ಗುರುವಾರ , ಸೆಪ್ಟೆಂಬರ್ 23, 2021
24 °C
ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಕ್ರೋ ಕಂಟೈನ್‌ಮೆಂಟ್‌ ವಲಯಗಳ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೇರಳ ಹಾಗೂ ಮಹಾರಾಷ್ಟ್ರದೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಮಂಗಳೂರಿಗೆ ನಿತ್ಯ ಜನರ ಸಂಚಾರ ಹೆಚ್ಚಾಗಿರುವ ಕಾರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಉಲ್ಪಣವಾಗದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್‌ ಸ್ಥಿತಿಗತಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಜಿಲ್ಲೆಯಲ್ಲಿ ಸದ್ಯ ಕೋವಿಡ್‌ ಪಾಸಿಟಿವಿಟಿ ದರ ಶೇ 2.67 ಇದ್ದು, ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿದೆ. ಸೋಂಕಿನ ಪ್ರಮಾಣ ತಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನೆರೆಯ ಐದಾರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ. ಜತೆಗೆ ಮುಂಬೈನಲ್ಲಿ ಉಡುಪಿ ಮೂಲದವರು ಹೆಚ್ಚಾಗಿರುವುದರಿಂದ, ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವ ಭೀತಿ ಇದ್ದು,  ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೋವಿಡ್ ಪರೀಕ್ಷೆ ಪ್ರಮಾಣವನ್ನು 3,000 ದಿಂದ 5,000ಕ್ಕೆ ಹೆಚ್ಚಿಸಲಾಗಿದ್ದು, ಮತ್ತಷ್ಟು ಹೆಚ್ಚಿಸಲು ನಿರ್ದೇಶನ ನೀಡಲಾಗಿದೆ. 24 ಗಂಟೆಯಲ್ಲಿ ಕೋವಿಡ್‌ ಪರೀಕ್ಷೆ ವರದಿ ಸಿಗಬೇಕು, ಸೋಂಂಕಿತರ ಕನಿಷ್ಠ 20 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹೆಚ್ಚಿ ಪರೀಕ್ಷೆ ಮಾಡಬೇಕು, ಸೋಂಕಿತರು ಕೆಲಸ ನಿರ್ವಹಿಸುವ ಕಡೆಗಳಲ್ಲೂ ಪರೀಕ್ಷೆ ಮಾಡಬೇಕು. ಮನೆಯ ಸ್ಥಿತಿಗತಿ ಆಧರಿಸಿ ಹೋಂ ಕ್ವಾರಂಟೈನ್ ಬದಲು ಕೋವಿಡ್‌ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ತಿಳಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗಳನ್ನು ಹೆಚ್ಚಿಸಲಾಗಿದ್ದು, ಜಿಲ್ಲೆಯಲ್ಲಿ ಲಭ್ಯವಿರುವ 161 ವೆಂಟಿಲೇಟರ್‌ಗಳಲ್ಲಿ 19 ಭರ್ತಿಯಾಗಿವೆ. 370 ಐಸಿಯು ಬೆಡ್‌ಗಳಲ್ಲಿ 38 ಬಳಕೆಯಲ್ಲಿವೆ. ಉಡುಪಿ, ಕಾರ್ಕಳ ಹಾಗೂ ಕುಂದಾಪುರದಲ್ಲಿ 15 ದಿನಗಳೊಳಗೆ ಆಮ್ಲಜನಕ ಘಟಕಗಳು ಕಾರ್ಯ ನಿರ್ವಹಿಸಲಿವೆ ಎಂದು ವಿವರ ನೀಡಿದರು.

ಜಿಲ್ಲೆಯಲ್ಲಿ ಶೇ 59ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದು, ಶೇ 21ರಷ್ಟು ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ. ಕೇಂದ್ರದಿಂದ ಹೆಚ್ಚುವರಿ ಲಸಿಕೆ ಪೂರೈಕೆಗೆ ಮನವಿ ಮಾಡಲಾಗುವುದು, ಜಿಲ್ಲೆಗೆ ಅಗತ್ಯ ಲಸಿಕೆ ಪೂರೈಸಲಾಗುವುದು. ವಾತ್ಸಲ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ಶಿಬಿರಗಳನ್ನು ನಡೆಸಿ 1.75 ಲಕ್ಷ ಮಕ್ಕಳ ತಪಾಣೆ ನಡೆಸಲಾಗಿದೆ. ಪೌಷ್ಟಿಕ ಆಹಾರ ಕೊರತೆ ಇರುವ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಲಾಗುತ್ತಿದೆ ಎಂದರು.

ಸೆಪ್ಟೆಂಬರ್‌ನಲ್ಲಿ ಮೂರನೇ ಅಲೆ ?

ಸೆಪ್ಟೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆಯ ಸ್ಪಷ್ಟ ಚಿತ್ರಣ ಸಿಗಲಿದೆ. ಅದಕ್ಕೂ ಮುಂಚಿತವಾಗಿ ಸೋಂಕು ನಿಯಂತ್ರಣಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಗಡಿ ಜಿಲ್ಲೆಗಳಿಗೆ ಖುದ್ದು ಭೇಟಿನೀಡಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು