ಮಂಗಳವಾರ, ಫೆಬ್ರವರಿ 25, 2020
19 °C
ಮೀನುಗಾರರಿಂದ ವಿರೋಧ

ಮೀನಿಗೂ ಕನಿಷ್ಠ ಗಾತ್ರ ನಿಯಮ ಜಾರಿ : ಕರಾವಳಿಯ 19 ಜಾತಿ ಮೀನುಗಳಿಗೆ ಅನ್ವಯ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಭವಿಷ್ಯದಲ್ಲಿ ಮತ್ಸ್ಯಕ್ಷಾಮ ಎದುರಾಗಬಾರದು, ಮೀನಿನ ಸಂತಾನೋತ್ಪತ್ತಿ ಪ್ರಮಾಣ ಹೆಚ್ಚಾಗಬೇಕು ಎಂಬ ದೃಷ್ಟಿಯಿಂದ ಪಶುಸಂಗೋಪನೆ ಹಾಗೂ ಮೀನುಗಾರಿಕಾ ಇಲಾಖೆಯು ಕನಿಷ್ಠ ಕಾನೂನಾತ್ಮಕ ಗಾತ್ರದ ನಿಯಮ ಜಾರಿಗೊಳಿಸಿದೆ. ಈ ನಿಯಮಕ್ಕೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಏನಿದು ನಿಯಮ?

ಸೆಂಟ್ರಲ್‌ ಮರೈನ್ ಫಿಷರಿಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌, ಕರ್ನಾಟಕದ ಕರಾವಳಿಯಲ್ಲಿ ಹೆಚ್ಚಾಗಿ ಸಿಗುವ 19 ಜಾತಿಯ ಮೀನುಗಳನ್ನು ಗುರುತಿಸಿ, ಅವುಗಳ ಕನಿಷ್ಠ ಗಾತ್ರವನ್ನು ನಿಗಧಿಗೊಳಿಸಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರ ಅನ್ವಯ ನಿಗಧಿಗಿಂತ ಕಡಿಮೆ ಗಾತ್ರದ ಮೀನುಗಳನ್ನು ಹಿಡಿಯುವಂತಿಲ್ಲ. ಹಿಡಿದರೆ, ಮೀನುಗಾರರ ಮೇಲೆ ಕ್ರಮ ಜರುಗಿಸುವ ಅಧಿಕಾರವನ್ನು ಮೀನುಗಾರಿಕಾ ಇಲಾಖೆಗೆ ನೀಡಲಾಗಿದೆ.

ಉದ್ದೇಶ ಏನು ?

ಸಣ್ಣ ಗಾತ್ರದ ಮೀನುಗಳನ್ನು ಹಿಡಿಯುವುದರಿಂದ ಭವಿಷ್ಯದಲ್ಲಿ ಮೀನುಗಳ ಸಂತತಿ ನಾಶವಾಗಬಹುದು, ಅತಿಯಾದ ಮೀನುಗಾರಿಕೆಯಿಂದ ಕ್ಷಾಮ ಎದುರಾಗಬಹುದು ಎಂಬ ಉದ್ದೇಶದಿಂದ ಸರ್ಕಾರ ಕನಿಷ್ಠ ಕಾನೂನಾತ್ಮಕ ಗಾತ್ರದ ನಿಯಮ ಜಾರಿಗೆ ತಂದಿದೆ. ಆದರೆ, ಈ ನಿರ್ಧಾರ ಅವೈಜ್ಞಾನಿಕ ಎಂಬುದು ಮೀನುಗಾರರ ವಾದ.

ಮೀನುಗಾರರ ವಿರೋಧ ಏಕೆ?

ಕರಾವಳಿಯಲ್ಲಿ ಪ್ರಸಕ್ತ ಮೀನುಗಾರಿಕಾ ಋತು ಉತ್ತಮವಾಗಿಲ್ಲ. ನಿರಂತರ ಚಂಡಮಾರುತಗಳ ಪ್ರಭಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಾರಿಕೆ ನಡೆದಿಲ್ಲ. ನಾಲ್ಕು ತಿಂಗಳಲ್ಲಿ 2 ತಿಂಗಳು ಮಾತ್ರ ಬೋಟ್‌ಗಳು ಸಮುದ್ರಕ್ಕಿಳಿದಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಸ ನಿಯಮ ಹೇರಿದ್ದು ಸರಿಯಲ್ಲ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ‌.

ಮೀನುಗಳ ಸಂತತಿ ಉಳಿಯಬೇಕೆನ್ನುವುದು ಕರಾವಳಿಯ ಮೀನುಗಾರರ ಆಶಯವೂ ಹೌದು. ಆದರೆ, ಕನಿಷ್ಠ ಕಾನೂನಾತ್ಮಕ ಗಾತ್ರದ ನಿಯಮ ದೇಶದ ಕರಾವಳಿಯ ಉದ್ದಗಲಕ್ಕೂ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ನೆರೆಯ ರಾಜ್ಯಗಳಲ್ಲಿ ನಿಯಮ ಸಡಿಲಿಸಿ ಅಕ್ರಮ ಮೀನುಗಾರಿಕೆಗೆ ಅವಕಾಶಕೊಟ್ಟು, ಕೇವಲ ಕರಾವಳಿಯಲ್ಲಿ ಮಾತ್ರ ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಾರೆ ಮೀನುಗಾರ ಮುಖಂಡರು.

ಕರಾವಳಿಯಲ್ಲಿ ಹಿಂದಿನಿಂದಲೂ ಸಣ್ಣಗಾತ್ರದ ಮೀನುಗಳನ್ನು ಹಿಡಿಯುವುದಿಲ್ಲ. ಸರ್ಕಾರ ನಿಗಧಿಗೊಳಿಸಿರುವ ಕನಿಷ್ಠ ಕಾನೂನಾತ್ಮಕ ಗಾತ್ರ ಅವೈಜ್ಞಾನಿಕವಾಗಿವೆ. ಸಾಮಾನ್ಯವಾಗಿ ಬಲೆಗೆ ಸಿಗುವ ಹೆಚ್ಚಿನ ಮೀನುಗಳ ಗಾತ್ರ ನಿಯಮಗಳ ವ್ಯಾಪ್ತಿಗೆ ಬರುತ್ತವೆ. ಹೀಗಿರುವಾಗ, ಬಲೆಗೆ ಬಿದ್ದು ಸತ್ತ ಮೀನುಗಳನ್ನು ಮರಳಿ ಸಮುದ್ರಕ್ಕೆ ಬಿಡಲು ಸಾಧ್ಯವೇ ಎಂಬ ಪ್ರಶ್ನೆ ಬೋಟ್‌ ಮಾಲೀಕರದ್ದು.

‘ಈ ವರ್ಷ ಮೀನಿನ ಇಳುವರಿಯ ಪ್ರಮಾಣ ಕುಸಿದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಸಮುದ್ರಕ್ಕಿಳಿದರೂ ಹಾಕಿದ ಬಂಡವಾಳ ಕೈಸೇರುತ್ತಿಲ್ಲ. ಸಿಗುವ ಅಷ್ಟುಇಷ್ಟು ಮೀನುಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಈಗ ಮೀನುಗಳ ಗಾತ್ರ ಇಂತಿಷ್ಟೇ ಇರಬೇಕು ಎಂಬ ನಿಯಮ ಏರಿಕೆಗೆ ವಿರೋಧ ವಿದೆ ಎನ್ನುತ್ತಾರೆ ಮೀನುಗಾರರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)