ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಗೂಡುದೀಪಗಳ ಚಿತ್ತಾರ

ದೇಸಿ ಆಕಾಶಬುಟ್ಟಿಗೆ ಗ್ರಾಹಕರಿಂದ ಬೇಡಿಕೆ: ವ್ಯಾಪಾರವೂ ಜೋರು
Last Updated 3 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಉಡುಪಿ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದೆ. ಮಾರುಕಟ್ಟೆಗೆ ತರಹೇವಾರಿ ಗೂಡು ದೀಪಗಳು ಲಗ್ಗೆಯಿಟ್ಟಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ. ಇಡೀ ನಗರ ಗೂಡುದೀಪಗಳಿಂದ ಅಲಂಕಾರಗೊಂಡಿದ್ದು, ಮಧುವಣಗಿತ್ತಿಯಂತೆ ಕಂಗೊಳಿಸುತ್ತಿದೆ.

ಕರಾವಳಿ ಭಾಗದಲ್ಲಿ ಗೂಡು ದೀಪಗಳಿಗೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಅನಾದಿಕಾಲದಿಂದಲೂ ಭಾವನಾತ್ಮಕವಾಗಿ ಹಾಗೂ ಧಾರ್ಮಿಕವಾಗಿ ದೀಪಾವಳಿ ಹಬ್ಬದೊಂದಿಗೆ ಗೂಡು ದೀಪಗಳು ಬೆಸೆದುಕೊಂಡಿವೆ. ಹಿಂದೆಲ್ಲ ಮನೆಯಲ್ಲಿಯೇ ಬಿದಿರಿನಿಂದ ಗೂಡು ದೀಪಗಳನ್ನು ಸಿದ್ಧಪಡಿಸಿ ಮನೆಯ ಮುಂದೆ ತೂಗುಹಾಕಿ ಸಂಭ್ರಮಿಸಲಾಗುತ್ತಿತ್ತು. ಕರಾವಳಿ ನೆಲದ ಸಂಸ್ಕೃತಿ ಗೂಡುದೀಪಗಳಲ್ಲಿ ಬಿಂಬಿತವಾಗುತ್ತಿತ್ತು.

ಕಾಲ ಬದಲಾದಂತೆ, ಗೂಡು ದೀಪಗಳ ಸ್ವರೂಪವೂ ಬದಲಾಗಿದ್ದು, ಮಾರುಕಟ್ಟೆಗೆ ರೆಡಿಮೆಡ್‌ ದೀಪಗಳು ದಾಂಗುಡಿಯಿಟ್ಟಿವೆ. ಜನರು ಗೂಡು ದೀಪಗಳ ತಯಾರಿಕೆ ಮರೆತರೂ ಹಬ್ಬಕ್ಕೆ ಗೂಡು ದೀಪಗಳನ್ನು ಕಟ್ಟಲು ಮರೆತಿಲ್ಲ. ಹಾಗಾಗಿಯೇ ಇಂದಿಗೂ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಹಿರಿಯರಾದ ರಾಘವೇಂದ್ರ ಭಟ್‌.

ಹಿಂದೆಲ್ಲ, ಚೀನಾ ದೇಶದ ಆಕಾಶ ಬುಟ್ಟಿಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದ್ದವು. ಕಡಿಮೆ ಬೆಲೆ ಎಂಬ ಕಾರಣಕ್ಕೆ ಜನರೂ ಹೆಚ್ಚಾಗಿ ಖರೀದಿಸುತ್ತಿದ್ದರು. ಈಚೆಗೆ ಜನರಲ್ಲಿ ಸ್ವದೇಶಿ ಮೋಹ ಹೆಚ್ಚುತ್ತಿದೆ. ಇಲ್ಲಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ದೇಸಿ ಗೂಡುದೀಪಗಳ ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಐರೋಡಿ ಮಾರಾಟ ಮಳಿಗೆಯ ಮಾಲೀಕ ಸಹನಶೀಲ ಪೈ‌.

ಮಂಟಪ, ಸುರಳಿ, ಅಷ್ಟಪಟ್ಟಿ, ನಕ್ಷತ್ರ ಸೇರಿದಂತೆ ಕರಾವಳಿ ಸಂಸ್ಕೃತಿನ್ನು ಬಿಂಬಿಸುವ ಆಕಾಶಬುಟ್ಟಿಗಳು ಹೆಚ್ಚು ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯೂ ಕಡಿಮೆ ಇದೆ. ಗಾತ್ರ ಹಾಗೂ ಡಿಸೈನ್‌ಗೆ ಅನುಗುಣವಾಗಿ ₹ 40ರಿಂದ 400ದವರೆಗೂ ಬೆಲೆ ಇದೆ ಎನ್ನುತ್ತಾರೆ ಅವರು.

ಕೈನಿಂದಲೇ ತಯಾರಿಸಿದ ಗೂಡು ದೀಪಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಈಗಲೂ ಅಲೆವೂರು ಸೇರಿದಂತೆ ಹಲವೆಡೆಗಳಲ್ಲಿ ಕಲಾವಿದರು ಗೂಡುದೀಪಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಾರೆ. ಈ ವರ್ಷ ವ್ಯಾಪಾರ ಚೆನ್ನಾಗಿದೆ ಎನ್ನುತ್ತಾರೆ ಪೈ.

ದೀಪಾವಳಿಗೆ ಮನೆಯ ಅಂಗಳದಲ್ಲಿ ದೀಪ ಹಚ್ಚುವುದಕ್ಕೆ ಎಷ್ಟು ಮಹತ್ವವಿದೆಯೇ ಆಕಾಶಬುಟ್ಟಿಗಳಿಗೂ ಅಷ್ಟೆ ಮಹತ್ವವಿದೆ. ಬದುಕಿನ ಅಂಧಕಾರವನ್ನು ತೊಡೆದು, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಆಕಾಶಬುಟ್ಟಿಗಳನ್ನು ಕಟ್ಟಲಾಗುತ್ತದೆ ಎನ್ನುತ್ತಾರೆ ಗೃಹಿಣಿ ಶಾಂತ.

ಈಚೆಗೆ ಹಬ್ಬಗಳ ಆಚರಣೆಯಿಂದ ಜನರು ವಿಮುಖರಾಗುತ್ತಿದ್ದಾರೆ. ಸಂಪ್ರದಾಯಗಳನ್ನು ಪಾಲಿಸುವಲ್ಲಿ ಅಸಡ್ಡೆ ಎದ್ದುಕಾಣುತ್ತಿದೆ. ಹಿರಿಯರು ಇಂದಿನ ಯುವ ಜನಾಂಗಕ್ಕೆ ಗೂಡುದೀಪಗಳ ಮಹತ್ವವನ್ನು ತಿಳಿ ಹೇಳಬೇಕು. ಗೂಡುದೀಪಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT