ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಧುನಿಕ ಜೀವನ ಶೈಲಿ ಅನಾರೋಗ್ಯಕ್ಕೆ ಕಾರಣ: ಡಾ.ಮೊಹಮ್ಮದ್ ರಫೀಕ್

ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ‘ಸಸ್ಯಾಮೃತ’ದಲ್ಲಿ ಡಾ.ಮೊಹಮ್ಮದ್ ರಫೀಕ್
Published 11 ಆಗಸ್ಟ್ 2024, 14:18 IST
Last Updated 11 ಆಗಸ್ಟ್ 2024, 14:18 IST
ಅಕ್ಷರ ಗಾತ್ರ

ಕುಂದಾಪುರ: ರಾಸಾಯನಿಕಯುಕ್ತ ಆಹಾರ ಪದಾರ್ಥಗಳ ಸೇವನೆ, ಆಧುನಿಕ ಜೀವನ ಶೈಲಿ ಅನಾರೋಗ್ಯಕ್ಕೆ ಮೂಲ ಕಾರಣವಾಗುತ್ತಿವೆ ಎನ್ನುವುದು ಸಂಶೋಧನೆಗಳಿಂದ ದೃಢಪಡುತ್ತಿದೆ ಎಂದು ಉಡುಪಿ ಹೂಡೆಯ ಬೀಚ್ ಹೀಲಿಂಗ್ ಹೋಂ ನಿರ್ದೇಶಕ ಡಾ.ಮೊಹಮ್ಮದ್ ರಫೀಕ್ ಹೇಳಿದರು.

ಇಲ್ಲಿಗೆ ಸಮೀಪದ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಬಾಂಡ್ಯ ಎಜುಕೇಷನಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಡೆದ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ ‘ಸಸ್ಯಾಮೃತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಷಯುಕ್ತ ಪದಾರ್ಥಗಳ ಸೇವನೆಯಿಂದ ಮನುಷ್ಯನ‌ ದೇಹ ವಿಷದ ಮುದ್ದೆಯಾಗುತ್ತಿದೆ. ಬೇಕರಿ‌ ತಿನಿಸುಗಳ ಆಕರ್ಷಣೆ, ರುಚಿಗೆ ಒಳಗಾಗುವ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪೌಷ್ಟಿಕಾಂಶವುಳ್ಳ ಆಹಾರ ಸ್ಥಾನವನ್ನು ಎಣ್ಣೆ, ರಾಸಾಯನಿಕ ಮಿಶ್ರಿತ ತಿನಿಸುಗಳು ತುಂಬುತ್ತಿವೆ. ತರಕಾರಿ, ಹಣ್ಣುಗಳು ರಾಸಾಯನಿಕ ಪ್ರಭಾವದಿಂದ ಮುಕ್ತವಾಗಿಲ್ಲ. ವರದಿಯೊಂದರ ಪ್ರಕಾರ 70 ಮಂದಿಯಲ್ಲಿ ಒಬ್ಬರಿಗೆ ಕ್ಯಾನ್ಸರ್ ಕಾಯಿಲೆ ಬರುತ್ತಿದೆ ಎನ್ನಲಾಗುತ್ತಿದೆ. ಮಣಿಪಾಲದ ದೊಡ್ಡ ಆಸ್ಪತ್ರೆಗಳಲ್ಲೂ ಕ್ಯಾನ್ಸರ್ ರೋಗಿಗಳಿಗೆ ಹಾಸಿಗೆ ಇಲ್ಲದ ಪರಿಸ್ಥಿತಿಗಳಿದೆ. ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ಸಂಶೋಧನೆ, ಪರಿಹಾರದ ತುರ್ತು ಅಗತ್ಯವಿದೆ ಎಂದರು.

ಇಂದಿನ ಕಾರ್ಪೊರೇಟ್ ವ್ಯವಹಾರಿಕ ಜಗತ್ತಿನಲ್ಲಿ ಸೇವೆ ಎಂಬ ಪದ ದೂರವಾಗುತ್ತಿದೆ. ಇದಕ್ಕೆ ಆರೋಗ್ಯ ಕ್ಷೇತ್ರವೂ ಹೊರತಲ್ಲ. ಚಿಕಿತ್ಸೆ ವ್ಯವಹಾರಿಕವಾಗುತ್ತಿರುವ ಈ ಕಾಲಘಟ್ಟದಲ್ಲಿ ರೋಗಿಯಾಗುವ‌ ಮೊದಲೇ‌ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ವಿದ್ಯಾರ್ಥಿ ಹಂತದಲ್ಲೇ ಆಹಾರ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿದರೆ ಮಾತ್ರ ಅಪಾಯ ತಡೆಗಟ್ಟಲು ಸಾಧ್ಯ. ಈ‌ ಕಾರ್ಯ ಶಿಕ್ಷಕರಿಂದ‌ ಮಾತ್ರ ಸಾಧ್ಯ ಎಂದೆಉ.

ಪಾರಂಪರಿಕ ರುಚಿ ಉಳಿಯಬೇಕಾದರೆ ಯೂ ಟ್ಯೂಬ್ ನೋಡಿ ಅಡುಗೆ ಮಾಡುವ ಹವ್ಯಾಸ ಬದಲಾಗಬೇಕು
ಡಾ.ಮೊಹಮ್ಮದ್ ರಫೀಕ್, ಹೀಲಿಂಗ್ ತಜ್ಞ

ಅಪಥ್ಯ ಆಹಾರ, ಮಾನಸಿಕ ಒತ್ತಡ, ಅಶುಚಿತ್ವ, ನಿಯಮಿತವಿಲ್ಲದ ಅಭ್ಯಾಸ, ಪ್ರಕೃತಿ ಮೇಲಿನ ದಾಳಿ, ಮಾಲಿನ್ಯ, ಅಸಹಜ ಜೀವನ‌ಶೈಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ‌. ತರಕಾರಿ, ಬೇಳೆ–ಕಾಳುಗಳು, ಸರಳ ಜೀವನ ಶೈಲಿಯೆ ಉತ್ತಮ ಆರೋಗ್ಯದ ಸೂತ್ರ. ಕೋಪ, ಅಸೂಯೆಯಂತಹ ಕೆಟ್ಟ ನಡವಳಿಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೂ ಉತ್ತಮ‌ ಆರೋಗ್ಯಕ್ಕೆ‌ ಕಾರಣವಾಗುತ್ತದೆ ಎಂದು ಡಾ.ರಫೀಕ್ ತಿಳಿಸಿದರು.

ಆಲೂರು ಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ಡಾ.ನೀಲಾ ಎಸ್. ಮಾತನಾಡಿ, ಶುದ್ಧ ಪರಿಸರದಲ್ಲಿ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ‌ ಸಹಜವಾಗಿ ಆರೋಗ್ಯ ವರ್ಧನೆಯಾಗುತ್ತದೆ‌. ಬಿಸಿ, ದ್ರವಯುಕ್ತ ಆಹಾರ ಸೇವನೆ ಒಳ್ಳೆಯದು. ರಾತ್ರಿ ಬೇಗನೆ‌ ನಿದ್ರಿಸಿ ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಅಭ್ಯಾಸ ರೂಢಿಸಿಕೊಳ್ಳಬೇಕು.‌ ಮಕ್ಕಳ ಸಹಜ ಚಟುವಟಿಕೆಗಳು ಅವರ ಆರೋಗ್ಯ, ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮ ಬೀರುತ್ತವೆ, ಆದ್ದರಿಂದ ಚಟುವಟಿಕೆಗಳನ್ನು ನಿರ್ಬಂಧಿಸಬಾರದು ಎಂದರು.

ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಬಾಂಡ್ಯಾ ಎಜುಕೇಷನಲ್‌ ಟ್ರಸ್ಟ್ ಸಂಸ್ಥಾಪಕ ಬಸ್ರೂರು ಅಪ್ಪಣ್ಣ ಹೆಗ್ಡೆ, ಕೈಗಾರಿಕೆ, ಅಭಿವೃದ್ಧಿ ಹೆಸರಲ್ಲಿ ಪ್ರಕೃತಿ ಮೇಲೆ ನಿರಂತರ ನಡೆಯುತ್ತಿರುವ ದೌರ್ಜನ್ಯಗಳೇ ಇಂದಿನ‌ ದುರಂತಗಳಿಗೆ ಕಾರಣ. ಆಧುನಿಕತೆ, ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗುತ್ತಿರುವ ಯುವ ಸಮುದಾಯವನ್ನು ಮರಳಿ ನಮ್ಮ‌‌ ಪರಂಪರೆಗೆ ತರಬೇಕಾದ ದೊಡ್ಡ ಜವಾಬ್ದಾರಿ‌ ಇದೆ ಎಂದರು.

ಬಾಂಡ್ಯ ಎಜುಕೇಷನಲ್ ಟ್ರಸ್ಟ್ ಜಂಟಿ‌ ಕಾರ್ಯನಿರ್ವಾಹಕ ಆಡಳಿತ ಟ್ರಸ್ಟಿಗಳಾದ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ ಇದ್ದರು. ಶಿಕ್ಷಕಿ ವಿಶಾಲ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT