ಭಾನುವಾರ, ಮೇ 22, 2022
23 °C
ಕಬ್ಬಿನ ಕೊಡಿ, ಸುತ್ತಕ್ಕಿ ಸೇವೆ ಈ ಜಾತ್ರೆಯ ವಿಶೇಷ

ಕುಂದಾಪುರ: ಕೋಟೇಶ್ವರದ ಕೋಟಿಲಿಂಗೇಶ್ವರ ಬ್ರಹ್ಮರಥೋತ್ಸವ; ‘ಕೊಡಿ ಹಬ್ಬ’ ಇಂದು

ರಾಜೇಶ್ ಕೆ.ಸಿ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ನ.19ರಂದು ನಡೆಯುವ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥೋತ್ಸವ (ಕೊಡಿ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ದೇಶ-ವಿದೇಶದಲ್ಲಿರುವ ಸ್ಥಳೀಯರು ತವರಿಗೆ ಹೆಜ್ಜೆ ಇಡುತ್ತಿದ್ದಾರೆ. 

ಪುರಾಣದಲ್ಲಿ ಧ್ವಜಪುರವೆಂದು ಪ್ರಸಿದ್ದಿಯಾದ ಕೋಟೇಶ್ವರದ ‘ಕೊಡಿ ಹಬ್ಬ' ದಲ್ಲಿ ಕೋಟಿಲಿಂಗೇಶ್ವರನನ್ನು ಕುಳ್ಳಿರಿಸುವ ಬ್ರಹ್ಮರಥಕ್ಕೆ ಶತಮಾನಗಳ ಇತಿಹಾಸವಿದೆ. ರಾಜ್ಯದಲ್ಲಿರುವ ಬ್ರಹ್ಮ ರಥಗಳ ಪೈಕಿ ದೊಡ್ಡದು ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಧ್ವಜ ಸ್ತಂಭಕ್ಕೆ ಗರ್ನಪಠಾರೋಹಣ (ಗರ್ನ ಕಟ್ಟುವುದು) ನಡೆದ ಬಳಿಕ, 7 ದಿನಗಳ ಕಾಲ ಉತ್ಸವವನ್ನು ವೈಭವದಿಂದ ಆಚರಿಸಲಾಗುತ್ತದೆ. ಜಾತ್ರೆಯ ಪೂರ್ವಭಾವಿಯಾಗಿ ಕಟ್ಟ ಕಟ್ಟಳೆ ‘ ಕಟ್ಟೆ ಸೇವೆ ‘ ಗಾಗಿ ಸುತ್ತ-ಮುತ್ತಲಿನ ಗ್ರಾಮಗಳ ಮನೆ ಬಾಗಿಲಿಗೆ ಬರುವ  ದೇವರನ್ನು ಬರಮಾಡಿಕೊಂಡು ಪೂಜೆಯನ್ನು ಸಲ್ಲಿಸುವುದು ಕೋಟೇಶ್ವರ ಹಾಗೂ ಕುಂದಾಪುರ ಪರಿಸರದಲ್ಲಿ ವಾಡಿಕೆ. ಹೆದ್ದಾರಿಗಾಗಿ ಪಾರಂಪರಿಕ ಕಟ್ಟೆಗಳು ತೆರವಾದ ಬಳಿಕ, ತಾತ್ಕಾಲಿಕವಾಗಿ ನಿರ್ಮಿಸಲಾದ ಕಟ್ಟೆಗಳಲ್ಲಿ   ಉತ್ಸವ ಮೂರ್ತಿಯನ್ನು ಇಟ್ಟು ಪೂಜಿಸುವ ಸಂಪ್ರದಾಯ ಪ್ರಾರಂಭವಾಗಿದೆ.

ಕೊಡಿ ಹಬ್ಬ: ಕರಾವಳಿ ಜನರ ಆಡುಮಾತಿನಂತೆ ‘ಕೊಡಿ ಹಬ್ಬ’ ಎನ್ನುವ ಹೆಸರು ಹುಟ್ಟಿಕೊಳ್ಳಲು ಹಲವು ಕಾರಣಗಳನ್ನು ಹೇಳಲಾಗುತ್ತಿದೆ. ಕೋಟೇಶ್ವರದ ಆಳ್ವಿಕೆ ನಡೆಸುತ್ತಿದ್ದ ಮಾಹಿಷ್ಮತಿ ರಾಜ ವಸು ಮಹಾರಾಜ, ಕೋಟಿಲಿಂಗೇಶ್ವರನಿಗೆ ಬ್ರಹ್ಮ ರಥ ಅರ್ಪಣೆ ಮಾಡಲು ನಿಶ್ಚಯಿಸಿದ್ದ. ಜಾತ್ರೆಯ ದಿನವಾದರೂ ರಥ ನಿರ್ಮಾಣ ಸಾಧ್ಯವಾಗದೆ ಇದ್ದುದರಿಂದಾಗಿ, ಕೊಡಿ (ಬಿದಿರು) ಯಿಂದ ನಿರ್ಮಿಸಿದ ರಥದಲ್ಲಿ ಮೊದಲ ಉತ್ಸವ ನಡೆಯಿತು.  ಅದಕ್ಕಾಗಿ ‘ಕೊಡಿ ಹಬ್ಬ' ಎಂದಾಯಿತು ಎನ್ನುವ ವ್ಯಾಖ್ಯಾನ ಇದೆ.  ನವ ದಂಪತಿಗಳು ಇಲ್ಲಿನ ಕೊಡಿ (ಕಬ್ಬಿನ ಜಲ್ಲೆ) ಯನ್ನು ಕೊಂಡೊಯ್ದರೆ, ಸಂತಾನ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆಗಳೂ ಇವೆ. 

ಸುತ್ತಕ್ಕಿ ಸೇವೆ: ಜಾತ್ರೆಯ ದಿನದಂದು ಭಕ್ತರು, ಅಂದಾಜು 4.5 ಎಕರೆ ವಿಸ್ತೀರ್ಣ ದೇಗುಲ ಪುಷ್ಕರಣಿ ‘ಕೋಟಿ ತೀರ್ಥ’ ದಲ್ಲಿ ಸ್ನಾನ ಮುಗಿಸಿ, ಪುಷ್ಕರಣಿಯ ಸುತ್ತ ಬಿಳಿ ಬಟ್ಟೆಯನ್ನು ಹಾಸಿರುವ ಅಪೇಕ್ಷಿತರಿಗೆ, ಮುಷ್ಠಿ ಅಕ್ಕಿಯನ್ನು ಹಾಕಿ ಹರಕೆಯನ್ನು ತೀರಿಸುತ್ತಾರೆ. ಇದನ್ನು ‘ಸುತ್ತಕ್ಕಿ ಸೇವೆ’ ಎನ್ನುತ್ತಾರೆ.

ವಾರದ ಮೊದಲೇ ಹಂಗಳೂರಿನಿಂದ-ತೆಕ್ಕಟ್ಟೆ-ಕಾಳಾವರದ ವರೆಗಿನ ಪರಿಸರದ್ಲಲಿ ಪೂರ್ವ ಸಿದ್ಧತೆಗಳು ಗೋಚರಿಸುತ್ತವೆ. ಎಲ್ಲ ಧರ್ಮದವರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಸಂಘ– ಸಂಸ್ಥೆಗಳು ಹಾಗೂ ಸಾರ್ವಜನಿಕರು ಕಟ್ಟಡ ಹಾಗೂ ಪೇಟೆಯನ್ನು ದೀಪಾಲಂಕಾರಗಳಿಂದ ಸಿಂಗರಿಸುವ ಮೂಲಕ ಹಬ್ಬಕ್ಕೆ ಮೆರಗು ನೀಡುತ್ತಾರೆ. ಜಾತ್ರೆಯ ಮರುದಿನ ( ನ.20 ) ಮಧ್ಯರಾತ್ರಿಯಿಂದ ನಸುಕಿನ ತನಕ ನಡೆಯುವ ಪಾರಂಪರಿಕ ಓಕುಳಿಯಾಟ ನೋಡಲು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಹಾಗೂ ಸುತ್ತಲ ಜನರು ಕಾದಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.