ ಸವಿದು ಖುಷಿಪಟ್ಟರು.

ಇದರ ಜತೆಗೆ ಸಾಣೂರು ಹಲಸು ಬೆಳೆಗಾರರ ಸಂಘದಿಂದ ಕರಾವಳಿಯ ಪ್ರಸಿದ್ಧ ಹಲಸಿನ ತಳಿಗಳ ಜತೆಗೆ, ವಿಶೇಷ ಹಲಸಿನ ಶಿರಾ, ಮುಳಕ, ಸುಕ್ರುಂಡೆ, ಹಲಸಿನ ಅಪ್ಪಳ, ಗಟ್ಟಿ, ಚಿಪ್ಸ್‌ ಕೂಡ ಹೆಚ್ಚು ಮಾರಾಟವಾಯಿತು.

ಮೇಳದಲ್ಲಿದ್ದ ತುಪ್ಪದಿಂದ ಬೇಯಿಸಿದ್ದ ಹಲಸಿನ ಹೋಳಿಗೆ ರುಚಿಕರವಾಗಿತ್ತು. ಇದಲ್ಲದೆ ಮಾಂಬಳ, ಕಡಬು, ಉಪ್ಪಿನಕಾಯಿ, ಹಲ್ವ, ಬರ್ಫಿ ಹೀಗೆ ಬಗೆಬಗೆಯ ಖಾದ್ಯಗಳ ಸವಿಯನ್ನು ಒಂದೇ ಸೂರಿನಡಿ ಸವಿಯಲು ಅವಕಾಶ ಗ್ರಾಹಕರಿಗೆ ಸಿಕ್ಕಿತು.

ಕೆಲವರು ಸ್ಥಳದಲ್ಲೇ ಹಲಸಿನ ಪದಾರ್ಥವನ್ನು ತಿಂದರೆ, ಕೆಲವರು ಮನೆಗೆ ಕೊಂಡೊಯ್ದರು. ಕೆಲವರು ಹಣ್ಣಿನ ರುಚಿಗೆ ಮನಸೋತು, ಹಲಸಿನ ಗಿಡಗಳನ್ನೂ ಖರೀದಿಸಿದ್ದು ವಿಶೇಷವಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು