ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಒಂಟಿಯಾಗಿ ರಸ್ತೆ ನಿರ್ಮಿಸಿದ ಸಾಹಸಿ

ಕಾರ್ಕಳ ತಾಲ್ಲೂಕಿನ ಮಾಳ ಪೇರಡ್ಕ ಪೇರಡ್ಕ ನಿವಾಸಿ ಗೋವಿಂದ ಮಲೆಕುಡಿಯ
Published 24 ಮೇ 2024, 6:48 IST
Last Updated 24 ಮೇ 2024, 6:48 IST
ಅಕ್ಷರ ಗಾತ್ರ

ಕಾರ್ಕಳ: ನಡೆಯಲು ಅಸಾಧ್ಯವಾಗಿರುವ ಏರುಪೇರಾಗಿರುವ ಪ್ರದೇಶದಲ್ಲಿ ಹಾರೆ, ಪಿಕ್ಕಾಸಿ ಹಿಡಿದು ಒಂಟಿಯಾಗಿ ಸುಂದರ ರಸ್ತೆ ಜೊತೆಗೆ ಇಕ್ಕೆಲಗಳಲ್ಲಿ ಚರಂಡಿಯನ್ನೂ ನಿರ್ಮಾಣ ಮಾಡಿ ವ್ಯಕ್ತಿಯೊಬ್ಬರು ಮಾದರಿಯಾಗಿದ್ದಾರೆ.

ತಾಲ್ಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಗೋವಿಂದ ಮಲೆಕುಡಿಯ ಈ ಸಾಹಸ ಮೆರೆದವರು. ತಾಲ್ಲೂಕಿನ ಮಾಳ ಗ್ರಾಮದ ಪೇರಡ್ಕ 25ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿರುವ ಗಿರಿಜನ ಕಾಲನಿ. ಪ್ರತಿದಿನ ನೂರಕ್ಕೂ ಹೆಚ್ಚು ಜನರು ಈ ದಾರಿಯಲ್ಲಿ ಸಂಚರಿಸುತ್ತಿದ್ದು, ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

500 ಮೀಟರ್ ಉದ್ದದ ರಸ್ತೆ: ಕಳೆದ 30 ವರ್ಷಗಳಲ್ಲಿ ಶೃಂಗೇರಿ–ಮಾಳ–ಬಜಗೋಳಿ–ಪುಲ್ಕೇರಿ–ಮಂಗಳೂರು ಕಡೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಪೇರಡ್ಕ ಸಮೀಪ ಗಿರಿಜನ ಕಾಲನಿಯ ಬುಗಟುಗುಂಡಿ ಒಂದನೇ ವಾರ್ಡ್ ರಸ್ತೆ ತನಕ 500 ಮೀಟರ್ ರಸ್ತೆಯನ್ನು ಗೋವಿಂದ ಮಲೆಕುಡಿಯ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಮಳೆಗಾಲದಲ್ಲಿ ನೀರು ಸಾಗಲು ಚರಂಡಿ ವ್ಯವಸ್ಥೆಯನ್ನೂ ನಿರ್ಮಿಸಿದ್ದಾರೆ.

ಒಂದನೇ ಅಡ್ಡರಸ್ತೆ ಬುಗಡುಗುಂಡಿ ರಸ್ತೆ ನಿರ್ಮಾಣ ಮಾಡಿರುವುದರಿಂದ ವಿದ್ಯಾಭ್ಯಾಸಕ್ಕಾಗಿ ತೆರಳುವ ಸ್ಥಳೀಯ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದೆ. ಅವರ ನಗು ನನಗೆ ಪ್ರೇರಣೆಯಾಗಿದೆ. ಕಾಡಿನಲ್ಲಿ ಅರಣ್ಯ ಇಲಾಖೆ ಸಹಕಾರದಲ್ಲಿ ಗಿಡ ನೆಟ್ಟಿದ್ದೇನೆ. ಎಲ್ಲರೂ ಖುಷಿಯಿಂದ ಸಂಚರಿಸುವಾಗ ಸಾರ್ಥಕ ಎನಿಸುತ್ತದೆ. ಪರಿಸರವಿದ್ದರೆ ಮಾತ್ರ ನಮ್ಮ ಬದುಕು, ನಾಳೆ ಪರಿಸರವಿಲ್ಲದಿದ್ದರೆ ಬದುಕಿಲ್ಲ. ಹೆದ್ದಾರಿ ಪಕ್ಕದಲ್ಲಿ ಈ ಬಾರಿ ನೂರಕ್ಕೂ ಹೆಚ್ಚು ಗಿಡ ನೆಡಬೇಕೆಂಬ ಯೋಜನೆಯಿದೆ ಎಂದು ಗೋವಿಂದ ಮಲೆಕುಡಿಯ ತಿಳಿಸಿದರು.

ಶಾಸಕ ವಿ. ಸುನಿಲ್ ಕುಮಾರ್ ಅವರು 5 ವರ್ಷಗಳ ಹಿಂದೆ ಪೇರಡ್ಕ ಹೆದ್ದಾರಿಯಿಂದ ಕಾಲನಿಗೆ ಆಗಮಿಸುವ ಮುಖ್ಯರಸ್ತೆಯನ್ನು 300 ಮೀ. ಕಾಂಕ್ರೀಟಿಕರಣಗೊಳಿಸಿದ್ದಾರೆ. ಪರಿಸರ ಹೋರಾಟಗಾರ್ತಿ ಮಾಳದ ಆರತಿ ಅಶೋಕ್ ನೇತೃತ್ವದಲ್ಲಿ ಟಾರ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಕಳೆದ ವರ್ಷ ಮಾರ್ಚ್ 3ರಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ಲೋಕಾಯುಕ್ತರು ರಸ್ತೆ ಅಭಿವೃದ್ಧಿಗೊಳಿಸುವಂತೆ ಇಲಾಖೆಗೆ ನಿರ್ದೇಶನ ನೀಡಿ ಒಂದನೇ ವಾರ್ಡ್‌ನಿಂದ ಬುಗಡುಗುಂಡಿವರೆಗೆ 200 ಮೀ. ರಸ್ತೆಯನ್ನು ಜೆಸಿಬಿ ಮೂಲಕ ವಿಸ್ತರಣಗೊಳಿಸಲಾಗಿದ್ದು, ಡಾಂಬರು ರಸ್ತೆಯಾಗಿ ಅಭಿವೃದ್ಧಿಪಡಿಸಿಲ್ಲ.

ಪರಿಸರ ಪ್ರೇಮಿಯಾಗಿರುವ ಗೋವಿಂದ ಗೌಡರಿಗೆ 55 ವರ್ಷ ಪ್ರಾಯ. 30 ವರ್ಷಗಳಿಂದ ದೈನಂದಿನ ಕೂಲಿ ಕೆಲಸ ಮಾಡುತ್ತಾ, ಅರಣ್ಯ ಇಲಾಖೆ ಸಹಕಾರದಲ್ಲಿ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಗಿಡನೆಟ್ಟು ಪೋಷಿಸುತ್ತಿದ್ದಾರೆ. ಕೋವಿಡ್‌–19 ಸಂಕಷ್ಟ ಸಂದರ್ಭದಲ್ಲಿ ಕೆಲಸ ಬಿಟ್ಟು ಮನೆಗೆಲಸದ ಜೊತೆ ರಸ್ತೆ ನಿರ್ಮಾಣ ಕೆಲಸದಲ್ಲಿ ತೊಡಗಿಕೊಂಡರು. ಗೋವಿಂದ ಗೌಡರು ಸಾಕ್ಷರತೆ ಆಂದೋಲನ ಅಡಿಯಲ್ಲಿ ಓದಿದ್ದಾರೆ. ಆದರೆ ಸರ್ಕಾರದಿಂದ ಉದ್ಯೋಗ ಖಾತರಿ ಯೋಜನೆ ಫಲಾನುಭವಿಯೆನಿಸಿಲ್ಲ. ಯಾವುದೇ ಇತರ ಸವಲತ್ತು ಕೂಡ ಪಡೆದುಕೊಂಡಿಲ್ಲ.

ಮೂಲತಃ ಕೃಷಿಕರಾಗಿರುವ ಗೋವಿಂದ ಮಲೆಕುಡಿಯ ರಸ್ತೆಯಲ್ಲಿ ಸಾಗುವ ದಾರಿಹೋಕರಿಗೆ ಅನುಕೂಲವಾಗುವಂತೆ ರಸ್ತೆಬದಿ 50ಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ. ಮಳೆಗಾಲದ ಸಮಯದಲ್ಲಿ ಶೃಂಗೇರಿ–ಮಾಳ–ಬಜಗೋಳಿ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಗಿಡ ನೆಡುವ ಯೋಜನೆ ಹೊಂದಿದ್ದಾರೆ.

ಗೋವಿಂದ ಮಲೆಕುಡಿಯ ಪ್ರತಿವರ್ಷ ರಸ್ತೆ ಕೆಲಸ ಮಾಡುತ್ತಿದ್ದಾರೆ. ರಸ್ತೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಪ್ರಸ್ತಾಪ ಕಳಿಸಲಾಗುವುದು
–ಉಮೇಶ್ ಪೂಜಾರಿ ಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ
ರಸ್ತೆ ನಿರ್ಮಾಣ ಮಾಡಿರುವ ಗೋವಿಂದ ಮಲೆಕುಡಿಯ ಅವರ ಸಾಹಸ ಮೆಚ್ಚುವಂಥದ್ದು. ಅವರಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು
–ನಾಗೇಶ್ ನಾಯಕ್, ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT