ಗುರುವಾರ , ಮೇ 13, 2021
39 °C
ಗ್ರಾಮೀಣ ಭಾಗಗಳಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಗೆ ಅವಕಾಶ

ಜಲ ಸಂರಕ್ಷಣೆಗೆ ಜಲಶಕ್ತಿ ಅಭಿಯಾನ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಸಂರಕ್ಷಣೆ, ಅಂರ್ತಜಲ ವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಪ್ರಮಾಣದ ನೀರು ಒದಗಿಸುವ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರದಾದ್ಯಂತ ಜಲಶಕ್ತಿ ಅಭಿಯಾನ ಯೋಜನೆ ಅನುಷ್ಠಾನಗೊಳಿಸಿದೆ.

ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದರ ಜತೆಗೆ ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು ಕೂಡ ಜಲಶಕ್ತಿ ಅಭಿಯಾನದ ಉದ್ದೇಶ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಜಿಲ್ಲೆಯಾದ್ಯಂತ ಮಾರ್ಚ್ 22, 2021 ರಿಂದ ನ.30ರವರೆಗೆ ‘ಕ್ಯಾಚ್‌ ದ ರೇನ್‌’ ಅಭಿಯಾನ ನಡೆಯಲಿದೆ.

ಮುಂಗಾರು ಪೂರ್ವದ 100 ದಿನಗಳ ಅವಧಿಯಲ್ಲಿ ಪ್ರತಿ ಗ್ರಾಮದಲ್ಲಿ ಮಳೆ ನೀರು ಸಂರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಯೋಜನೆಯ ಉದ್ದೇಶ. ಮಳೆ ನೀರು ಸಂರಕ್ಷಣೆ ಮಾಡಲು ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದ್ದು, ಅಂತರ್ಜಲ ಸಂರಕ್ಷಣೆಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಅನುಷ್ಠಾನ ಹೇಗೆ:

ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆ, ಕಲ್ಯಾಣಿಗಳ ಅಭಿವೃದ್ಧಿ ಮಾಡುವುದು. ನೀರು ಹರಿದು ಹೋಗುವ ನಾಲೆ, ಕಾಲುವೆಗಳ ಪುನಶ್ಚೇತನ, ಹೊಸ ಕೆರೆ, ಗೋಕಟ್ಟೆ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಕೊಳವೆಬಾವಿ ಮರುಪೂರಣ, ಮಳೆ ನೀರು ಸಂಗ್ರಹ ಮಾದರಿ ಅಳವಡಿಕೆ, ಅರಣ್ಯೀಕರಣ ಕಾಮಗಾರಿಗೆ ಅವಕಾಶವಿದೆ. ನೀರಾವರಿಗೆ ಬಾವಿ ನಿರ್ಮಾಣ, ಸೋಕ್ ಪಿಟ್‌ಗಳ ನಿರ್ಮಾಣ, ಬದುಗಳ ನಿರ್ಮಾಣ, ಕೃಷಿಹೊಂಡ ಸೇರಿದಂತೆ ವೈಯಕ್ತಿಕ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳಬಹುದು.

ನರೇಗಾ ಕೂಲಿಯ ದರವನ್ನು ₹ 275 ರಿಂದ ₹ 289ಕ್ಕೆ ಹೆಚ್ಚಿಸಲಾಗಿದ್ದು, ವರ್ಷಕ್ಕೆ ಪ್ರತಿ ಕುಟುಂಬಕ್ಕೆ 100 ದಿನಗಳು ಉದ್ಯೋಗ ಸಿಗಲಿದೆ. ಉದ್ಯೋಗ ಚೀಟಿ ಇಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಉದ್ಯೋಗ ಚೀಟಿ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ನರೇಗಾ ಅನುಷ್ಠಾನಕ್ಕೆ ಉತ್ತಮ ಸ್ಪಂದನ ದೊರೆತಿದ್ದು, 2020-21ನೇ ಸಾಲಿನಲ್ಲಿ ₹ 6.68 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಕೈಗೆತ್ತಿಕೊಂಡು 7,687 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ.

ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಲಶಕ್ತಿ ಅಭಿಯಾನದಲ್ಲಿ ಭಾಗವಹಿಸಬಹುದಾಗಿದ್ದು, ಕೆರೆ ಅಭಿವೃದ್ಧಿ, ಅರಣ್ಯೀಕರಣ, ಸಮುದಾಯ ಕಾರ್ಯಕ್ರಮ, ಮನೆಗಳಲ್ಲಿ ಮಳೆ ನೀರು ಸಂಗ್ರಹ, ನೀರು ಇಂಗಿಸುವಿಕೆ, ಸೋಕ್ ಪಿಟ್ ನಿರ್ಮಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಬಹುದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಉಡುಪಿಯಲ್ಲಿ ಜಲಶಕ್ತಿ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗೆ 0820-2574945 ಅಥವಾ ಸಮೀಪದ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸಬಹುದು.

ಜಲಶಕ್ತಿ ಅಭಿಯಾನ ಗುರಿ

ಜಿಲ್ಲೆಯಲ್ಲಿ ಜಲಶಕ್ತಿ ಅಭಿಯಾನದ ಅಂಗವಾಗಿ ಪ್ರತಿ ಗ್ರಾಮದಲ್ಲಿ ಕನಿಷ್ಟ 1 ಕೆರೆ ಗುರುತಿಸಿ ಸಮಗ್ರ ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಲಾಗಿದೆ. 141 ಕೆರೆ, 160 ಕಾಲುವೆ, ತೋಡುಗಳನ್ನು ಹೂಳೆತ್ತುವುದು, 20 ಕಿಂಡಿ ಆಣೆಕಟ್ಟು ನಿರ್ಮಾಣ, 50 ಬೋರ್‌ವೆಲ್‌ ಮರುಪೂರಣ, ಹಾಗೂ 1,455 ನೀರಾವರಿ ಬಾವಿ ನಿರ್ಮಾಣದ ಗುರಿ ಹೊಂದಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಕನಿಷ್ಟ ಒಂದು ಕಟ್ಟಡಕ್ಕೆ ಮಳೆನೀರು ಸಂಗ್ರಹ ಕಾಮಗಾರಿ ನಿರ್ವಹಿಸುವಂತೆ, ಕನಿಷ್ಟ 50 ಸೋಕ್ ಪಿಟ್ ನಿರ್ಮಾಣಕ್ಕೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು