ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಜನ, ನಮ್ಮ ಧ್ವನಿ: ಕೊರೊನಾ ವೈರಸ್ ಸೋಂಕು ದೂರ; ಪ್ರವಾಸಿ ತಾಣಗಳು ಹತ್ತಿರ

ಪ್ರವಾಸೋದ್ಯಮ ಕ್ಷೇತ್ರಕ್ಕೆ ಜೀವಕಳೆ: ಪ್ರವಾಸಿತಾಣಗಳಲ್ಲಿ ಜನವೋ ಜನ
Last Updated 7 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ನಿಂದ ಮಂಕಾಗಿದ್ದ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತೆ ಜೀವ ಕಳೆ ಬಂದಿದೆ. ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದ ಪ್ರವಾಸಿ ತಾಣಗಳು ಗಿಜಿಗಿಡುತ್ತಿವೆ. ಧಾರ್ಮಿಕ ಕ್ಷೇತ್ರಗಳು ಭಕ್ತರಿಂದ ತುಂಬಿದ್ದು, ಹಿಂದಿನಂತೆಯೇ ಪೂಜೆ, ಪುನಸ್ಕಾರ, ಸೇವೆಗಳು ನಡೆಯುತ್ತಿವೆ. ಹೋಟೆಲ್‌, ರೆಸ್ಟೊರೆಂಟ್‌ಗಳು, ವಸತಿ ಗೃಹಗಳು, ಹೋಂ ಸ್ಟೇಗಳಲ್ಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಸೋಂಕಿನಿಂದ ನಲುಗಿದ್ದ ಪ್ರವಾಸೋದ್ಯಮ ಮಗ್ಗಲು ಬದಲಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಕಳೆದ ವರ್ಷ ಹಾಗೂ ಪ್ರಸಕ್ತ ವರ್ಷ ಕೋವಿಡ್‌ ಲಾಕ್‌ಡೌನ್‌ನಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಸೋಂಕು ಹರಡುವಿಕೆ ತಡೆಗೆ ಕಠಿಣ ನಿರ್ಬಂಧಗಳು ಜಾರಿಯಾಗಿ ಮೊದಲ ಹಂತದಲ್ಲೇ ಜಿಲ್ಲೆಯ ಎಲ್ಲ ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳನ್ನು ಮುಚ್ಚಲಾಗಿತ್ತು. ಪರಿಣಾಮ, ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದ್ದ ಉದ್ಯಮಗಳೆಲ್ಲ ಸಂಪೂರ್ಣ ನೆಲಕಚ್ಚಿದ್ದವು.

ಇದೀಗ ಜಿಲ್ಲೆಯಲ್ಲಿ ಕೋವಿಡ್‌–19 ಪ್ರಮಾಣ ಇಳಿಮುಖವಾಗಿದೆ. ಪಾಸಿಟಿವಿಟಿ ದರ ಶೇ 1ಕ್ಕಿಂತ ಕಡಿಮೆಯಾಗಿದ್ದು ರಾತ್ರಿ ಕರ್ಫ್ಯೂ ಕೈಬಿಡಲಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಆರಂಭವಾಗಿದ್ದು, ಜಿಲ್ಲೆಯ ಆರ್ಥಿಕತೆ ಬಲಗೊಳ್ಳುತ್ತಿದೆ.

ಕೊಲ್ಲೂರಿನಲ್ಲಿ ಭಕ್ತರ ದಂಡು:ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ಆರಂಭವಾದ ಕೂಡಲೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಕೊಲ್ಲೂರಿಗೆ ಭೇಟಿನೀಡುವ ಭಕ್ತರ ಪೈಕಿ ಕೇರಳ ರಾಜ್ಯದವರು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿ ಎಲ್ಲ ಸೇವೆಗಳನ್ನು ನಿಲ್ಲಿಸಲಾಗಿತ್ತು.

ಸೋಂಕು ಇಳಿಮುಖವಾಗುತ್ತಿದ್ದಂತೆ ಆರಂಭದಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಿ, ನಂತರ ಹಂತ ಹಂತವಾಗಿ ಸೇವೆಗಳು ಆರಂಭವಾದವು. ಸದ್ಯ ಕೋವಿಡ್ ಪೂರ್ವದಂತೆಯೇ ಎಲ್ಲ ಸೇವೆಗಳು ನಡೆಯುತ್ತಿದ್ದು, ಚಂಡಿಕಾ ಹೋಮಕ್ಕೆ ಹಿಂದಿನಂತೆಯೇ ಭಾರಿ ಬೇಡಿಕೆ ಇದೆ. ಅನ್ನದಾನ ನಡೆಯುತ್ತಿದ್ದು, ಭಕ್ತರಿಗೆ ವಸತಿ ಗೃಹಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ.

ದೀಪವಾಳಿ ಹಬ್ಬದ ಸಾಲು ರಜೆಗಳ ಸಂದರ್ಭದಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿಯಿಂದ ಅತಿ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಹುಂಡಿ ಆದಾಯ ಏರಿಕೆಯಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರ ಆಧಾರ್ ಕಾರ್ಡ್ ಪರೀಶೀಲನೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿಯ ಸಿಬ್ಬಂದಿ.

ಕೃಷ್ಣಮಠಕ್ಕೆ ದಾಂಗುಡಿ:ಉಡುಪಿಯ ಕೃಷ್ಣಮಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿನೀಡಿ ಕೃಷ್ಣನ ದರ್ಶನ ಪಡೆಯುತ್ತಿದ್ದಾರೆ. ಅನ್ನಪ್ರಸಾದ, ಪೂಜೆ, ಸೇವೆಗಳು ಹಿಂದಿನಂತೆ ನಡೆಯುತ್ತಿವೆ. ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೂ ದರ್ಶನಕ್ಕೆ ಅವಕಾಶವಿದೆ.

ಮಲ್ಪೆಯಲ್ಲಿ ಮತ್ತೆ ಕಲರವ:ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ವಾಟರ್ ಸ್ಫೋರ್ಟ್ಸ್‌ಗಳು ಆರಂಭವಾಗಿವೆ. ಸೇಂಟ್ ಮೇರಿಸ್ ದ್ವೀಪಕ್ಕೆ ಬೋಟ್‌ಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತಿದ್ದು, ವಾರಾಂತ್ಯ ಹಾಗೂ ಹಬ್ಬಗಳ ಸಂದರ್ಭ ಪ್ರವಾಸಿಗರು ಹೆಚ್ಚಾಗಿರುತ್ತಾರೆ ಎನ್ನುತ್ತಾರೆ ಬೀಚ್‌ ನಿರ್ವಹಣಾ ಸಿಬ್ಬಂದಿ.

ಹೆದ್ದಾರಿ ಬದಿ ಗಿಜಿ ಗಿಜಿ:ಬೈಂದೂರು ತಾಲ್ಲೂಕಿನ ಮರವಂತೆ, ತ್ರಾಸಿ, ಬೈಂದೂರಿನ ಸೋಮೇಶ್ವರ ಬೀಚ್‌ಗಳಿಗೆ ವಾರಾಂತ್ಯದಲ್ಲಿ ಅತ್ಯಧಿಕ ಪ್ರವಾಸಿಗರು ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಮರವಂತೆ, ತ್ರಾಸಿಯ ಸೌಂದರ್ಯ ತುಂಬಿಕೊಳ್ಳಲು ಹೆದ್ದಾರಿ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

ಕಾರ್ಕಳ ತಾಲ್ಲೂಕಿನ ಗೊಮ್ಮಟೇಶ್ವರ ಬೆಟ್ಟ, ಜೈನ ಬಸದಿಗಳಿಗೆ ಸಾಧಾರಣ ಮಟ್ಟದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಶಾಲಾ–ಕಾಲೇಜುಗಳಿಗೆ ರಜೆ ಇದ್ದಾಗ, ಸರಣಿ ರಜೆಗಳು ಬಂದಾಗ ಪ್ರವಾಸಿಗರ ಸಂಖ್ಯೆ ಮೂರ್ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಫೋಟೊಶೂಟ್ ಹೆಚ್ಚಳ:ಬ್ರಹ್ಮಾವರ‌ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಾರ್ಕೂರಿನಲ್ಲಿ ಮದುವೆ ಹಾಗೂ ಇತರ ಸಮಾರಂಭಗಳಿಗೆ ಪೋಟೊ ಶೂಟ್ ಮಾಡಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮಾತ್ರ ಬಾರ್ಕೂರು ಕೋಟೆ ವೀಕ್ಷಣೆಗೆ ಅವಕಾಶವಿದೆ. ಬಾರ್ಕೂರಿನಲ್ಲಿರುವ ದೇವಸ್ಥಾನ ಹಾಗೂ ಮಂದಾರ್ತಿಯ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಕೊರೊನಾ ಪೂರ್ವದಂತೆ ಭಕ್ತರು ಹೆಚ್ಚಾಗಿ ಬರುತ್ತಿದ್ದಾರೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

‘ರಾಜ್ಯದ ಭಕ್ತರು ಹೆಚ್ಚು’

ದೀಪಾವಳಿ ಹಬ್ಬದ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಹಬ್ಬಕ್ಕೆ ಸಾಲು ಸಾಲು ರಜೆ ಇದ್ದಿದ್ದರಿಂದ 5-6 ದಿನಗಳಿಂದ ಭಕ್ತರ ದಟ್ಟಣೆ ಹೆಚ್ಚಾಗಿದೆ. ಕೊಲ್ಲೂರು ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಪೈಕಿ ರಾಜ್ಯದ ಭಕ್ತರ ಸಂಖ್ಯೆಯೇ ಹೆಚ್ಚು. ಕೇರಳ ಹಾಗೂ ಇತರ ರಾಜ್ಯಗಳಿಂದ ಮಿತ ಸಂಖ್ಯೆಯ ಭಕ್ತರು ಮಾತ್ರ ಬರುತ್ತಿದ್ದಾರೆ. ದೇವಸ್ಥಾನದಲ್ಲಿ ಎಲ್ಲ ಸೇವೆಗಳು, ಅನ್ನದಾನ, ಚಂಡಿಕಾ ಹೋಮ ಸೇರಿದಂತೆ ಪೂಜಾ ವಿಧಿವಿಧಾನಗಳು, ಸೇವೆಗಳು ನಡೆಯುತ್ತಿದೆ. ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ ಅನುಸರಿಸಲಾಗುತ್ತಿದೆ. ವಸತಿ ಗೃಹಗಳಲ್ಲಿಯೂ ಉಳಿದುಕೊಳ್ಳುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಕೊಲ್ಲೂರು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್.

ರಜೆ: ಭಕ್ತರ ಸಂಖ್ಯೆ ಹೆಚ್ಚಳ

ಹಬ್ಬದ ರಜೆ ಇರುವುದರಿಂದ ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿಲ್ಲ. ದೇವಸ್ಥಾನದಲ್ಲಿ ಎಲ್ಲ ಧಾರ್ಮಿಕ ಸೇವೆಗಳನ್ನು ಆರಂಭಿಸಲಾಗಿದೆ. ಅನ್ನದಾನ ನಡೆಯುತ್ತಿದೆ. ಸಂಕಷ್ಟಿ, ಮಂಗಳವಾರ, ವಿಶೇಷ ದಿನಗಳಲ್ಲಿ ಭಕ್ತರು ಹೆಚ್ಚಾಗಿ ಭೇಟಿ ನೀಡುತ್ತಾರೆ ಎನ್ನುತ್ತಾರೆ ಆಡಳಿತ ಧರ್ಮದರ್ಶಿ ಎಚ್. ಬಾಲಚಂದ್ರ ಭಟ್.

‘ಆದಾಯ ಪ್ರಮಾಣ ಸುಧಾರಣೆ’

ಕುಂಭಾಸಿ ಆನೆಗುಡ್ಡೆ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಧಾರ್ಮಿಕ ಸೇವೆಗಳನ್ನು ಆರಂಭಿಸಲಾಗಿದೆ. ಅನ್ನದಾನವೂ ನಡೆಯುತ್ತಿದೆ. ದೇವಸ್ಥಾನಕ್ಕೆ ಬರುತ್ತಿರುವ ಆದಾಯ ಪ್ರಮಾಣದಲ್ಲಿ ಸುಧಾರಣೆಯಾಗುತ್ತಿದೆ. ತೀರ್ಥ ಪ್ರಸಾದ ವಿತರಣೆಯೂ ನಡೆಯುತ್ತಿದೆ ಎಂದು ವಿವರ ನೀಡಿದರು ದೇವಸ್ಥಾನದ ವ್ಯವಸ್ಥಾಪಕ ನಟೇಶ್ ಕಾರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT