ಮಂಗಳವಾರ, ಏಪ್ರಿಲ್ 7, 2020
19 °C
ಮುದ್ದಣ್ಣ ಸಾಹಿತ್ಯೋತ್ಸವ

ಸಂದಿಗ್ಧ ಕಾಲಘಟ್ಟದಲ್ಲಿ ವಿಮರ್ಶೆ: ಚಿಂತಕ ರಾಜೇಂದ್ರ ಚೆನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕನ್ನಡ ವಿಮರ್ಶೆಯು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದು, ವೈಚಾರಿಕವಾಗಿ ವಿಮರ್ಶೆಯ ಮಾದರಿಗಳು ಬದಲಾಗಬೇಕಿದೆ ಎಂದು ವಿಮರ್ಶಕ ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು. 

ಎಂಜಿಎಂ ಕಾಲೇಜಿನಲ್ಲಿ ಗುರುವಾರ ನಡೆದ ಮುದ್ದಣ್ಣ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ವಿ.ಎಂ. ಇನಾಂದಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಬಹಳ ಕಾಲದವರೆಗೂ ಪಶ್ಚಿಮದ ವಿಮರ್ಶೆಯ ಪಂಥಗಳನ್ನೇ ಅನುಸರಿಸಿಕೊಂಡು ಬಂದಿದ್ದು, ನವೋದಯ ಹಾಗೂ ನವ್ಯ ಕಾಲಘಟ್ಟದಲ್ಲಿ ಅದೇ ಮಾದರಿ ಬಳಸಿದ್ದೇವೆ. ಆದರೆ, ಪಶ್ಚಿಮದ ವಿಮರ್ಶಾ ಮಾದರಿ ಬಿಟ್ಟು ಪರ್ಯಾಯಗಳ ಬಗ್ಗೆ ಚಿಂತನೆ ಮಾಡಿಲ್ಲ’ ಎಂದರು.

ವಿಮರ್ಶೆ ಸಮಾಜ ಬದ್ಧವಾಗಿರಬೇಕು, ಸಾಹಿತ್ಯದ ವಿಮರ್ಶೆ ಸಿದ್ಧಾಂತಗಳ ವಿಮರ್ಶೆಯಾಗುತ್ತಿದೆ ಎಂಬುದನ್ನು ಒಪ್ಪಬಹುದು. ಆದರೆ, ಈ ಭರಾಟೆಯಲ್ಲಿ ಕೃತಿಯ ಅನನ್ಯತೆ ಮರೆಯುತ್ತಿದ್ದೇವೆ ಎಂಬ ಭಾವನೆ ಮೂಡುತ್ತಿದೆ ಎಂದರು.

ಕರಾವಳಿಯ ನೆಲ ಪಶ್ಚಿಮದ ಆಧುನಿಕತೆಯ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ಜಾಗ. ಕರಾವಳಿಯ ನೆಲೆ ಸಂಸ್ಕೃತಿ ಹಾಗೂ ಸಮಾಜವು ಹೊಸದಾಗಿ ಬಂದ ಆಧುನಿಕತೆಯ ಅನೇಕ ಮುಖಗಳಿಗೆ ಮುಕ್ತವಾಗಿ ತೆರೆದುಕೊಂಡು ಕನ್ನಡದ ಪುನರ್ಜೀವನದಲ್ಲಿ ದೊಡ್ಡ ಪಾತ್ರ ವಹಿಸಿತು ಎಂದರು.

ಕನ್ನಡದ ನವೋದಯಕ್ಕೆ ಬಹುಕೇಂದ್ರಗಳಿತ್ತು. ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಧಾರವಾಡದಂತಹ ಪ್ರದೇಶಗಳಲ್ಲಿ ಆಲೂರು ವೆಂಕಟರಾಯರಂಥ ಮಹನೀಯರು ಏಕೀಕರಣದ ಚಾರಿತ್ರಿಕ ಶಕ್ತಿ ಹುಟ್ಟಿಹಾಕಿದರು. ಮೈಸೂರಿನಲ್ಲಿ ಬಿಎಂಶ್ರೀ, ನಿಜಾಮರ ಆಳ್ವಿಕೆ ಒಳಪಟ್ಟಿದ್ದ ಪ್ರದೇಶಗಳಲ್ಲಿ ಕನ್ನಡದ ಪುನರ್ಜನ್ಮಕ್ಕೆ ಶ್ರಮಿಸಲಾಯಿತು ಎಂದರು.

ರಾಷ್ಟ್ರಕವಿ ಗೋವಿಂದ ಪೈ ಅವರು ಕನ್ನಡದ ನೆಲೆಗಳು, ಭಾಷೆಯ ಪ್ರಾಚೀನತೆ, ಗ್ರೀಕ್‌ ಹಾಗೂ ಪಾಶ್ಚಾತ್ಯ ಭಾಷೆಗಳಲ್ಲಿ ಕನ್ನಡ ಪದಗಳನ್ನು ಹುಡುಕಿ ತೋರಿಸಿದರು. ಕನ್ನಡ ಸಂಸ್ಕೃತಿಯ ನೆಲೆಗಳನ್ನು ಇಂಗ್ಲೀಷ್‌ ಭಾಷೆಯ ಮೂಲಕ ಜಗತ್ತಿಗೆ ಪರಿಚಿಯಿಸಿದ ಮಹಾನ್ ಸಂಶೋಧಕರು ಪೈಗಳು ಎಂದರು.

ಕನ್ನಡದ ವಿದ್ವತ್‌ ಪರಂಪರೆ, ಚರಿತ್ರೆಯ ಬರಹ ಹೇಗಿರಬೇಕು ಎಂಬ ನೆಲೆಗಳು ಕರಾವಳಿಯ ಪ್ರಾದೇಶಿಕ ಹಾಗೂ ಬೌದ್ಧಿಕ ಸಂಸ್ಕೃತಿಗಳಲ್ಲಿ ಸಿಗುತ್ತವೆ. ಆಧುನಿಕ ಕಾವ್ಯಗಳ ಸೃಷ್ಟಿಯೂ ಇಲ್ಲಿಯೇ ರಚನೆಯಾಗಿವೆ. ಛಂದಸ್ಸುಗಳಲ್ಲಿ ಆಡುವ ಮಾತಿಗೆ ಹತ್ತಿರವಾಗುವಂತೆ ಕಾವ್ಯಗಳನ್ನು ಬರೆದ ಮಹಾನ್ ಕವಿಗಳು ಇಲ್ಲಿದ್ದರು ಎಂದು ರಾಜೇಂದ್ರ ಚೆನ್ನಿ ಹೇಳಿದರು.

ಚಿಂತಕ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಕವಿ ಮುದ್ದಣ್ಣ 33 ವರ್ಷಕ್ಕೆ ಕ್ಷಯ ರೋಗಕ್ಕೆ ತುತ್ತಾದರೂ ಅದ್ಭುತ ಬರಹಗಳನ್ನು ಕೊಟ್ಟಿದ್ದಾರೆ. ಶ್ರೀರಾಮ ಪಟ್ಟಾಭಿಷೇಕ, ಶ್ರೀರಾಮಾಶ್ವಮೇಧ ಹಾಗೂ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗಗಳು ಮುದ್ದಣ್ಣನ ಕೊಡುಗೆಗಳು ಎಂದರು.

ಹಳೆಗನ್ನಡದ ಶರೀರದಲ್ಲಿ ಹೊಸಗನ್ನಡದ ಆತ್ಮ ಇರಿಸಿದ ಮುದ್ದಣ್ಣ, ಸ್ವಂತವನ್ನು ಅನ್ಯದಲ್ಲಿ ಹುದುಗಿಸಿದವರು. ನಂದಳಿಕೆ ಲಕ್ಷ್ಮೀ ನಾರಾಯಣ ಹಾಗೂ ಮುದ್ದಣ್ಣ ಇಬ್ಬರೂ ಒಬ್ಬರೇ ಎಂಬ ಸತ್ಯ ಅವರ ಸಾವಿನ ನಂತರ ತಿಳಿಯಬೇಕಾಯಿತು ಎಂದರು.

ಗಣೇಶ್‌ ಕೊಲೆಕಾಡಿ ಹಾಗೂ ಕೆ.ಎಲ್‌.ಕುಂಡಂತಾಯ ಅವರಿಗೆ ಮುದ್ದಣ್ಣ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎಂ.ಜಿ.ವಿಜಯ ವಹಿಸಿದ್ದು. ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಮಾಲತಿದೇವಿ, ನಂದಳಿಕೆ ಬಾಲಚಂದ್ರ ರಾವ್‌, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸಂಯೋಜಕ ವರದೇಶ ಹಿರೇಗಂಗೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಪುತ್ತಿ ವಸಂತಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು