ಸೋಮವಾರ, ಆಗಸ್ಟ್ 2, 2021
25 °C
ಅನುದಾನ ವಾಪಸ್‌: ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ದಿನಕರ ಬಾಬು ಗರಂ

ಹೊಸ ಕಾಮಗಾರಿಗಳಿಗೆ ಆದ್ಯತೆ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹಿಂದಿನ ಕಾಮಗಾರಿಗಳ ಬಾಕಿ ಪಾವತಿಗೆ ಹೆಚ್ಚಿನ ಅನುದಾನ ವ್ಯಯ ಮಾಡದೆ ಹೊಸ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಅಧ್ಯಕ್ಷ ದಿನಕರ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿವರ್ಷ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಹೆಚ್ಚಿನ ಪಾಲು ಹಿಂದಿನ ವರ್ಷದ ಕಾಮಗಾರಿಗಳ ಬಾಕಿ ಪಾವತಿಗೆ ಬಳಕೆಯಾಗುತ್ತಿದೆ. ಪರಿಣಾಮ ಪ್ರಸಕ್ತ ವರ್ಷದಲ್ಲಿ ಹೊಸ ಕಾಮಗಾರಿಗಳ ಪ್ರಗತಿಗೆ ತೊಡಕಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಯಾ ವರ್ಷದ ಕಾಮಗಾರಿಗಳನ್ನು ಅದೇ ವರ್ಷ ಪೂರ್ಣಗೊಳಿಸಿ ಸಂಪೂರ್ಣ ಬಿಲ್‌ ಪಾವತಿಸಬೇಕು. ಮುಂದಿನ ವರ್ಷಕ್ಕೆ ಬಾಕಿ ಉಳಿಸಬಾರದು ಎಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

2019-20ನೇ ಸಾಲಿನಲ್ಲಿ ಕಟ್ಟಡ ಕಾಮಗಾರಿಗೆ ಮೀಸಲಿಟ್ಟಿದ್ದ ₹ 65 ಲಕ್ಷ ಅನುದಾನ ವ್ಯಯವಾಗದೆ, ಸರ್ಕಾರಕ್ಕೆ ಮರಳಿದೆ. ಮುಂಚಿತವಾಗಿ ಅನುದಾನ ಬಿಡುಗಡೆಯಾದರೂ ಕಾಮಗಾರಿ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಸಭೆಯಲ್ಲಿ ಎಲ್ಲರೂ ಒತ್ತಾಯಿಸಿದರು.

ಅನುದಾನ ಬಳಕೆಯಲ್ಲಿ ನಿರ್ಲಕ್ಷ್ಯ ತೋರಿರುವುದು ಜಿಲ್ಲಾ ಪಂಚಾಯಿತಿಯ ಆಡಳಿತ ವ್ಯವಸ್ಥೆಯ ವೈಫಲ್ಯ. ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಜಿಲ್ಲೆಯಲ್ಲಿ 1,965 ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆಯ ಶೇ 95.6ರಷ್ಟಾಗಿದೆ. 2,564 ಕ್ವಿಂಟಲ್‌ ಬಿತ್ತನೆ ಬೀಜ, 1,077 ಟನ್ ರಸಗೊಬ್ಬರ ವಿತರಿಸಲಾಗಿದೆ. 900 ಟನ್ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯಕ್ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಕೈಗಾರಿಕಾ ಇಲಾಖೆಯಿಂದ ಫಲಾನುಭವಿಗಳಿಗೆ ಪರಿಕರ ಶೀಘ್ರ ವಿತರಣೆಯಾಗಬೇಕು ಎಂದು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಸೂಚಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ. ಪುತ್ರನ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್, ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.