ಶನಿವಾರ, ಅಕ್ಟೋಬರ್ 1, 2022
20 °C
ಆ.19ರಂದು ಕೃಷ್ಣ ಜನ್ಮಾಷ್ಟಮಿ, 20ರಂದು ವಿಟ್ಲಪಿಂಡಿ ಉತ್ಸವ

ಕಡೆಗೋಲು ಕೃಷ್ಣನೂರಿನಲ್ಲಿ ಅಷ್ಟಮಿ ರಂಗು

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಡೆಗೋಲು ಕೃಷ್ಣನೂರು ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಐತಿಹಾಸಿಕ ವಿಟ್ಲಪಿಂಡಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಕೃಷ್ಣಮಠದ ರಥಬೀದಿಯ ಪರಿಸರ ಅಷ್ಟಮಿಗೆ ಸಿಂಗಾರಗೊಳ್ಳುತ್ತಿದ್ದು ಉತ್ಸವದ ರಂಗೇರುತ್ತಿದೆ.

ಪರ್ಯಾಯ ಮಠವಾಗಿರುವ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿದ್ದು, ಈಗಾಗಲೇ ಅಷ್ಟದಿನೋತ್ಸವ ಹಾಗೂ ಕೃಷ್ಣಾಷ್ಟಮಿ ಸ್ಪರ್ಧೆಗಳಿಗೆ ಚಾಲನೆ ನೀಡಲಾಗಿದೆ.

19ರಂದು ಕೃಷ್ಣ ಜನ್ಮಾಷ್ಟಮಿ:

ಈ ಬಾರಿ ಕೃಷ್ಣಮಠದಲ್ಲಿ ಆ.19ರಂದು ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. 20 ರಂದು ವಿಟ್ಲಪಿಂಡಿ ಉತ್ಸವ ನೆರವೇರಲಿದೆ ಎಂದು ಪರ್ಯಾಯ ಕೃಷ್ಣಾಪುರ ಮಠ ತಿಳಿಸಿದೆ. ಜಿಲ್ಲಾಡಳಿತದಿಂದ ಆಯೋಜಿಸಿರುವ ಕೃಷ್ಣ ಜಯಂತಿ ಆ.19ರಂದು ನಡೆಯಲಿದೆ.

ಸಿಂಗಾರಗೊಂಡ ರಥಬೀದಿ:

ವಿಟ್ಲಪಿಂಡಿಯ ದಿನ ನಡೆಯುವ ಸಾಂಪ್ರದಾಯಿಕ ಹಾಗೂ ಪ್ರಮುಖ ಆಕರ್ಷಣೆಯಾಗಿರುವ ಮೊಸರು ಕುಡಿಕೆ ಒಡೆಯುವ ಆಚರಣೆಗೆ ರಥಬೀದಿಯ 14 ಕಡೆಗಳಲ್ಲಿ ಗುರ್ಜಿಗಳನ್ನು ನೆಡಲಾಗಿದೆ. ಉತ್ಸವದ ದಿನ ಗುರ್ಜಿಗಳಿಗೆ ಮೊಸರು, ಅರಿಶಿನ, ಕುಂಕುಮ ತುಂಬಿದ ಕುಡಿಕೆಗಳನ್ನು ಕಟ್ಟಲಾಗುತ್ತದೆ. ಫಲ–ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ಮೊಸರು ತುಂಬಿದ ಕುಡಿಕೆಗಳನ್ನು ಗೊಲ್ಲ ವೇಷಧಾರಿಗಳು ಒಡೆಯುವ ದೃಶ್ಯಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಕೋವಿಡ್ ಕಾರಣದಿಂದ ಕಳೆದೆರಡು ವರ್ಷಗಳಿಂದ ಹುಲಿವೇಷದ ರಂಗು ಮಾಸಿತ್ತು. ಈ ಬಾರಿ ಅಷ್ಟಮಿಯಲ್ಲಿ ಮತ್ತೆ ಹುಲಿ ವೇಷಧಾರಿಗಳ ಕುಣಿತವನ್ನು ಕಣ್ತುಂಬಿಕೊಳ್ಳಬಹುದು. ಜತೆಗೆ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಉತ್ಸವದ ಮೆರಗನ್ನು ಹೆಚ್ಚಿಸಲಿದೆ.

ಚಕ್ಕುಲಿ ಉಂಡೆಗಳ ತಯಾರಿ:

ಕೃಷ್ಣನಿಗೆ ಬಲು ಪ್ರಿಯವಾದ ಚಕ್ಕುಲಿ ಹಾಗೂ ಐದಾರು ಬಗೆಯ ಉಂಡೆಗಳನ್ನು ಅಷ್ಟಮಿಗೂ ಒಂದೆರಡು ದಿನ ಮುನ್ನ ತಯಾರಿಸಲಾಗುತ್ತದೆ. ಬುಧವಾರ ಅಥವಾ ಗುರುವಾರ ಚಕ್ಕುಲಿ ಹಾಗೂ ಉಂಡೆಗಳ ತಯಾರಿಗೆ ಚಾಲನೆ ಸಿಗಲಿದೆ. ದೇವರಿಗೆ ನೈವೇದ್ಯವಾಗಿ ಅರ್ಪಿಸಲು ಹಾಗೂ ಸಾರ್ವಜನಿಕರಿಗೆ ಪ್ರಸಾದವಾಗಿ ವಿತರಿಸಲು ಲಕ್ಷದಷ್ಟು ಉಂಡೆ ಹಾಗೂ ಚಕ್ಕುಲಿಗಳನ್ನು ತಯಾರಿಸಲಾಗುತ್ತದೆ.

ಭಕ್ತರಿಗೆ ಪ್ರಸಾದವಾಗಿ ಹಂಚಿಕೆ:

ವಿಟ್ಲಪಿಂಡಿ ಉತ್ಸವದ ದಿನ ಪುತ್ತಿಗೆ ಮಠದ ಎದುರಿಗೆ ನಿರ್ಮಿಸುವ ವೇದಿಕೆಯ ಮೇಲೆ ನಿಂತು ಪರ್ಯಾಯ ಸ್ವಾಮೀಜಿಗಳು ಹಾಗೂ ಇತರ ಯತಿಗಳು ಚಕ್ಕುಲಿ ಹಾಗೂ ಉಂಡೆಗಳನ್ನು ಭಕ್ತರತ್ತ ತೂರುವುದು ಸಂಪ್ರದಾಯ. ಈ ವೇಳೆ ಕೃಷ್ಣನ ಪ್ರಸಾದಕ್ಕೆ ಭಕ್ತರು ಮುಗಿಬೀಳುತ್ತಾರೆ. ಶಾಲೆಗಳ ಮಕ್ಕಳಿಗೂ ಚಕ್ಕುಲಿ ಉಂಡೆ ಪ್ರಸಾದ ವಿತರಿಸಲಾಗುತ್ತದೆ.

ಕೃಷ್ಣ ವೇಷ ಸ್ಪರ್ಧೆ

ಅಷ್ಟಮಿಯ ದಿನ ಕೃಷ್ಣ ವೇಷಧಾರಿಗಳಾಗಿ ಕಂಗೊಳಿಸುವ ಮುದ್ದು ಕಂದಮ್ಮಗಳು ‍ಪ್ರಮುಖ ಆಕರ್ಷಣೆ. ಆ.19ರಂದು ಬೆಳಿಗ್ಗೆ 9.30ಕ್ಕೆ ಕೃಷ್ಣಮಠದ ಮಧ್ವಾಂಗಣ, ಭೋಜನ ಶಾಲೆ ಮಾಳಿಗೆ, ಅನ್ನಬ್ರಹ್ಮದಲ್ಲಿ ಮುದ್ದುಕೃಷ್ಣ, ಬಾಲಕೃಷ್ಣ ಹಾಗೂ ಗೋಪಾಲ ಕೃಷ್ಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೂರು ವಿಭಾಗದಲ್ಲೂ ತಲಾ 150ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಲಿದ್ದು, ಅಂದು ಕೃಷ್ಣಮಠದ ಪರಿಸರದ ತುಂಬೆಲ್ಲ ಬಾಲಗೋಪಾಲ ಕೃಷ್ಣರ ಕಲರವ ತುಂಬಿರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು