ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಗುತಿಟ್ಟಿನ ಧೃವತಾರೆ ನೆಬ್ಬೂರು ನಾರಾಯಣ ಹೆಗಡೆ ಕಣ್ಮರೆ

ನಿಧನಕ್ಕೆ ಯಕ್ಷಗಾನ ಕಲಾರಂಗ ಕಂಬನಿ
Last Updated 11 ಮೇ 2019, 14:04 IST
ಅಕ್ಷರ ಗಾತ್ರ

ಉಡುಪಿ: ಬಡಗುತಿಟ್ಟಿನ ಹಿರಿಯ ಭಾಗವತರಾದ ನೆಬ್ಬೂರು ನಾರಾಯಣ ಹೆಗಡೆ ಯಕ್ಷಗಾನ ಲೋಕದ ಧೃವತಾರೆ. ಕರಾವಳಿಯ ಸಾಂಸ್ಕೃತಿಕ ನೆಲದಲ್ಲಿ ಕಲಾಯಾನದ ಅವರ ಹೆಜ್ಜೆ ಗುರುತುಗಳು ಅಚ್ಚಳಿಯದಂತೆ ಮೂಡಿವೆ ಎಂದು ಯಕ್ಷಗಾನ ಕಲಾರಂಗ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ಮರಿಸಿದರು.

ನೆಬ್ಬೂರರ ಹಾಡುಗಾರಿಕೆ ಹೋಲಿಕೆಗೆ ನಿಲುಕುವುದಿಲ್ಲ. ಯಾವ ಪರ್ಯಾಯವೂ ಸಿಗುವುದಿಲ್ಲ. ಅವರದ್ದು ಒಂದು ವಿಶಿಷ್ಠ ಪಂಥದಂತೆ. ಭಾವಪೂರ್ಣವಾದ, ಅಪ್ಯಾಯಮಾನವಾದ ಕಂಠಸಿರಿ ಕಲಾಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತ್ತು ಎಂದು ಸ್ಮರಿಸಿದರು ಅವರು.

ನೆಬ್ಬೂರರ ಹಾಡುಗಾರಿಕೆ, ಪ್ರಭಾಕರ ಭಂಡಾರಿ ಅವರ ಮದ್ದಲೆ, ಕೆರೆಮನೆ ಶಂಭು ಹೆಗಡೆ ಅವರ ಅಭಿನಯದ ಮೋಡಿಗೆ ಮರುಳಾಗದವರೇ ಇಲ್ಲ. ಅದರಲ್ಲೂ ಶಂಭು ಹೆಗಡೆ ಹಾಗೂ ನೆಬ್ಬೂರರ ಜೋಡಿಯಂತೂ ಅನುಮಪವಾದುದು ಎಂದರು.

ಇಡಗುಂಜಿ ಮೇಳಕ್ಕೆ ದಶಕಗಳ ಕಾಲ ಅವಿರತವಾಗಿ ದುಡಿದಿದ್ದಾರೆ. ಉಡುಪಿಯಲ್ಲೂ ಅವರ ಹಾಡುಗಾರಿಕೆ, ತಾಳಮದ್ದಲೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ನೆಬ್ಬೂರರಿಗೆ ಯಕ್ಷಗಾನ ಕಲಾರಂಗದ ಮೇಲೆ ಬಹಳ ಪ್ರೀತಿ ಇತ್ತು ಎಂದು ಅವರೊಟ್ಟಿಗಿನ ನೆನಪುಗಳನ್ನು ಮೆಲುಕು ಹಾಕಿದರು.

ಮಿತಭಾಷಿ, ಎಲ್ಲರೊಟ್ಟಿಗೆ ಬೆರೆಯುವ ವ್ಯಕ್ತಿತ್ವ ಅವರದ್ದಲ್ಲ. ಯಕ್ಷಗಾನದಿಂದ ಹೆಸರು ಸಂಪಾದಿಸಿದರೇ ಹೊರತು ಹಣ ಗಳಿಸಲಿಲ್ಲ. ಕೊನೆಗಾಲದವರೆಗೂ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಬಡತನ, ನೋವು, ದುಃಖ ಕರುಣಾರಸವಾಗಿ ಅವರ ಹಾಡುಗಾರಿಕೆಯಲ್ಲಿ ಅಭಿವ್ಯಕ್ತವಾಗುತ್ತಿತ್ತು. ಅವರ ಕಂಠಸಿರಿ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರು.

ನೆಬ್ಬೂರರು ಇದಕ್ಕಿದ್ದಂತೆ ಉದ್ಭವಿಸಿದ ಕಲಾವಿದರಲ್ಲ, ಒಮ್ಮೆಲೆ ಖ್ಯಾತಿಯೂ ಬೆನ್ನಿಗೇರಲಿಲ್ಲ. ದಶಕಗಳ ಕಾಲ ನಿರಂತರ ಕಲಾ ಕಲಾಸೇವೆ ಮಾಡುತ್ತಾ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದರು.ಹಾಡುಗಾರಿಕೆ ಎಂದಿಗೂ ಎಲ್ಲೆ ಮೀರುತ್ತಿರಲಿಲ್ಲ. ಹಿತ–ಮಿತವಾದ ಸನ್ನಿವೇಶಕ್ಕೆ ಎಷ್ಟು ಬೇಕು ಅಷ್ಟೇ ಭಾವ ತುಂಬುತ್ತಿದ್ದರು ಎಂದು ಕಡೇಕಾರ್ ವಿವರಿಸಿದರು.

ನೆಬ್ಬೂರು ಅವರ ಪ್ರಸಿದ್ಧ ಹಾಡುಗಳು ಹಾಗೂ ಸಂಭಾಷಣೆಗಳನ್ನೊಳಗೊಂಡಿರುವ‘ನೆಬ್ಬೂರು ಪರಿಚಯ-ಸ್ವರಚಯ’ ಶೀರ್ಷಿಕೆಯಲ್ಲಿ ತಲಾ 1 ಗಂಟೆ ಅವಧಿಯ ಸಾಕ್ಷ್ಯಚಿತ್ರವನ್ನು 10 ವರ್ಷಗಳ ಹಿಂದೆಯೇ ಯಕ್ಷಗಾನ ಕಲಾರಂಗ ನಿರ್ಮಿಸಿದೆ. ನೆಬ್ಬೂರರ ನಿಧನ ಯಕ್ಷಗಾನ ಲೋಕ್ಕೆ ತುಂಬಲಾರದ ನಷ್ಟ ಎಂದು ಅವರು ಕಂಬನಿ ಮಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT