ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಮುಂಗಾರು ಪೂರ್ವ ಮಳೆ ಕೊರತೆ: ಕೃಷಿಗೆ ಹಿನ್ನಡೆ

Published 20 ಮೇ 2024, 7:27 IST
Last Updated 20 ಮೇ 2024, 7:27 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನೆಡೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳದೆ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಸಾಮಾನ್ಯವಾಗಿ ಮೇ ತಿಂಗಳಲ್ಲಿ ಕೃಷಿಕರು ಭತ್ತ ನಾಟಿಗೆ ಭೂಮಿ ಹಸನುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದರು. ಆದರೆ, ಈ ಬಾರಿ ಮಳೆ ಕೊರತೆಯಿಂದ ಭೂಮಿ ಉಳುಮೆಗೆ ಪೂರಕ ವಾತಾವರಣ ನಿರ್ಮಾಣವಾಗಿಲ್ಲ.

ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮಾನ್ಸೂನ್ ಪೂರ್ವ ಅಂದರೆ ಮಾರ್ಚ್‌ನಿಂದ ಮೇವರೆಗಿನ ಅವಧಿಯಲ್ಲಿ ಜಿಲ್ಲೆಯಲ್ಲಿ 78 ಮಿ.ಮೀ ಮಾತ್ರ ಮಳೆಯಾಗಿದೆ. ಈ ಅವಧಿಯಲ್ಲಿ 90 ಮಿ.ಮೀ ಮಳೆಯಾಗಬೇಕಿತ್ತು. ಅಂದರ ಶೇ 14ರಷ್ಟು ಮಳೆ ಕೊರತೆ ಉಂಟಾಗಿದೆ. ಜನವರಿಯಲ್ಲಿ ಉತ್ತಮ ಮಳೆಯಾಗಿದ್ದು ಬಿಟ್ಟರೆ ನಂತರ ಮಳೆ ಕೊರತೆ ಕಾಣಿಸಿಕೊಂಡಿದೆ.

ಜನವರಿಯಿಂದ ಮೇ 15ರವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಸ್ವಲ್ಪ ಹೆಚ್ಚು ಮಳೆ ಬಂದಿದ್ದರೂ ಮೇನಲ್ಲಿ ತೀವ್ರ ಮಳೆ ಕೊರತೆಯಾಗಿರುವುದು ಭತ್ತದ ಕೃಷಿ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಜನವರಿಯಲ್ಲಿ 1.60 ಮಿ.ಮೀ ವಾಡಿಕೆಗೆ ಪ್ರತಿಯಾಗಿ 46 ಮಿ.ಮೀ, ಫೆಬ್ರುವರಿಯಲ್ಲಿ ಶೂನ್ಯ, ಮಾರ್ಚ್‌ನಲ್ಲಿ 8.40 ಮಿ.ಮೀ ವಾಡಿಕೆಗೆ 2.10 ಮಿ.ಮೀ, ಏಪ್ರಿಲ್‌ನಲ್ಲಿ 25.90 ಮಿ.ಮೀಗೆ ವಾಡಿಕೆಗೆ ಪ್ರತಿಯಾಗಿ 52.30 ಮಿ.ಮೀ ಹಾಗೂ ಮೇನಲ್ಲಿ 45.70 ಮಿ.ಮೀ ಪ್ರತಿಯಾಗಿ ಇದುವರೆಗೂ 14.20 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಹಲವು ನದಿಗಳು ಹರಿದರೂ ಕೃಷಿಗೆ ಪೂರಕವಾಗಿ ನೀರಾವರಿ ಯೋಜನೆಗಳು ಇಲ್ಲವಾದ ಪರಿಣಾಮ ಭತ್ತದ ಕೃಷಿ ಬಹುತೇಕ ಮಳೆಯಾಶ್ರಿತವಾಗಿದೆ. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆ ಸುರಿದರೆ ಮಾತ್ರ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ. ಕನಿಷ್ಠ ವಾರವಾದರೂ ಬಿರುಸು ಮಳೆ ಸುರಿದರೆ ಕೃಷಿ ಭೂಮಿ ಸಡಿಲಗೊಂಡು ಉಳುಮೆಗೆ ಸಹಾಯವಾಗುತ್ತದೆ.

ಆದರೆ, ಜಿಲ್ಲೆಯಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದರಿಂದ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿಲ್ಲ. ಮಳೆ ಬಿದ್ದಷ್ಟೇ ವೇಗವಾಗಿ ಭೂಮಿಯಿಂದ ನೀರು ಆವಿಯಾಗುತ್ತಿದೆ. ತೋಡು, ಕೆರೆ, ನದಿಗಳಲ್ಲಿ ನೀರಿನ ಒರತೆ ಹೆಚ್ಚಾಗಿಲ್ಲ.

ಆದರೂ ಉತ್ತಮ ಮಳೆ ನಿರೀಕ್ಷೆಯ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಭತ್ತದ ಕೃಷಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವರ್ಷ ಜಿಲ್ಲೆಯಲ್ಲಿ 36,509 ಹೆಕ್ಟೇರ್ ಭೂಮಿಯಲ್ಲಿ ಭತ್ತದ ಕೃಷಿ ಗುರಿ ಇಟ್ಟುಕೊಂಡಿದೆ. ಉಡುಪಿ ತಾಲ್ಲೂಕಿನಲ್ಲಿ 16,800 ಹೆಕ್ಟೇರ್, ಕುಂದಾಪುರ ತಾಲ್ಲೂಕಿನಲ್ಲಿ 13,500 ಹೆಕ್ಟೇರ್, ಕಾರ್ಕಳ ತಾಲ್ಲೂಕಿನಲ್ಲಿ 6,209 ಹೆಕ್ಟೇರ್ ಭತ್ತದ ಕೃಷಿ ಗುರಿ ಇದೆ.  ಇದುವರೆಗೂ ಜಿಲ್ಲೆಯಲ್ಲಿ ಭತ್ತದ ನಾಟಿ ಆರಂಭವಾಗಿಲ್ಲ.

2,500 ಕ್ವಿಂಟಲ್ ಬಿತ್ತನೆ ಬೀಜ ಬೇಡಿಕೆ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ 2,535 ಕ್ವಿಂಟಲ್‌ ಭತ್ತದ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು ದಾಸ್ತಾನು ಇರಿಸಿಕೊಳ್ಳಲಾಗಿದ್ದ 1,391 ಕ್ವಿಂಟಲ್‌ನಲ್ಲಿ ರೈತರಿಗೆ 590 ಕ್ವಿಂಟಲ್‌ ವಿತರಿಸಲಾಗಿದೆ. 800 ಕ್ವಿಂಟಲ್‌ನಷ್ಟು ದಾಸ್ತಾನು ಇದೆ. ತಾಲ್ಲೂಕುವಾರು ರೈತರಿಗೆ ಬಿತ್ತನ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಉಡುಪಿ ತಾಲ್ಲೂಕಿನಲ್ಲಿ 1350 ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಇದ್ದು, ರೈತರಿಗೆ 303 ಕ್ವಿಂಟಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. 367 ಕ್ವಿಂಟಲ್‌ ದಾಸ್ತಾನು ಇರಿಸಿಕೊಳ್ಳಲಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ 900 ಕ್ವಿಂಟಲ್‌ ಬೇಡಿಕೆ ಇದ್ದು 263 ಕ್ವಿಂಟಲ್ ವಿತರಣೆಯಾಗಿದ್ದು 277 ಕ್ವಿಂಟಲ್‌ ದಾಸ್ತಾನು ಇದೆ. ಕಾರ್ಕಳ ತಾಲ್ಲೂಕಿನಲ್ಲಿ 200 ಕ್ವಿಂಟಲ್‌ ಬೇಡಿಕೆ ಇದ್ದು 25 ಕ್ವಿಂಟಲ್ ವಿತರಿಸಲಾಗಿದ್ದು 150 ಟನ್ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಸತೀಶ್ ಮಾಹಿತಿ ನೀಡಿದರು.

ಈ ಬಾರಿ ರೈತರಿಗೆ ಎಂಒ–4, ಸಹ್ಯಾದ್ರಿ ಕೆಂಪು ಮುಕ್ತಿ ಹಾಗೂ ಉಮಾ ತಳಿಯ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಎಂಒ–4 ತಳಿಗೆ ಹೆಚ್ಚು ಬೇಡಿಕೆ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ರೈತರು ಸ್ವತಃ ಬೀಜವನ್ನು ಹೊಂದಿಸಿಕೊಳ್ಳುವುದರಿಂದ ಬಿತ್ತನೆ ಬೀಜದ ಸಮಸ್ಯೆ ಕಾಡುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು ಇರಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಯೂರಿಯಾ, ಎಂಒಪಿ, ಡಿಎಪಿ, ಎನ್‌ಪಿಕೆ ರಸಗೊಬ್ಬರ ಬಳಕೆ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 2,955 ಟನ್‌ ರಸಗೊಬ್ಬರ ಬೇಡಿಕೆ ಇದ್ದು ಪ್ರತಿಯಾಗಿ 4398 ಟನ್‌ ರಸಗೊಬ್ಬರ ದಾಸ್ತಾನು ಇದೆ. ಬೇಡಿಕೆಯಿಂದ ರಸಗೊಬ್ಬರ ದಾಸ್ತಾನು ಹೆಚ್ಚಾಗಿದ್ದು ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯ ನಿರೀಕ್ಷೆಯಿದ್ದು ಕಳೆದ ವರ್ಷಕ್ಕೆ (36,000 ಹೆಕ್ಟೇರ್) ಹೋಲಿಸಿದರೆ ಈ ವರ್ಷ 36509 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಭತ್ತದ ಕೃಷಿಗೆ ಪೂರಕವಾಗಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇರಿಸಲಾಗಿದ್ದು ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿಳಿಸಿದರು.

ಈ ವರ್ಷ ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಭತ್ತದ ಕೃಷಿಗೆ ನೀರೇ ಪ್ರಧಾನವಾಗಿರುವುದರಿಂದ ಕೃಷಿ ಭೂಮಿಯಲ್ಲಿ ನೀರು ನಿಲ್ಲುವಷ್ಟು ಮಳೆ ಬರಬೇಕು. ಭತ್ತದ ಪೈರಿಗೂ ಹೆಚ್ಚು ನೀರು ಅವಶ್ಯಕತೆ ಇರುವುದರಿಂದ ಉತ್ತಮ ಮಳೆಯಾದಷ್ಟೆ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ.
–ಶಶಿಧರ್‌ ಕೃಷಿಕ
ಕರಾವಳಿಯಲ್ಲಿ ಭತ್ತದ ಕೃಷಿ ಸವಾಲಾಗಿರುವ ಮಧ್ಯೆಯೇ ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಈ ವರ್ಷ ಸರ್ಕಾರ ಬಿತ್ತನೆ ಬೀಜದ ದರವನ್ನು ಕೆ.ಜಿಗೆ 9.50 ಹೆಚ್ಚಿಸಿರುವುದು ಸಣ್ಣ ರೈತರಿಗೆ ಹೊಡೆತ
–ವಿಶ್ವನಾಥ್ ಶೆಟ್ಟಿ ಕೃಷಿಕ
ಕೆಲವು ವರ್ಷಗಳಿಂದ ಭತ್ತದ ಕೃಷಿಗೆ ಸಮರ್ಪಕ ನೀರು ಸಾಲದೆ ಇಳುವರಿ ಕುಸಿತವಾಗುತ್ತಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ.
–ಶ್ರೀನಿವಾಸ್‌ ಕೃಷಿಕ
ಮೇನಲ್ಲಿ ಜಿಲ್ಲೆಯಲ್ಲಿ ಉಳುಮೆ ನೇಜಿ ಸಿದ್ಧತೆ ಪ್ರಕ್ರಿಯೆ ನಡೆಯುತ್ತದೆ. ಜೂನ್‌ನಲ್ಲಿ ನಾಟಿ ಕಾರ್ಯ ಆರಂಭವಾಗುತ್ತದೆ. ಈ ವರ್ಷ ಮೇ ಅಂತ್ಯವಾಗುತ್ತಾ ಬಂದರೂ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಬಿರುಸುಪಡೆದಿಲ್ಲ. ‍
–ಗುರುದತ್‌ ಕೃಷಿಕ
ಕಾರ್ಕಳ; ಆರಂಭಗೊಳ್ಳದ ಕೃಷಿ ಚಟುವಟಿಕೆ
ಕಾರ್ಕಳ ತಾಲ್ಲೂಕಿನಲ್ಲಿ ಮೇ ತಿಂಗಳು ಅಂತ್ಯವಾಗುತ್ತಾ ಬಂದರೂ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿಲ್ಲ. ಇಲ್ಲಿನ ರೈತಾಪಿ ವರ್ಗ ಮುಖ್ಯ ಬೆಳೆಯಾಗಿ ಭತ್ತದ ಬೇಸಾಯವನ್ನೇ ಮಾಡುತ್ತಿದ್ದು ಭತ್ತ ಕೃಷಿಗೆ ಅಗತ್ಯವಿರುವಷ್ಟು ನೀರು ಲಭ್ಯವಿಲ್ಲದ ಪರಿಣಾಮ ನಾಟಿ ಕಾರ್ಯ ಆರಂಭಗೊಂಡಿಲ್ಲ. ಕೃಷಿಕರು ಮಳೆಯ ನಿರೀಕ್ಷೆಯಲ್ಲಿದ್ದು ಉತ್ತಮ ಮಳೆ ಸುರಿದರೆ ಭೂಮಿ ಹಸನುಗೊಂಡು ನಂತರ ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಬಾವಿ ಕೆರೆ ಅಥವಾ ನದಿ ನೀರಿನ ಸೌಲಭ್ಯ ಇದ್ದವರು ಮಾತ್ರ ಕೃಷಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಭತ್ತ ಬಿತ್ತನೆ ಗುರಿ (ಹೆಕ್ಟೇರ್‌ಗಳಲ್ಲಿ) ಉಡುಪಿ;16800 ಕುಂದಾಪುರ;13500 ಕಾರ್ಕಳ;6209 ಒಟ್ಟು;36509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT