ಭಾನುವಾರ, ಏಪ್ರಿಲ್ 11, 2021
31 °C
ಪುಸ್ತಕ ಓದಿನತ್ತ ಸೆಳೆಯುವ ವಿಭಿನ್ನ ಪ್ರಯತ್ನ: ಎಂಜಿಎಂ ಕಾಲೇಜಿನಲ್ಲಿ ಪುಸ್ತಕೋತ್ಸವ

ಒಂದೇ ದಿನ ₹ 1.42 ಲಕ್ಷದ ಪುಸ್ತಕ ಮಾರಾಟ: ಎಂಜಿಎಂ ಕಾಲೇಜಿನಲ್ಲಿ ಪುಸ್ತಕೋತ್ಸವ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪುಸ್ತಕ ಓದುವ ಸಂಸ್ಕೃತಿ ಮರೆಯಾಗುತ್ತಿರುವ ಮಧ್ಯೆಯೇ ಯುವ ಮನಸ್ಸುಗಳನ್ನು ಪುಸ್ತಕಗಳ ಓದಿನತ್ತ ಸೆಳೆಯುವ ವಿಭಿನ್ನ ಪ್ರಯತ್ನವೊಂದು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆಯುತ್ತಿದೆ.ಹಿನ್ನೆಲೆಗೆ ಸರಿಯುತ್ತಿರುವ ಓದುವ ಹವ್ಯಾಸವನ್ನು ಮುನ್ನಲೆಗೆ ತರಬೇಕು, ಯುವ ಜನತೆಯಲ್ಲಿ ಓದುವ ಆಸಕ್ತಿ ಕೆರಳಿಸಬೇಕು ಎಂಬ ನಿಟ್ಟಿನಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ 2 ದಿನಗಳ ಪುಸ್ತಕೋತ್ಸವಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ.

ಪುಸ್ತಕೋತ್ಸವದಲ್ಲಿ ಪ್ರಸಿದ್ಧ ಪುಸ್ತಕ ಮಾರಾಟ ಸಂಸ್ಥೆಗಳು ಭಾಗವಹಿಸಿದ್ದು, ಎಲ್ಲ ವರ್ಗದ ಓದುಗರ ಅಭಿರುಚಿಗೆ ತಕ್ಕಂತಹ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ. ಪ್ರಸಿದ್ಧ ಪ್ರಕಾಶಕರು ಭಾಗವಹಿಸಿದ್ದು, ಖ್ಯಾತ ಲೇಖಕರ ಹಾಗೂ ಪ್ರಶಸ್ತಿ ವಿಜೇತ ಪುಸ್ತಕಗಳು ಖರೀದಿಗೆ ಲಭ್ಯವಿದೆ.

ಪುಸ್ತಕೋತ್ಸವದ ಮೊದಲ ದಿನವಾದ ಶುಕ್ರವಾರ ₹ 1,42 ಲಕ್ಷ ಮೌಲ್ಯದ ಪುಸ್ತಕಗಳು ಮಾರಾಟವಾಗಿವೆ. ಓದಿನಿಂದ ಯುವ ವಿದ್ಯಾರ್ಥಿಗಳು ವಿಮುಖರಾಗುತ್ತಿದ್ದಾರೆ ಎಂಬ ಅಪವಾದದ ನಡುವೆಯೇ ನಿರೀಕ್ಷೆಗೂ ಮೀರಿ ಪುಸ್ತಕ ಮಾರಾಟವಾಗಿರುವುದು ಕಾಲೇಜು ಆಡಳಿತ ಮಂಡಳಿಯ ಖುಷಿಗೆ ಕಾರಣವಾಗಿದೆ. ಮಾರಾಟವಾದ ಪುಸ್ತಕಗಳಲ್ಲಿ ಬಹುಪಾಲು ವಿದ್ಯಾರ್ಥಿಗಳು ಖರೀದಿಸಿರುವುದು ವಿಶೇಷ.

ಕೋವಿಡ್‌ನಿಂದಾಗಿ ಬಸವಳಿದಿದ್ದ ಪುಸ್ತಕೋದ್ಯಮಕ್ಕೆ ಪುಸ್ತಕೋತ್ಸವ ಚೇತರಿಕೆ ನೀಡಲು ಸಾಧ್ಯ. ಎಂಜಿಎಂ ಕಾಲೇಜೊಂದರಲ್ಲಿ 1.42 ಲಕ್ಷ ಬೆಲೆಯ ಪುಸ್ತಕಗಳು ಮಾರಾಟವಾಗಿರುವಾಗ, ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳಲ್ಲಿ ಪುಸ್ತಕೋತ್ಸವ ಮಾಡಿದರೆ, ಖಂಡಿತ ಯುವಕರನ್ನು ಪುಸ್ತಕಗಳ ಓದಿನತ್ತ ಸೆಳೆಯಲು ಸಾಧ್ಯವಿದೆ. ಯುವ ಜನತೆ ಪುಸ್ತಕ ಖರೀದಿಸುವುದಿಲ್ಲ, ಓದುವುದಿಲ್ಲ ಎಂಬ ಆರೋಪವನ್ನು ಪುಸ್ತಕೋತ್ಸವ ಸುಳ್ಳು ಮಾಡಿದೆ ಎನ್ನುತ್ತಾರೆ ಕಾಲೇಜು ಉಪನ್ಯಾಸಕ ಮಂಜುನಾಥ್ ಕಾಮತ್‌.

ಶನಿವಾರವೂ ಪುಸ್ತಕೋತ್ಸವ ನಡೆಯಲಿದ್ದು, ಸಾರ್ವಜನಿಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುಸ್ತಕ ಖರೀದಿಸಬೇಕು. ಈ ಮೂಲಕ ಓದುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಮನವಿ ಮಾಡಿದರು.

‘200ಕ್ಕೂ ಹೆಚ್ಚು ಪುಸ್ತಕ ಸಂಗ್ರಹವಾಯ್ತು‌’

ಎಂಜಿಎಂ ಕಾಲೇಜಿನ ಗ್ರಂಥಾಲಯ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಹ ವಿಶೇಷ ಪುಸ್ತಕ ಮಳಿಗೆಯೊಂದನ್ನು ತೆರೆದಿದ್ದಾರೆ. ಇಲ್ಲಿ ಯಾವುದೇ ಪುಸ್ತಕಗಳು ಖರೀದಿಗೆ ಸಿಗುವುದಿಲ್ಲ. ಬದಲಿಗೆ ನೀವು ಖರೀದಿಸಿದ ಪುಸ್ತಕಗಳನ್ನು ಇಲ್ಲಿಗೆ ದಾನ ಮಾಡಬಹುದು. ಪುಸ್ತಕ ಹೊಸತಾಗಿರಬೇಕಿಲ್ಲ. ನೀವು ಓದಿದ ಪುಸ್ತಕಗಳನ್ನು ದಾನ ಮಾಡಬಹುದು. ಇದೊಂದು ರೀತಿಯಲ್ಲಿ ಜ್ಞಾನ ಹಂಚುವ ಕಾಯಕ. ಸಾರ್ವಜನಿಕರಿಂದ ಸಂಗ್ರಹಿಸಿದ ಪುಸ್ತಕಗಳನ್ನು ಉಡುಪಿಯ ಕನ್ನಡ ಶಾಲೆಗಳಿಗೆ ಹಂಚುತ್ತೇವೆ. ಈ ಮೂಲಕ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಪುಟ್ಟ ಪ್ರಯತ್ನ ಮಾಡುತ್ತಿದ್ದೇವೆ. ಒಂದೇ ದಿನ 200ಕ್ಕೂ ಹೆಚ್ಚು ಪುಸ್ತಕಗಳು ದಾನದ ರೂಪದಲ್ಲಿ ಸಂಗ್ರಹವಾಗಿದೆ ಎನ್ನುತ್ತಾರೆ ಉಪನ್ಯಾಸಕ ಮಂಜುನಾಥ್ ಕಾಮತ್

ಪುಸ್ತಕೋತ್ಸವ ಪರಿಕಲ್ಪನೆ ಮೂಡಿದ್ದು ಹೇಗೆ:

ಪುಸ್ತಕೋತ್ಸವ ಎಂಜಿಎಂ ಕಾಲೇಜು ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯಕ್ ಅವರ ಪರಿಕಲ್ಪನೆ. ಇದರ ಸಾಕಾರಕ್ಕೆ ದುಡಿದಿದ್ದು ಕಾಲೇಜಿನ ಮುಖ್ಯ ಗ್ರಂಥಪಾಲಕ ಎಚ್‌.ಕಿಶೋರ್, ಗಾಂಧಿ ಅಧ್ಯಯನ ಕೇಂದ್ರದ ವಿನೀತ್ ರಾವ್‌, ಉಪನ್ಯಾಸಕರಾದ ಸುಚಿತ್ ಕೋಟ್ಯನ್, ಮಂಜುನಾಥ್‌ ಹಾಗೂ ಸಿಬ್ಬಂದಿ. ಪುಸ್ತಕೋತ್ಸವ ಆಯೋಜನೆಗೂ ಮುನ್ನ ಪ್ರಕಾಶಕರ ಬಳಿ ತೆರಳಿ ಭಾಗವಹಿಸುವಂತೆ ಆಹ್ವಾನ ನೀಡಿದ ತಂಡ, ಉಡುಪಿಯ ಪ್ರಮುಖ ಕಾಲೇಜುಗಳಿಗೆ ಭೇಟಿನೀಡಿ ಆಮಂತ್ರಣ ನೀಡಿತ್ತು. ಫಲವಾಗಿ ನಿರೀಕ್ಷೆಗೂ ಮೀರಿ ಸ್ಪಂದನ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.