ಉಡುಪಿ: ಕೋವಿಡ್ ಸೋಂಕು ಹರಡುವಿಕೆ ತಡೆಗೆ ದೇಶವೇ ಲಾಕ್‌ಡೌನ್ ಆದರೂ ಪತ್ರಿಕಾ ವಿತರಕರು ಹಾಗೂ ಏಜೆಂಟರು ಮಾತ್ರ ಮನೆಯಲ್ಲಿ ಕೂರಲಿಲ್ಲ. ಸೋಂಕು ತಗುಲುವ ಆತಂಕವಿದ್ದರೂ ಜೀವ ಪಣಕ್ಕಿಟ್ಟು ವೃತ್ತಿನಿಷ್ಠೆ ಮೆರೆದರು. ಎಂದಿನಂತೆ ಸೂರ್ಯ ಉದಯಿಸುವ ಮುನ್ನವೇ ಕರ್ತವ್ಯ ಆರಂಭಿಸಿ ಓದುಗರ ಮನೆಗಳಿಗೆ ದಿನಪತ್ರಿಕೆಗಳನ್ನು ತಲುಪಿಸಿದರು. ಪತ್ರಿಕಾ ವಿತರಕರ ದಿನದ ಸಂದರ್ಭದಲ್ಲಿ ಶ್ರಮಜೀವಿಗಳ ಕಾಳಜಿ ಹಾಗೂ ಪರಿಶ್ರಮ ಅಭಿನಂದನಾರ್ಹ.
ಲಾಕ್‌ಡೌನ್ ಘೋಷಣೆಯಾದಾಗ ಬಹುತೇಕ ಸೇವೆಗಳು ಬಂದ್ ಆಗಿದ್ದವು. ಜನಜೀವನ ಅಸ್ತವ್ಯಸ್ತವಾಗಿತ್ತು. ಹಿಂದೆಂದೂ ಕಾಣದ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೋಂಕಿಗೆ ಹೆದರಿ ಜನ ಮನೆಬಿಟ್ಟು ಹೊರಗೆ ಬಾರದಂತಹ ವಾತಾವರಣವಿತ್ತು. ಇಂತಹ ಸಂದಿಗ್ಥತೆಯಲ್ಲೂ ದೃತಿಗೆಡದೆ ಪತ್ರಿಕಾ ವಿತರಕರು ಹಾಗೂ ಏಜೆಂಟರು ಕಾರ್ಯ ನಿರ್ವಹಿಸಿದ್ದು ಶ್ಲಾಘನೀಯ.
ದಿನನಿತ್ಯದ ಆಗುಹೋಗುಗಳು ಹಾಗೂ ಕೊರೊನಾ ಸೋಂಕಿನ ಬಗ್ಗೆ ಅರಿಯಲು ಕಾತರರಾಗಿದ್ದಓದುಗರಿಗೆ ನಿರಾಶೆ ಮೂಡಿಸಲಿಲ್ಲ. ಪೊಲೀಸರ ಲಾಠಿ ಏಟು, ಕಿರಿಕಿರಿಯನ್ನೂ ಲೆಕ್ಕಿಸದೆ ಓದುಗರಿಗೆಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸಿದರು.
ಹಾಗೆಂದು ಪತ್ರಿಕಾ ವಿತರಕರಿಗೆ, ಏಜೆಂಟರಿಗೆ ಸೋಂಕಿನ ಭಯ ಇರಲಿಲ್ಲ ಎಂದಲ್ಲ. ಆರ್ಥಿಕ ಸಂಕಷ್ಟ ಹಾಗೂ ವೃತ್ತಿಯ ಮೇಲಿನ ಕಾಳಜಿಯಿಂದ ಸೋಂಕು ತಗುಲದಂತೆ ಹಾಗೂ ಮತ್ತೊಬ್ಬರಿಗೆ ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕಾರ್ಯ ನಿರ್ವಹಿಸಿದರು.
ಪತ್ರಿಕೆಗಳಿಂದ ಸೋಂಕು ಪ್ರಸರಣವಾಗುತ್ತದೆ ಎಂಬ ಭಯವನ್ನು ಓದುಗರ ತಲೆಯಿಂದ ತೆಗೆಯಲು ಜಾಗೃತಿ ಮೂಡಿಸಿದರು. ಜತೆಗೆ, ಸಾಂಪ್ರದಾಯಿಕ ಚಂದಾಹಣ ಪಾವತಿ ವಿಧಾನಕ್ಕೆ ಬದಲಾಗಿ ಆನ್‌ಲೈನ್ ಮೂಲಕ ಹಣ ಪಡೆಯುವುದಕ್ಕೆ ಹೆಚ್ಚು ಒತ್ತುಕೊಟ್ಟು ಡಿಜಿಟಲ್ ಆರ್ಥಿಕತೆಯ ಬೆಳವಣಿಗೆಗೆ ಕೈಜೋಡಿಸಿದರು.
ಏಜೆಂಟರ ಹಾಗೂ ವಿತರಕರ ಅನಿಸಿಕೆ
ಕೋವಿಡ್ ಕಾಲದಲ್ಲೂ ಓದುಗರಿಗೆ ಒಂದು ದಿನವೂ ಪತ್ರಿಕೆ ಹಂಚುವುದನ್ನು ನಿಲ್ಲಿಸಲಿಲ್ಲ. 16 ಜನ ವಿತರಕರಿದ್ದು, ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಹಂಚಿಕೆ ಮಾಡಲಾಗಿತ್ತು. ವಿತರಕರು ಕೂಡ ರಜೆ ಪಡೆಯದೆ ಕಾರ್ಯ ನಿರ್ವಹಿಸಿದರು. ಪತ್ರಿಕೆ ಹಂಚಿಕೆಯ ಜತೆಗೆ, ಕಾರ್ಕಳದ ಪಡುತಿರುಪತಿ ಕ್ರಿಕೆಟರ್ಸ್ ತಂಡದ ಮುಂದಾಳತ್ವ ವಹಿಸಿಕೊಂಡು ಪ್ರತಿದಿನ ಉಚಿತವಾಗಿ ಕೋವಿಡ್ ವಾರಿಯರ್ಸ್‌ಗಳಿಗೆ ಉಪಾಹಾರ ಹಾಗೂ ಊಟ ಸರಬರಾಜು ಮಾಡಿದ್ದೇನೆ.
–ಗೋವಿಂದರಾಯ ಪೈ, ಕಾರ್ಕಳಏಜೆಂಟ್
ಕೊರೊನಾ ಸೋಂಕು ಹೆಚ್ಚಾದಾಗ ಪತ್ರಿಕೆ ಹಂಚಲು ಹುಡುಗರ ಕೊರತೆಯಾಗಿತ್ತು. ಆದರೂ, ಓದುಗರಿಗೆ ತೊಂದರೆಯಾಗಬಾರದು ಎಂದು ಖುದ್ದು ಮನೆಮನೆಗೆ ತೆರಳಿ ಪತ್ರಿಕೆ ಹಂಚಿದೆ.ಎರಡು ತಿಂಗಳು ಪತ್ರಿಕೆಯ ಚಂದಾ ಹಣ ಸರಿಯಾಗಿ ಪಾವತಿಯಾಗದಿದ್ದರೂ, ಪತ್ರಿಕೆ ನಿಲ್ಲಿಸಲಿಲ್ಲ. ವಿತರಕರಕರಿಗೆ ಮಾಸ್ಕ್ ಗ್ಲೌಸ್ ಹಂಚಿ ಸುರಕ್ಷತೆಗೆ ಒತ್ತು ನೀಡಲಾಯಿತು. 50 ವರ್ಷಗಳಿಂದ ಪತ್ರಿಕೆ ಹಂಚುವ ಕಾಯಕದಲ್ಲಿ ತೊಡಗಿದ್ದು, ತೃಪ್ತಿ ಇದೆ.
– ವೆಂಕಟೇಶ್ ಕಾಮತ್, ಏಜೆಂಟ್ ಹಾಗೂ ವಿತರಕರು, ಶಿರೂರು
ಕೊರೊನಾ ವ್ಯಾಪಕವಾಗಿದ್ದಾಗಅಪಾರ್ಟ್‌ಮೆಂಟ್‌ಗಳ ಪ್ರವೇಶಕ್ಕೆ ಅನುಮತಿ ಇರಲಿಲ್ಲ. ಪೇಪರ್ ಹಾಕಲು ಬಹಳ ಕಷ್ಟವಾಗಿತ್ತು. ಆದರೂ, ಅಲ್ಲಿನ ಸಿಬ್ಬಂದಿ ಮನವೊಲಿಸಿ ಮನೆಯ ಬಾಗಿಲಿಗೆ ಪತ್ರಿಕೆಗಳನ್ನು ಮುಟ್ಟಿಸುತ್ತಿದ್ದೇವೆ. ಪತ್ರಿಕೆಯಿಂದ ಓದುಗರು ವಿಮುಖರಾಗದಂತೆ ಕಾರ್ಯ ನಿರ್ವಹಿಸಿದ್ದೇವೆ. ಹುಡುಗರಿಗೆ ಪತ್ರಿಕೆ ವಿತರಣೆ ಮಾಡಲು ಹಿಂಜರಿದಾಗ ಧೈರ್ಯತುಂಬಿ ವೃತ್ತಿಯಲ್ಲಿ ಮುಂದುವರಿಯುವಂತೆ ಮಾಡಿದ್ದೇವೆ. ಒಟ್ಟಾರೆ, ಕೋವಿಡ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಪಾಠಗಳನ್ನು ಕಲಿಸಿದೆ.
–ಸುಬ್ರಹ್ಮಣ್ಯ ತಂತ್ರಿ, ಏಜೆಂಟ್ ಹಾಗೂ ವಿತರಕರು
ವೈಯಕ್ತಿಕ ಹಾಗೂ ಓದುಗರ ಸುರಕ್ಷತೆಯ ದೃಷ್ಟಿಯಿಂದ ಪತ್ರಿಕೆ ವಿತರಣೆ ಮಾಡುವಾಗಮಾಸ್ಕ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸುತ್ತಿದ್ದೇನೆ. ಕೊರೊನಾ ಸಂದರ್ಭದಲ್ಲೂ ಓದುಗರು ಪತ್ರಿಕೆಯ ಓದಿನಿಂದ ವಿಮುಖರಾಗದಂತೆ ಎಚ್ಚರವಹಿಸಲಾಗಿತ್ತು. ಸಾರ್ವಜನಿಕರ ಪ್ರೋತ್ಸಾಹವೂ ಚೆನ್ನಾಗಿತ್ತು. ಏಪ್ರಿಲ್‌ನಲ್ಲಿ ಚಂದಾಹಣ ಸಂಗ್ರಹಿಸಲು ಸಮಸ್ಯೆಯಾದರೂ, ನಂತರ ಸರಿಯಾಯಿತು.
ರಾಜೇಶ್, ಉಡುಪಿ ವಿತರಕರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.