ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಡುಬಿದ್ರಿ | ದುರ್ವಾಸನೆ: ಕಂಪನಿ ವಿರುದ್ಧ ಸ್ಥಳೀಯರ ಆಕ್ರೋಶ

ನಂದಿಕೂರು: ಸ್ಥಳಕ್ಕೆ ಪರಿಸರ ಅಧಿಕಾರಿ, ಆರೊಗ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ 
Published 2 ಜುಲೈ 2024, 5:16 IST
Last Updated 2 ಜುಲೈ 2024, 5:16 IST
ಅಕ್ಷರ ಗಾತ್ರ

ಪಡುಬಿದ್ರಿ: ಇಲ್ಲಿನ ನಂದಿಕೂರು ವಿಶೇಷ ಆರ್ಥಿಕ ವಲಯದ ಬಳಿ ಸ್ಥಾಪನೆಯಾಗಿರುವ ಬಯೊ ಡೀಸೆಲ್, ಪಾಮ್ ಆಯಿಲ್ ತಯಾರಿಕಾ ಘಟಕದಿಂದ ಹೊರಸೂಸುವ ದುರ್ವಾಸನೆಯಿಂದ ಸುತ್ತಮುತ್ತಲಿನ ಪರಿಸರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ.

ಘಟಕದಿಂದ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಜಿಡ್ಡು ವಾಸನೆಯಿಂದ ಹೆದ್ದಾರಿಯಲ್ಲಿ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಪರಿಸರದ ನಿವಾಸಿಗಳು, ಶಾಲಾ ಮಕ್ಕಳು ವಾಕರಿಕೆ, ಉಸಿರಾಟ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ. ಸಮಸ್ಯೆ ಬಗ್ಗೆ ತಾಲ್ಲೂಕು ಆಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದು, ಜನ ಹೋರಾಟಕ್ಕೆ ಮುಂದಾಗಿದ್ದಾರೆ.

ಒಂದು ವಾರದಿಂದ ಪರಿಸರದಲ್ಲಿ ದುರ್ವಾಸನೆ ಬೀರುತ್ತಿದ್ದು, ಶಾಲಾ ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯಕ್ಕೆ ತುತ್ತಾಗಿರುವುದಾಗಿಯೂ ಸ್ಥಳೀಯರು ತಿಳಿಸಿದ್ದಾರೆ. ಘಟಕದಿಂದ ಪರಿಸರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕವಾಗಿ ಸಾಕಷ್ಟು ದೂರುಗಳು ಬಂದ ಹಿನ್ನಲೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಜೂನ್ 18ರಂದು ಭೇಟಿ ನೀಡಿ 15 ದಿನಗಳೊಳಗೆ ಸಮಸ್ಯೆ ಪರಿಹರಿಸುವಂತೆ ತಾಕೀತು ಮಾಡಿದ್ದರು. ಇದೀಗ ಸಮಸ್ಯೆ ಮತ್ತೆ ಉಲ್ಬಣಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳ ಭೇಟಿ: ಸಮಸ್ಯೆಗೊಳಗಾದ ಕಂಪನಿಯ ಸುತ್ತಮುತ್ತಲ ಮನೆಗಳಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರಾಧಿಕಾರಿ ಅಮೃತಾ, ತಾಲ್ಲೂಕು ಆರೋಗ್ಯಾಧಿಕಾರಿ ವಾಸುದೇವ ರಾವ್, ಹಿರಿಯ ಆರೋಗ್ಯಾಧಿಕಾರಿ ಬಸವರಾಜ್, ಡಾ.ಸುಬ್ರಹ್ಮಣ್ಯ ರಾವ್ ಭೇಟಿ ನೀಡಿ ಪರಿಶೀಲಿಸಿದರು.

ಇಲ್ಲಿನ ಅಮಣಿ, ಶಂಕರ ರಾವ್, ಕಂಪೆನಿ ಪರಿಸರ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಗೀತಾ, ರಾಮಮಂದಿರ ಬಳಿಯ ನಿವಾಸಿಗಳೊಂದಿಗೆ ಸಮಸ್ಯೆಯ ಮಾಹಿತಿ ಪಡೆದರು. ಈ ವೇಳೆ ಸ್ಥಳೀಯರು ಕಂಪನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಉಪಪರಿಸರಾಧಿಕಾರಿ ಅಮೃತಾ, ಇಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಸ್ಥಳೀಯರ ದೂರುಗಳನ್ನೂ ಆಲಿಸಿದ್ದೇನೆ. ಈ ಬಗ್ಗೆ ಮೇಲಾಧಿಕಾರಿಗೆ ವರದಿ, ಮಾಹಿತಿ ನೀಡಲಾಗುವುದು. ಶಂಕರ ರಾವ್ ಅವರ ಮನೆಯ ಕೊಳವೆ ಬಾವಿ ನೀರನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ರಾಮ ಮಂದಿರ ಬಳಿಯ ನಿವಾಸಿ ಶಂಕರ್ ರಾವ್ ಮಾತನಾಡಿ, ಕೊಳವೆ ಬಾವಿ ಎರಡು ವರ್ಷಗಳ ಹಿಂದಿನದ್ದು. ಕಂಪನಿ ಕಾರ್ಯಾರಂಭ ಆದ ಬಳಿಕ ಮನೆಯ ಕೊಳವೆಬಾವಿಯ ನೀರು ಕುಡಿಯಲು ಅಯೋಗ್ಯವಾಗಿದೆ. ಎಣ್ಣೆ ಮಿಶ್ರಿತ ನೀರು ಬರುತ್ತಿದೆ. ಪ್ರತಿದಿನ ಪರಿಸರದಲ್ಲಿ ರಾತ್ರಿ ವೇಳೆ ದುರ್ವಾಸನೆ ಬರುತ್ತಿದ್ದು, ಉಸಿರಾಟದ ತೊಂದರೆ, ಕಣ್ಣು ಉರಿ ಉಂಟಾಗುತ್ತಿದೆ. ಇದರಿಂದ ಪರಿಸರದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ದೂರಿದರು.

ಸ್ಥಳೀಯರಾದ ಹೋರಾಟಗಾರರಾದ ಲಕ್ಷ್ಮಣ್ ಶೆಟ್ಟಿ, ನಾಗೇಶ್ ರಾವ್, ಸಂದೀಪ್ ಪಲಿಮಾರು, ಪರಿಸರದಲ್ಲಿ ಕಂಪನಿ ಹೊರಸೂಸುವ ದುರ್ವಾಸನೆಯಿಂದ ಮೂಗು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ನಂದಿಕೂರು ಪೇಟೆ ಸಹಿತ 3 ಕಿ.ಮೀ. ಸುತ್ತಮುತ್ತ ದುರ್ವಾಸನೆ ಬೀರುತ್ತಿದ್ದು, ನಂದಿಕೂರು ಶಾಲೆಯ ಮಕ್ಕಳ ಮೇಲೂ ಪರಿಣಾಮ ಬೀರಿದೆ. ಇಲ್ಲಿನ ನಿವಾಸಿಗಳು ಮಾಸ್ಕ್ ಹಾಕಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಂಪನಿ ಪರಿಸರಕ್ಕೆ ಮಾರಕ. ಸುತ್ತಮುತ್ತಲ ಬಾವಿಯ ನೀರು ಕಲುಷಿತಗೊಂಡಿದ್ದು, ಕುಡಿಯಲು ಅಯೋಗ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದುರ್ವಾಸನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪ್ರತಿದಿನ ಸಮಸ್ಯೆ ಅನುಭವಿಸುತ್ತಿದ್ದೇವೆ. ಸಣ್ಣ ಮಕ್ಕಳ ಮೇಲೂ ಇದರ ಪರಿಣಾಮ ಬೀರಿದೆ

- ಅಮಣಿ ಸ್ಥಳೀಯ ನಿವಾಸಿ

ದುರ್ವಾಸನೆಯಿಂದ ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಅಂಗನವಾಡಿಯ ಬಾಗಿಲು ಮುಚ್ಚಿ ಲ್ಲಿ ಮಕ್ಕಳನ್ನು ಕುಳಿತುಕೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ

-ಗೀತಾ ಸ್ಥಳೀಯ ಅಂಗನವಾಡಿ ಶಿಕ್ಷಕಿ

ಹೋರಾಟ ಅನಿವಾರ್ಯ ಕಂಪನಿಯಿಂದ ಪರಿಸರ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಪರಿಸರಕ್ಕೆ ಮಾರಕವಾಗುವಂತಹ ಕಂಪನಿಗಳು ಯಾವುದೇ ಕಾರಣಕ್ಕೂ ನಮಗೆ ಬೇಡ. ಕಂಪನಿ ಕೂಡಲೇ ಮುಚ್ಚಬೇಕು. ಈ ನಿಟ್ಟಿನಲ್ಲಿ ಇಲಾಖೆ ಮುಂದಾಗಬೇಕು. ಇದೇ ರೀತಿ ಕಂಪನಿ ಮುಂದುವರಿಸದಲ್ಲಿ ಸ್ಥಳೀಯರನ್ನು ಸಂಘಟಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಹೋರಾಟಗಾರ ದಿನೇಶ್ ಪಲಿಮಾರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT