ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ಗಿಂತ ಭಿನ್ನ ಕಾರ್ಕಳ ಸರ್ಕಾರಿ ಕ್ವಾರಂಟೈನ್: ಜಾಲತಾಣಗಳಲ್ಲಿ ವಿಡಿಯೋ ವೈರಲ್

ಕ್ವಾರಂಟೈನ್‌ನಲ್ಲಿದ್ದವರಿಂದ ವ್ಯವಸ್ಥೆ ಬಗ್ಗೆ ಮೆಚ್ಚುಗೆಯ ಮಾತು
Last Updated 26 ಮೇ 2020, 17:56 IST
ಅಕ್ಷರ ಗಾತ್ರ

ಉಡುಪಿ: ಕುಡಿಯಲು ನೀರಿಲ್ಲ, ಮಲಗಲು ಚಾಪೆ ಇಲ್ಲ, ಊಟ ರುಚಿಯಾಗಿಲ್ಲ, ಶೌಚಾಲಯಗಳು ಸರಿ ಇಲ್ಲ.. ಹೀಗೆ ‌ಸರ್ಕಾರಿ ಕ್ವಾರಂಟೈನ್ ಕೇಂದ್ರಗಳ ಅವ್ಯವಸ್ಥೆ ವಿರುದ್ಧ ಆರೋಪಗಳು ಸಾಮಾನ್ಯ. ಆದರೆ, ಕಾರ್ಕಳ ತಾಲ್ಲೂಕಿನಲ್ಲಿರುವ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳು ಮಾತ್ರ ಭಿನ್ನ. ಇಲ್ಲಿನ ವ್ಯವಸ್ಥೆಯ ಬಗ್ಗೆ ಕ್ವಾರಂಟೈನ್‌ನಲ್ಲಿರುವವರ ಮೆಚ್ಚುಗೆಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಕಾರ್ಕಳ ತಹಶೀಲ್ದಾರ್‌ ಪುರಂದರ್ ಹೆಗಡೆ, ‘ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಜಿ.ಜಗದೀಶ್‌, ಉಪ ವಿಭಾಗಾಧಿಕಾರಿ ರಾಜು ಸೇರಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಿರಂತರ ಸಭೆಗಳನ್ನು ನಡೆಸಿ ಹೊರ ರಾಜ್ಯಗಳಿಂದ ತವರಿಗೆ ಬರುವವರ ಮನಸ್ಸಿಗೆ ನೋವಾಗದಂತೆ ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ನಿರ್ಧರಿಸಲಾಗಿತ್ತು. ಅದರಂತೆ ಯೋಜನೆಯನ್ನು ಕಾರ್ಯರೂಪಕ್ಕೆ ತಂದೆವು ಎಂದು ಮಾಹಿತಿ ನೀಡಿದರು.

‘ಕೊರೊನಾ ಸಂಕಷ್ಟಕೆ ಸಿಲುಕಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಲಾಯಿತು. ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲು ನೋಡೆಲ್‌ ಅಧಿಕಾರಿಗಳನ್ನು ನೇಮಿಸಲಾಯಿತು’ ಎಂದು ಮಾಹಿತಿ ನೀಡಿದರು.

ಒಂದೂ ದೂರು ಬಂದಿಲ್ಲ:ಕಾರ್ಕಳದ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿ ಹೊರ ರಾಜ್ಯಗಳಿಂದ ಬಂದಿರುವ 2,300ಕ್ಕೂ ಹೆಚ್ಚು ಮಂದಿ ಇದ್ದಾರೆ. ಇದುವರೆಗೂ ಕೇಂದ್ರಗಳ ಅವ್ಯವಸ್ಥೆಯ ಬಗ್ಗೆ ಒಂದೂ ದೂರು ಬಂದಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು ಪುರಂದರ್ ಹೆಗಡೆ.

ದೇವಸ್ಥಾನ, ಉದ್ಯಮಿಗಳಿಂದ ನೆರವು:ಶುಚಿ ಹಾಗೂ ರುಚಿಯಾದ ಊಟ, ಶುದ್ಧ ಕುಡಿಯುವ ನೀರು, ಚಾಪೆ, ಹೊದಿಕೆ ಹಾಗೂ ಕೇಂದ್ರಗಳ ಶುಚಿತ್ವಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲಕ್ಕೆ ತಾಲ್ಲೂಕಿನ ದೇವಸ್ಥಾನಗಳು, ಉದ್ಯಮಿಗಳು, ಅಕ್ಕಿ ಗಿರಣಿ ಮಾಲೀಕರು ನೆರವು ನೀಡಿದ್ದಾರೆ. ಇದುವರೆಗೂ ಸರ್ಕಾರದಿಂದ ಅನುದಾನ ಪಡೆಯದೆ ಸೌಲಭ್ಯ ಒದಗಿಸಲಾಗಿದೆ ಎಂದರು.

ಕೊರೊನಾ ಸಂಕಷ್ಟದಿಂದ ದುಡಿದ ಹಣ ಕಳೆದುಕೊಂಡು ಸಂಕಷ್ಟದಲ್ಲಿ ತವರಿಗೆ ಬಂದವರಿಗೆ ಮತ್ತಷ್ಟು ಕಷ್ಟ ಕೊಡಬಾರದು ಎಂಬ ಕಾರಣಕ್ಕೆ ಅವರಿಗೆಲ್ಲ ಮನೆಯಲ್ಲಿಯೇ ಇದ್ದಂಥ ಅನುಭವ ನೀಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ಪೂರಕವಾಗಿ ಕೇಂದ್ರಗಳ ಮುಂದೆ ಮಹಿಳೆಯರು ನಿತ್ಯ ರಂಗೋಲಿ ಬಿಟ್ಟು, ಸ್ವಂತ ಮನೆಯಂತೆ ಕಾಳಜಿ ವಹಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

‘ಅಧಿಕಾರಿಗಳ ಶ್ರಮ’
ಕಾರ್ಕಳ ತಾಲ್ಲೂಕಿನಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಎಲ್ಲರೂ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಿದ ಕಾರಣದಿಂದ ಕ್ವಾರಂಟೈನ್‌ ಕೇಂದ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಹೋಟೆಲ್‌ಗಳಲ್ಲಿ ಸಾವಿರಾರು ರೂಪಾಯಿ ಸಿಕ್ಕರೂ ಬಹುಶಃ ಇಂತಹ ಸೌಲಭ್ಯಗಳು ಸಿಗುತ್ತಿರಲಿಲ್ಲ ಎಂದು ಕ್ವಾರಂಟೈನ್‌ ಕೇಂದ್ರಗಳಲ್ಲಿದ್ದವರು ಮೆಚ್ಚುಗೆ ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ. https://youtu.be/0s-qih6oUfw ಈ ಲಿಂಕ್ ಬಳಸಿ ವೀಕ್ಷಿಸಬಹುದು ಎಂದು ತಹಶೀಲ್ದಾರ್ ಪುರಂದರ್ ಹೆಗಡೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT