ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಶಲ ಆಧಾರಿತ ಶಿಕ್ಷಣದ ಕೊರತೆ: ಸಂತೋಷ ಕೌಲಗಿ

ಇಬ್ಬರು ಹಿರಿಯ ನೇಕಾರರಿಗೆ ‘ನೇಕಾರ ರತ್ನ’ ಪ್ರಶಸ್ತಿ ಪ್ರದಾನ
Published 29 ಆಗಸ್ಟ್ 2024, 13:56 IST
Last Updated 29 ಆಗಸ್ಟ್ 2024, 13:56 IST
ಅಕ್ಷರ ಗಾತ್ರ

ಉಡುಪಿ: ಕೌಶಲ ಆಧಾರಿತ ಶಿಕ್ಷಣ ಬದುಕಿಗೆ ಅಗತ್ಯ. ಆದರೆ, ನಮ್ಮ ಶಾಲಾ ಕಾಲೇಜುಗಳಲ್ಲಿ ಇಂತಹ ಶಿಕ್ಷಣವನ್ನು ನೀಡುತ್ತಿಲ್ಲ. ನಾವು ಅನ್ನ, ಅರಿವು ಆಸರೆಗಾಗಿ ವಿವಿಧ ಕಂಪನಿಗಳ ಕೈಕೆಳಗೆ ಹೋದ ಪರಿಣಾಮವಾಗಿ ಸೋಮಾರಿಗಳಾಗಿದ್ದೇವೆ ಎಂದು ಜನಪದ ಸೇವಾ ಟ್ರಸ್ಟ್‌ನ ಸಂತೋಷ ಕೌಲಗಿ ಹೇಳಿದರು.

ಕದಿಕೆ ಟ್ರಸ್ಟ್ ಮತ್ತು ಸೆಲ್ಕೊ ಇಂಡಿಯಾ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾವು ಕೌಶಲಗಳನ್ನು ಯಂತ್ರಗಳಿಗೆ ಧಾರೆ ಎರೆದು ಕೊಟ್ಟಿದ್ದೇವೆ. ಈಗ ಕೃತಕ ಬುದ್ಧಿಮತ್ತೆಯ ಅನುಷ್ಠಾನದಿಂದ ನಾವು ನಮ್ಮೊಳಗಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದರು.

ನೇಕಾರಿಕೆಯನ್ನು ಸರ್ಕಾರವೇ ಕೊಂದು ಹಾಕಿದೆ. ಖಾದಿ ಬಟ್ಟೆಯ ಮೇಲೂ ಜಿಎಸ್‌ಟಿ ಹಾಕುವ ಮೂಲಕ ನೇಕಾರರನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದೆ. ನೇಕಾರರು ಹೊಸತನಕ್ಕೆ ಇನ್ನೂ ತೆರೆದುಕೊಳ್ಳದ ಕಾರಣ ಹಿಂದೆಯೇ ಉಳಿದಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನೇಕಾರಿಕೆಯಲ್ಲಿನ ಜೀವಮಾನದ ಸಾಧನೆಗಾಗಿ ಸೋಮಪ್ಪ ಜತ್ತನ್ನ ಹಾಗೂ ಸಂಜೀವ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನಾವು ಕದಿಕೆ ಟ್ರಸ್ಟ್ ಆರಂಭಿಸಿದಾಗ 40 ವರ್ಷದ ಮೇಲಿನ ನೇಕಾರಷ್ಟೇ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಈ ವೃತ್ತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಹೇಗೆ ಎಂಬ ಆತಂಕ ನಮ್ಮನ್ನು ಕಾಡಿತ್ತು.‌ ನಾವು ತರಬೇತಿ ನೀಡಿದ ಬಳಿಕ ಹಲವು ಯುವತಿಯರು ಈ ಕ್ಷೇತ್ರಕ್ಕೆ ಬಂದಿದ್ದಾರೆ ಎಂದರು.

ಈಗ ಉಡುಪಿ ಸೀರೆಗೆ ಬ್ರ್ಯಾಂಡ್ ಮೌಲ್ಯವನ್ನು ತಂದುಕೊಟ್ಡಿದ್ದೇವೆ. ಅದಕ್ಕೆ ಉತ್ತಮ ಬೆಲೆ ಬಂದಿದೆ. ನೇಕಾರರಿಗೆ ಗೌರವ ಮತ್ತು ಉತ್ತಮ ಸಂಭಾವನೆ ಲಭಿಸುತ್ತದೆ. ನೇಕಾರಿಕೆ ವೃತ್ತಿಯನ್ನು ತೊರೆದಿದ್ದ ಮಹಿಳೆಯರು‌ ಕೂಡ ಈಗ ನಮ್ಮ ಮೂಲಕ ಈ ವೃತ್ತಿಗೆ ಮರಳಿದ್ದಾರೆ ಎಂದರು.

ನೇಕಾರಿಕೆ ತರಬೇತಿ ಪಡೆದ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ಪುರುಷೋತ್ತಮ ಅಡ್ವೆ ಅವರು ಸಂಜೀವ ಶೆಟ್ಟಿಗಾರ್ ಅವರನ್ನು ಪರಿಚಯಿಸಿದರು.

ಚಿಕ್ಕಣ್ಣ ಅವರು ಸೋಮಪ್ಪ ಜತ್ತನ್ನ ಅವರನ್ನು ಪರಿಚಯಿಸಿದರು. ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್‌ ಶೆಟ್ಟಿ ಇದ್ದರು. ಬಳಿಕ ವಿದುಷಿ ಪವನ ಬಿ. ಆಚಾರ್, ಶಶಿಕಲಾ ಎನ್. ಭಟ್, ಶಿಲ್ಪಾ ಜೋಶಿ ಅವರು ವೀಣಾ ವಾದನ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT