ಸೋಮವಾರ, ಜೂನ್ 21, 2021
21 °C
ಭೂ ಮಾಲೀಕತ್ವ ಬದಲಾವಣೆ ಇಲ್ಲ; ವಲಯದಲ್ಲಿರುವವರ ಸ್ಥಳಾಂತರ ಇಲ್ಲ: ಸ್ಪಷ್ಟನೆ

ಕುದುರೆಮುಖ ರಾಷ್ಟ್ರೀಯ ಉದ್ಯಾನ ಪರಿಸರ ಸೂಕ್ಷ್ಮ ವಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು ಕೇಂದ್ರ ಅರಣ್ಯ ಹಾಗೂ ಪರಿಸರ ಸಚಿವಾಲಯ ಈಚೆಗೆ ಪರಿಸರ ಸೂಕ್ಷ್ಮ ವಲಯದ ಗಡಿ ಎಂದು ಗುರುತಿಸಿ ಆದೇಶಿಸಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವು ಪಶ್ಚಿಮಘಟ್ಟಗಳ ಹೃದಯಭಾಗದಲ್ಲಿರುವ ‘ಯುನೆಸ್ಕೋ’ ಮಾನ್ಯತೆ ಪಡೆದ ವಿಶ್ವದ ನೈಸರ್ಗಿಕ ಪರಂಪರೆಯ ತಾಣವಾಗಿದ್ದು, ಅಳಿವಿನಂಚಿನಲ್ಲಿರುವ ಪ್ರಾಣಿಗಳ ಆವಾಸ ತಾಣವಾಗಿದೆ.

ಸಿಂಹ ಬಾಲದ ಕೋತಿ, ಮಲಬಾರ್ ಡ್ಯಾನ್ಸಿಂಗ್ ಕಪ್ಪೆ, ಸ್ಥಳೀಯ ಆರ್ಕಿಡ್‌ ಸಸ್ಯವರ್ಗ ಒಳಗೊಂಡ ಅಪರೂಪದ ಪ್ರಬೇಧಗಳಿಗೆ ನೆಲೆಯಾಗಿದೆ. ತುಂಗಾ, ಭದ್ರಾ, ನೇತ್ರಾವತಿಯಂತಹ ನದಿಗಳ ಮೂಲವಾಗಿದ್ದು, ಶೋಲಾ ಹುಲ್ಲುಗಾವಲು ಹೊಂದಿದೆ. ನೀರಿನ ಸಂರಕ್ಷಣೆಯಲ್ಲಿ ನೈಸರ್ಗಿಕ ಓವರ್ ಹೆಡ್ ಟ್ಯಾಂಕ್ ಎಂತಲೂ ಕರೆಯಲಾಗುತ್ತದೆ. 

ಸಂರಕ್ಷಿತ ಪ್ರದೇಶಗಳಲ್ಲಿ ತೊಂದರೆ ತಪ್ಪಿಸಲು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತಲಿನ ಪರಿಸರವನ್ನು ಸೂಕ್ಷ್ಮ ವಲಯ ಎಂದು ಘೋಷಿಸಲಾಗಿದೆ. ಇದರಿಂದ ಕಾಡಿಗೆ ರಕ್ಷಣೆ ಹೆಚ್ಚಾಗಲಿದ್ದು, ಮನುಷ್ಯ-ಪ್ರಾಣಿ ಸಂಘರ್ಷ ತಗ್ಗಲಿದೆ. ವಿವೇಚನೆ ಇಲ್ಲದ ಕೈಗಾರೀಕರಣ ತಪ್ಪಲಿದೆ. ಮುಖ್ಯವಾಗಿ ಸ್ಥಳೀಯ ಸಮುದಾಯದ ಚಟುವಟಿಕೆಗಳಿಗೆ ಯಾವ ತೊಂದರೆಯಾಗುವುದಿಲ್ಲ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಭೂಮಿಯ ಮಾಲೀಕತ್ವ ಬದಲಾಯಿಸುವುದಿಲ್ಲ. ಕಂದಾಯ ಹಾಗೂ ಪಟ್ಟಾ ಜಮೀನು ಯಥಾಸ್ಥಿತಿಯಲ್ಲಿರಲಿದೆ. ವಲಯದ ಒಳಗೆ ವಾಸಿಸುವ ಜನರನ್ನು ಸ್ಥಳಾಂತರಿಸಲಾಗುವುದಿಲ್ಲ. ಅಲ್ಲಿಯೇ ವಾಸವಿದ್ದು, ನಿಯಮಿತ ಚಟುವಟಿಕೆಗಳನ್ನು ನಿರ್ವಹಿಸಬಹುದು.

ಮೂಲಸೌಕರ್ಯಗಳಾದ ವಿದ್ಯುತ್, ನೀರಿನ ಪೈಪ್‌ಲೈನ್‌, ರಸ್ತೆ, ಸೇತುವೆ ನಿರ್ಮಾಣ ಪರಿಸರ ಸೂಕ್ಷ್ಮ ವಲಯದಲ್ಲಿ ನಿಷೇಧಿತ ಚಟುವಟಿಕೆಗಳಾಗಿರುವುದಿಲ್ಲ. ಸ್ಥಳೀಯ ಸಮುದಾಯಗಳಿಂದ ಕೃಷಿ ಮತ್ತು ತೋಟಗಾರಿಕೆ ಪದ್ಧತಿಗಳಿಗೂ ನಿಷೇಧವಿಲ್ಲ ಎಂದು ತಿಳಿಸಿದ್ದಾರೆ.

ಮಾನವ ಪ್ರಚೋದಿತ ಭೂಕುಸಿತಗಳಿಂದ ರಕ್ಷಣೆ, ವಾಯು ಮಾಲಿನ್ಯ, ನೀರು ಮತ್ತು ಮಣ್ಣಿನ ಮಾಲಿನ್ಯ ತಪ್ಪಿಸಿ ಉತ್ತಮ ಜೀವನ ನಡೆಸಲು ಸಹಾಯಕವಾಗಲಿದೆ. ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಸಾಮಿಲ್‌, ಮಾಲಿನ್ಯಕಾರಕ ಕೈಗಾರಿಕೆ ಸ್ಥಾಪನೆ, ಪ್ರಮುಖ ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಯಂತಹ ದೊಡ್ಡ ಕೈಗಾರಿಕಾ ಚಟುವಟಿಕೆಗಳು ನಿಷೇಧಿತ ಪಟ್ಟಿಯಲ್ಲಿವೆ. 

‘ಗಡಿ ಮಿತಿ ಇಳಿಕೆ’

ಕಂದಾಯ, ಅರಣ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಾಭಿವೃದ್ಧಿ ಪರಿಸರ ವಿಜ್ಞಾನ ಪರಿಣಿತರು, ಎನ್‌ಜಿಒ, ಮೂಡಿಗೆರೆ, ಕಾರ್ಕಳ, ಬೆಳ್ತಂಗಡಿ ಮತ್ತು ಶೃಂಗೇರಿ ಶಾಸಕರನ್ನೊಳಗೊಂಡ ಸಮಿತಿ ಹಾಗೂ ಜನರೊಂದಿಗೆ ಚರ್ಚಿಸಿ ಝೋನಲ್ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ನಿರ್ವಹಣೆ ಮಾಡಲಾಗುತ್ತದೆ. ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ರಾಷ್ಟ್ರೀಯ ಉದ್ಯಾನದ ಹೊರಗೆ ಅಗತ್ಯವಿರುವ ಕನಿಷ್ಠ ಪ್ರದೇಶಕ್ಕೆ ಮಿತಿಗೊಳಿಸಿ ನಿರ್ವಹಣೆ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಗಡಿಯನ್ನು ಹಿಂದಿನ ಕರಡು ಹಂತದ 10 ಕಿ.ಮೀ. ರೇಖೆಯ ಬದಲಾಗಿ ರಾಷ್ಟ್ರೀಯ ಉದ್ಯಾನದ ಗಡಿಯಿಂದ 1 ಕಿ.ಮೀಗೆ ಇಳಿಸಲಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು