ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮರುನಿರ್ಮಾಣ ಕೆಲಸ ಅನ್ಯರಿಗೆ ನೀಡಿ’

ಕಾರ್ಕಳದ ಬೈಲೂರಿನ ಉಮಿಕಲ್‌ ಬೆಟ್ಟದ ಪರಶುರಾಮ ಮೂರ್ತಿ ವಿವಾದ
Published : 19 ಸೆಪ್ಟೆಂಬರ್ 2024, 6:49 IST
Last Updated : 19 ಸೆಪ್ಟೆಂಬರ್ 2024, 6:49 IST
ಫಾಲೋ ಮಾಡಿ
Comments

ಉಡುಪಿ: ಕಾರ್ಕಳ ತಾಲ್ಲೂಕಿನ ಬೈಲೂರಿನ ಉಮಿಕಲ್‌ ಬೆಟ್ಟದ ಮೇಲೆ ಸ್ಥಾಪಿಸಿರುವ ಪರಶುರಾಮನ ಮೂರ್ತಿಯ ಮರುರಚನೆಯ ಕೆಲಸವನ್ನು ಶಿಲ್ಪ ಕಲಾವಿದ ಕೃಷ್ಣ ನಾಯಕ್ ಅವರಿಗೆ ನೀಡದೆ ಬೇರೆಯವರಿಗೆ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಗುಣಮಟ್ಟದ ಮೂರ್ತಿ ನಿರ್ಮಾಣವಾಗಬೇಕಾದರೆ  ಕೃಷ್ಣ ನಾಯಕ್  ಅವರಿಗೆ ಕೊಟ್ಟಿರುವ ಹಣ ವಾಪಸ್ ಪಡೆದು, ಬೇರೆ ಪರಿಣತರ ತಂಡಕ್ಕೆ ಜವಾಬ್ದಾರಿ ವಹಿಸಬೇಕು ಎಂದರು.

ಪರಶುರಾಮ ಮೂರ್ತಿಯ ಮೇಲ್ಬಾಗವನ್ನು ಜನರಿಗೆ ಕಾಣಿಸದಂತೆ ರಾತ್ರಿ ಕದ್ದು ಮುಚ್ಚಿ ಕೊಂಡೊಯ್ಯಲಾಗಿದೆ. ನಿರಂತರವಾಗಿ ಜನರಿಗೆ ಸುಳ್ಳು ಹೇಳುತ್ತಾ ತಾನು ಮಾಡಿದ್ದೇ ಸರಿ ಎನ್ನುತ್ತಿರುವ ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಅವರ ನಿಜಬಣ್ಣ ಬಯಲಾಗಿದೆ ಎಂದು ತಿಳಿಸಿದರು.

ಕಂಚಿನ ಮೂರ್ತಿ ನಿರ್ಮಾಣದ ಹೆಸರಿನಲ್ಲಿ ಭ್ರಷ್ಟಾಚಾರ ಎಸಗಿದ್ದು ಮಾತ್ರವಲ್ಲದೆ, ದಿನಕ್ಕೊಂದು ಸುಳ್ಳು ಹೇಳುತ್ತಾ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧರ್ಮ ವಿರೋಧಿ ಜನಪ್ರತಿನಿಧಿಯನ್ನು ಸಮಾಜ ಬಹಿಷ್ಕರಿಸಬೇಕು ಎಂದು ಹೇಳಿದರು.

ಅಸಲಿ ಮೂರ್ತಿ ಎಂದು ನ್ಯಾಯಾಲಯಕ್ಕೆ ಸಲ್ಲಿಸಲು ಮತ್ತೆ ದಾಖಲೆಗಳನ್ನು ತಯಾರು ಮಾಡುತ್ತಿರುವ ಶಾಸಕರ ವರ್ತನೆ ಅಚ್ಚರಿ ಮೂಡಿಸುತ್ತಿದೆ. ಕೇವಲ ರಾಜಕೀಯ ಲಾಭಕ್ಕೋಸ್ಕರ ಪರಶುರಾಮ ಥೀಮ್‌ ಪಾರ್ಕ್ ಅನ್ನು ಬಳಸಿಕೊಂಡು ಜನರ ಭಾವನೆಗಳ ಜೊತೆಗೆ ಚೆಲ್ಲಾಟವಾಡಲಾಗಿದೆ. ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕೆಂದು ಜನರನ್ನು ಮರುಳು ಮಾಡಿರುವ ಶಾಸಕರು ಪರಶುರಾಮ ಥೀಮ್‌ ಪಾರ್ಕ್ ಅಭಿವೃದ್ಧಿಗೆ ಕಾಂಗ್ರೆಸ್‌ ಅಡ್ಡಗಾಲು ಹಾಕುತ್ತಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದೂ ಹೇಳಿದರು.

Cut-off box - ‘ಕಸ್ತೂರಿ ರಂಗನ್‌ ವರದಿ ಜಾರಿ ಬೇಡ’ ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಕೃಷಿಕರು ಶ್ರಮಿಕ ವರ್ಗದವರ ಜೀವನ ನಾಶವಾಗಲಿದೆ. ಈ ಕಾರಣಕ್ಕೆ ವರದಿ ಜಾರಿಯಾಗಲು ಬಿಡುವುದಿಲ್ಲ. ವರದಿಗೆ ಸಂಬಂಧಿಸಿ ಕೇಂದ್ರ ಸರ್ಕಾರವು ರಾಜ್ಯದಿಂದ ವರದಿ ಕೇಳಲು ಮುಂದಾಗಿದೆ. ಕೇಂದ್ರದ ನಡೆಯನ್ನು ವಿರೋಧಿಸಿ ಈದುವಿನಿಂದ ಸೋಮೇಶ್ವರದವರೆಗೆ ಪಾದಯಾತ್ರೆ ನಡೆಸಲು ಚಿಂತನೆ ನಡೆಸಿದ್ದೇವೆ. ಹುಲಿ ಯೋಜನೆ ಜಾರಿಗೊಳಿಸುವುದನ್ನೂ ವಿರೋಧಿಸುತ್ತೇವೆ ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು.

Cut-off box - ‘ಕೇಂದ್ರದ ಯೋಜನೆ ಪೂರ್ಣಗೊಳಿಸಲು ಒತ್ತಾಯಿಸಿ’ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುತ್ತಿಲ್ಲ ಎಂದು ಬಿಜೆಪಿಯ ಐವರು ಶಾಸಕರು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಉದಯ್‌ ಕುಮಾರ್‌ ಶೆಟ್ಟಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಸಂತೆಕಟ್ಟೆ ಅಂಡರ್‌ ಪಾಸ್‌ ಸೇರಿದಂತೆ ಕೇಂದ್ರ ಸರ್ಕಾರದ ಅನುದಾನದ ಯೋಜನೆಗಳನ್ನು ಮೊದಲು ಪೂರ್ಣಗೊಳಿಸಲು ಒತ್ತಾಯಿಸಲಿ. ಬಿಜೆಪಿ ಶಾಸಕರು ಬಿಡುಗಡೆಯಾಗಿರುವ ಅನುದಾನವನ್ನು ಮೊದಲು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಉದಯ ಕುಮಾರ್‌ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT