ಮಂಗಳವಾರ, ಆಗಸ್ಟ್ 3, 2021
24 °C
ಮನೆಬಿಟ್ಟು ಹೊರಬಾರದ ಸಾರ್ವಜನಿಕರು; ಉತ್ತಮ ಪ್ರತಿಕ್ರಿಯೆ

ಲಾಕ್‌ಡೌನ್‌ಗೆ ಸ್ತಬ್ಧವಾದ ಉಡುಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಭಾನುವಾರ ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ–ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಸಾರಿಗೆ ಸಂಚಾರ ವ್ಯವಸ್ಥೆ ಇಲ್ಲದೆ ನಗರ ಸ್ತಬ್ಧವಾಗಿತ್ತು. 

ಸದಾ ಗಿಜಿಗುಡುತ್ತಿದ್ದ ರಾಷ್ಟ್ರೀಯ ಹೆದ್ದಾರಿ 169 ‘ಎ’ ಉಡುಪಿ–ಮಣಿಪಾಲ ರಸ್ತೆ, ನಗರದ ಚಿತ್ತರಂಜನ್‌ ಸರ್ಕಲ್‌, ಕೋರ್ಟ್‌ ರಸ್ತೆಗಳು ಭಾನುವಾರ ವಾಹನಗಳ ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು. 

ಲಾಕ್‌ಡೌನ್‌ಗೆ ಮೊದಲೇ ಸಜ್ಜಾಗಿದ್ದ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ಶನಿವಾರವೇ ಖರೀದಿಸಿದ್ದರು. ಹಾಗಾಗಿ, ಭಾನುವಾರ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಹೆಚ್ಚಿನ ದಟ್ಟಣೆ ಕಂಡುಬರಲಿಲ್ಲ. ಮೀನು, ಮಾಂಸ ಖರೀದಿಗೂ ಉತ್ಸುಕತೆ ಕಾಣಲಿಲ್ಲ.

ಬೆಳಿಗ್ಗೆ ದಿನಪತ್ರಿಕೆ ವಿತರಣೆ ಹಾಗೂ ಹಾಲು ಮಾರಾಟದ ಬಳಿಕ ಇಡೀ ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಯಿತು. ನಗರ ಸಾರಿಗೆ, ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇರಲಿಲ್ಲ. ಆರೋಗ್ಯ ಇಲಾಖೆಯ ವಾಹನಗಳು ಹಾಗೂ ಸರಕು ಮತ್ತು ಸೇವಾ ಸಾಗಣೆ ವಾಹನಗಳು ಹೊರತುಪಡಿಸಿ ಖಾಸಗಿ ವಾಹನಗಳ ಸಂಚಾರ ಇರಲಿಲ್ಲ.

ಮೆಡಿಕಲ್‌ ಶಾಪ್‌ಗಳು ಹಾಗೂ ಪೆಟ್ರೋಲ್‌ ಬಂಕ್‌ಗಳು ಕೂಡ ಬೆರಳೆಣಿಕೆಯಲ್ಲಿ ತೆರೆದಿದ್ದವು. ಲಾಕ್‌ಡೌನ್‌ ನಿಯಮ ಉಲ್ಲಂಘನೆ ತಡೆಯಲು ಪೊಲೀಸರು ನಗರದ ಪ್ರಮುಖ ವೃತ್ತಗಳಲ್ಲಿ ಗಸ್ತು ತಿರುಗುತ್ತಿದ್ದರು. ಬೈಕ್‌ನಲ್ಲಿ ಓಡಾಡುತ್ತಿದ್ದ ಯುವಕರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು.

ನಿರ್ಗತಿಕರ ಅಲೆದಾಟ:

ಲಾಕ್‌ಡೌನ್‌ನಿಂದಾಗಿ ಶನಿವಾರ ಸಂಜೆಯಿಂದಲೇ ಹೋಟೆಲ್‌ಗಳು ಬಂದ್ ಆಗಿದ್ದರಿಂದ ನಿರ್ಗತಿಕರು, ಭಿಕ್ಷುಕರು ಊಟಕ್ಕಾಗಿ ಅಲೆದಾಡಬೇಕಾಯಿತು. ಉಚಿತ ಅನ್ನದಾಸೋಹ ನೀಡುತ್ತಿದ್ದ ದೇವಸ್ಥಾನಗಳು, ಮಠ ಮಂದಿರಗಳು ಕೂಡ ಬಂದ್‌ ಆಗಿರುವುದರಿಂದ ನಿರ್ಗತಿಕರು ನಗರದ ಕ್ಲಾಕ್‌ ಟವರ್, ಅಜ್ಜರಕಾಡು ಉದ್ಯಾನ, ಕೆಎಸ್‌ಆರ್‌ಟಿಸಿ, ನಗರ ಸಾರಿಗೆ, ಸರ್ವೀಸ್‌ ಬಸ್‌ ನಿಲ್ದಾಣಗಳಲ್ಲಿ ಮಲಗಿದ್ದ ದೃಶ್ಯ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು