ಬುಧವಾರ, ಅಕ್ಟೋಬರ್ 21, 2020
26 °C
ಹಿರಿಯ ಜೀವಗಳ ರಕ್ಷಣೆಗೆ ಜಿಲ್ಲಾಡಳಿತದಿಂದ ವಿಭಿನ್ನ ಅಭಿಯಾನ

ಹಿರಿ ಜೀವಗಳ ರಕ್ಷಣೆಗೆ ಜಿಲ್ಲಾಡಳಿತದಿಂದ ‘ನನ್ನ ಕುಟುಂಬ,ನನ್ನ ಜವಾಬ್ದಾರಿ’ ಅಭಿಯಾನ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌–19 ಮರಣ ಪ್ರಮಾಣ ತಗ್ಗಿಸಲು ಜಿಲ್ಲಾಡಳಿತ ‘ನನ್ನ ಕುಟುಂಬ, ನನ್ನ ಜವಾಬ್ದಾರಿ’ ಎಂಬ ವಿಭಿನ್ನ ಅಭಿಯಾನ  ಆರಂಭಿಸಿದೆ. ಕೋವಿಡ್‌ನಿಂದ ಹಿರಿಯ ಜೀವಗಳನ್ನು ರಕ್ಷಿಸುವುದು ಹಾಗೂ ಸಮುದಾಯಕ್ಕೆ ಸೋಂಕು ಹೆಚ್ಚು ವ್ಯಾಪಿಸದಂತೆ ತಡೆಯುವುದು ಈ ಅಭಿಯಾನದ ಉದ್ದೇಶವಾಗಿದೆ.

ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಅಭಿಯಾನ ಆರಂಭವಾಗುತ್ತಿದ್ದು ಅ.17ರಂದು ಚಾಲನೆ ಸಿಗಲಿದೆ. ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಸೋಂಕು ಹರಡುವಿಕೆಯ ಕೊಂಡಿಯನ್ನು ತುಂಡರಿಸಬೇಕು ಎಂಬುದು ಜಿಲ್ಲಾಡಳಿತದ ಆಶಯವಾಗಿದ್ದು, ಅಭಿಯಾನದ ಭಾಗವಾಗಿ ‘ಸ್ವಯಂ ಘೋಷಣಾ’ ಪತ್ರವನ್ನು ಸಿದ್ಧಪಡಿಸಿದೆ. ಅದರಲ್ಲಿ ನಾಗರಿಕರು ಪಾಲಿಸಬೇಕಾದ ಜವಾಬ್ದಾರಿಗಳನ್ನು ಮುದ್ರಿಸಲಾಗಿದೆ.

ಅಭಿಯಾನ ಹೇಗೆ ನಡೆಯಲಿದೆ:

ಆರೋಗ್ಯ ಇಲಾಖೆ ಸಿಬ್ಬಂದಿ, ಪಂಚಾಯಿತಿ ಅಧಿಕಾರಿಗಳು, ಬಿಎಲ್‌ಒಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲೆಯ ಪ್ರತಿ ಮನೆಗೂ ಭೇಟಿನೀಡಿ ಸಾರ್ವಜನಿಕರಿಗೆ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನದ ಉದ್ದೇಶವನ್ನು ತಿಳಿಸಲಿದ್ದಾರೆ. ಸೋಂಕಿನಿಂದ ಕುಟುಂಬದ ಸದಸ್ಯರನ್ನು ರಕ್ಷಿಸಿಕೊಳ್ಳುತ್ತೇವೆ ಎಂದು ಅವರಿಂದ ಪ್ರತಿಜ್ಞೆ ಮಾಡಿಸಿ, ಪತ್ರಕ್ಕೆ ಸಹಿ ಪಡೆಯಲಾಗುತ್ತದೆ. ಪ್ರತಿಜ್ಞಾ ಪತ್ರವನ್ನು ಮನೆಯ ಗೋಡೆಯ ಮೇಲೆ ಅಂಟಿಸಲಾಗುತ್ತದೆ.

ಪ್ರತಿಜ್ಞಾ ಪತ್ರದಲ್ಲಿ ಏನು:‌

‘ನನ್ನ ಕುಟುಂಬ ಹಾಗೂ ನೆರೆ–ಹೊರೆಯವರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತೇನೆ. ಕುಟುಂಬದ ಸದಸ್ಯರಿಗೆ ರೋಗದ ಲಕ್ಷಣಗಳು ಕಂಡುಬಂದರೆ ಅವರನ್ನು ಪರೀಕ್ಷೆಗೊಳಪಡಿಸಲು ಬದ್ಧನಾಗಿದ್ದೇನೆ. ಹಿರಿಯ ಸದಸ್ಯರು ಹಾಗೂ ಗರ್ಭಿಣಿಯರಿಗೆ ಸೋಂಕು ತಗುಲದಂತೆ ನೋಡಿಕೊಳ್ಳುತ್ತೇನೆ. ರಕ್ತದೊತ್ತಡ, ಮಧುಮೇಹಿಗಳಿಗೆ ಸೋಂಕು ಅಪಾಯ ತಂದೊಡ್ಡಬಹುದು ಎಂಬುದನ್ನು ಮನಗಂಡಿದ್ದೇನೆ’ ಎಂಬ ಅಂಶಗಳು ಪ್ರತಿಜ್ಞಾ ಪತ್ರದಲ್ಲಿವೆ.

ಅಭಿಯಾನದ ಹಿಂದಿನ ಉದ್ದೇಶ:

ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್‌–19 ಸೋಂಕಿನಿಂದ 170ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಅವರಲ್ಲಿ ಶೇ 75ಕ್ಕಿಂತ ಹೆಚ್ಚಿನವರು 60 ವರ್ಷ ಮೇಲ್ಪಟ್ಟವರು. ರಕ್ತದೊತ್ತಡ, ಮಧುಮೇಹ, ಕಿಡ್ನಿ, ಲಿವರ್ ಸಮಸ್ಯೆ, ಕ್ಯಾನರ್, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ತುತ್ತಾದ ಹಿರಿಯ ಜೀವಗಳೇ ಹೆಚ್ಚು ಸಾವನ್ನಪ್ಪುತ್ತಿವೆ. ಹಾಗಾಗಿ, ಹಿರಿಯರನ್ನು ಉಳಿಸಿಕೊಳ್ಳಲು ರಿವರ್ಸ್ ಕ್ವಾರಂಟೈನ್‌ ಮಾಡಲಾಗುತ್ತಿದೆ ಎನ್ನುತ್ತಾರೆ ಕಾರ್ಯಕ್ರಮದ ರೂವಾರಿ ಜಿಲ್ಲಾಧಿಕಾರಿ ಜಿ.ಜಗದೀಶ್‌.

ಕೋವಿಡ್‌ ಸೋಂಕು ಭವಿಷ್ಯದಲ್ಲಿ ದೂರವಾಗಬಹುದು. ಆದರೆ, ಕಳೆದುಕೊಂಡ ಹಿರಿಯ ಜೀವಗಳನ್ನು ಮರಳಿ ತರಲಾಗುವುದಿಲ್ಲ. ಪೋಷಕರು, ಅಜ್ಜ, ಅಜ್ಜಿ ಹಾಗೂ ಕುಟುಂಬದ ಹಿರಿಯ ಸದಸ್ಯರನ್ನು ಕೋವಿಡ್‌ ಕಾರಣಕ್ಕೆ ಕಳೆದುಕೊಂಡು ಮುಂದೆ ವ್ಯಥೆಪಡಬಾರದು. ಅದಕ್ಕಾಗಿ ಈ ಅಭಿಯಾನ ಆರಂಭಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ.

‘ಸಮುದಾಯದಲ್ಲಿನ ಅಸಡ್ಡೆ ತಪ್ಪಿಸಲು ಅಭಿಯಾನ’

ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್‌ ಬಗ್ಗೆ ಹಬ್ಬಿರುವ ವದಂತಿಯಿಂದ ಸೋಂಕಿನ ಬಗ್ಗೆ ಅಸಡ್ಡೆ ಹೆಚ್ಚಾಗಿದೆ. ರೋಗ ಲಕ್ಷಣಗಳು ಕಾಣಿಸಿಕೊಂಡರೂ ಕೆಲವರು ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಕುಟುಂಬದಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಎಲ್ಲರಿಗೂ ಹರಡುವ ಅಪಾಯ ಹೆಚ್ಚಾಗಿರುತ್ತದೆ. ಪ್ರಾಯದವರು ಸೋಂಕಿನಿಂದ ಶೀಘ್ರ ಗುಣಮುಖರಾದರೆ, ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದು, ಸಾವಿನ ಪ್ರಮಾಣ ಹೆಚ್ಚುತ್ತಿದೆ. ಸಮುದಾಯದಲ್ಲಿನ ಅಸಡ್ಡೆಯನ್ನು ತಪ್ಪಿಸವುದು ‘ನನ್ನ ಕುಟುಂಬ, ನನ್ನ ಜವಾಬ್ದಾರಿ’ ಅಭಿಯಾನದ ಉದ್ದೇಶ ಎನ್ನುತ್ತಾರೆ ಜಿಲ್ಲಾಧಿಕಾರಿ ಜಿ.ಜಗದೀಶ್‌.

ಆಮ್ಲಜನಕ ಪ್ರಮಾಣ ಪರೀಕ್ಷೆ

ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ಭೇಟಿನೀಡಿ ಪಲ್ಸ್‌ ಆಕ್ಸಿಮೀಟರ್ ಮೂಲಕ ಆಮ್ಲಜನಕದ ಪ್ರಮಾಣವನ್ನು ಪರೀಕ್ಷಿಸಲಿದ್ದಾರೆ. ಈ ಸಂದರ್ಭ ಆಮ್ಲಜನಕದ ಪ್ರಮಾಣ ಕಡಿಮೆ ಇರುವುದು ಕಂಡುಬಂದರೆ, ಅವರಿಗೆ ಕೋವಿಡ್‌ ಪರೀಕ್ಷೆಗೊಳಪಡಿಸಿ, ಅಗತ್ಯಬಿದ್ದರೆ ಚಿಕಿತ್ಸೆ ನೀಡಲಾಗುವುದು. ಈಗಾಗಲೇ ಕಾರ್ಕಳ ತಾಲ್ಲೂಕಿನಲ್ಲಿ ಪರೀಕ್ಷೆ ನಡೆಯುತ್ತಿದ್ದು, ಉಡುಪಿ, ಕುಂದಾಪುರದಲ್ಲಿಯೂ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು