ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ಯಾವುದಯ್ಯ ಪಾದಚಾರಿಗಳಿಗೆ...

l ಫುಟ್‌ಪಾತ್‌ ಒತ್ತುವರಿ, ನಾಗರಿಕಗೆ ಕಿರಿಕಿರಿ l ಶಾಲಾ ಮಕ್ಕಳಿಗೆ, ವೃದ್ಧರಿಗೆ ಸಮಸ್ಯೆ l
Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಉಡುಪಿಯೂ ಒಂದು. ಆದರೆ, ಬೆಳೆಯುತ್ತಿರುವ ನಗರದ ವೇಗಕ್ಕೆ ತಕ್ಕಂತೆ ಮೂಲಸೌಕರ್ಯಗಳು ಮಾತ್ರ ಅಭಿವೃದ್ಧಿಯಾಗುತ್ತಿಲ್ಲ. ಅವೈಜ್ಞಾನಿಕ ವಾಣಿಜ್ಯ ಕಟ್ಟಡಗಳ ನಿರ್ಮಾಣದಿಂದ ನಾಗರಿಕರಿಗೆ ನಡೆದಾಡಲೂ ಪಾದಚಾರಿ ಮಾರ್ಗಗಳಿಲ್ಲ. ಸಾರ್ವಜನಿಕರು ಜೀವವನ್ನು ಕೈಲಿಡಿದುಕೊಂಡು ರಸ್ತೆಯ ಮಧ್ಯೆಯೇ ಓಡಾಡುವಂತಹ ದುಸ್ಥಿತಿ ಬಂದೊದಗಿದೆ.

ಪಾದಚಾರಿಗಳಿಗೆ ಮೀಸಲಿಟ್ಟ ಜಾಗ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದು ಸಮಸ್ಯೆಗೆ ಕಾರಣ. ಕೆಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ವಾಹನಗಳ ಪಾರ್ಕಿಂಗ್‌ಗೆ ಬಳಸಿಕೊಂಡರೆ, ಮತ್ತೆ ಕೆಲವು ಕಡೆಗಳಲ್ಲಿ ಅಂಗಡಿಗಳ ಮಾಲೀಕರು ಜಾಹೀರಾತುಗಳ ಪ್ರದರ್ಶನಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೆಲವು ಕಡೆ ಫುಟ್‌ಪಾತ್‌ಗಳೇ ಇಲ್ಲದಂತಾಗಿದೆ.

ಮಧ್ಯರಾತ್ರಿ ವಿಶಾಲವಾಗಿ ಮೈಚಾಚಿಕೊಂಡಂತೆ ಕಾಣುವ ರಸ್ತೆಗಳು ಬೆಳಿಗ್ಗೆಯ ಹೊತ್ತಿಗೆ ಕಿಷ್ಕಿಂದೆಯಾಗಿ ಬದಲಾಗುತ್ತವೆ. ಬೈಕ್‌, ಕಾರು, ಬಸ್‌, ಸರಕು ಸಾಗಣೆ ವಾಹನಗಳು ರಸ್ತೆಯ ಜತೆಗೆ ಪಾದಚಾರಿ ಮಾರ್ಗಗಳನ್ನೂ ಆಕ್ರಮಿಸಿಕೊಳ್ಳುತ್ತವೆ.ಸಣ್ಣಪುಟ್ಟ ವ್ಯಾಪಾರಿಗಳು ನಾಗರಿಕರು ಓಡಾಡುವ ಕಡೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಪರಿಣಾಮ ಜನರು ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದಾದ ಮೇಲೊಂದರಂತೆ ವೇಗವಾಗಿ ಮುನ್ನುಗ್ಗುವ ವಾಹನಗಳು ಭಯಹುಟ್ಟಿಸುವಂತಿರುತ್ತವೆ. ಬಸ್‌ಗಳು ಮೈಮೇಲೆಯೇ ಬಂದಂತಹ ಅನುಭವವಾಗುತ್ತದೆ. ಎದುರಿನಿಂದ ಬರುವ ವಾಹನಗಳನ್ನು ನೋಡಿಕೊಂಡು ಸಾಗುವುದರ ಜತೆಗೆ ಹಿಂದಿನಿಂದ ಬರುವ ವಾಹನವನ್ನೂ ನೋಡಿಕೊಂಡು ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣಕ್ಕೆ ಸಂಚಕಾರ ಖಚಿತ ಎನ್ನುತ್ತಾರೆ ಪಾದಚಾರಿ ಗೋಪಾಲರಾವ್‌.

ಸಿಟಿ ಬಸ್‌ ನಿಲ್ದಾಣದ ಹಿಂಭಾಗ, ಸರ್ವೀಸ್‌ ಬಸ್ ನಿಲ್ದಾಣದ ಮುಂಭಾಗ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿಗಿರುವ ರಸ್ತೆ, ಸಿಟಿ ಶಾಪಿಂಗ್ ಕಾಂಪ್ಲೆಕ್ಸ್‌, ಮಾರುತಿ ವಿಥಿಕಾ ರಸ್ತೆ ಸೇರಿದಂತೆ ಹಲವೆಡೆ ಪಾದಚಾರಿ ಮಾರ್ಗಗಳಿಲ್ಲ. ಈ ಭಾಗಗಳಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಜೀವಭಯದಿಂದಲೇ ಸಂಚರಿಸಬೇಕಾಗುತ್ತದೆ. ವೃದ್ಧರಂತೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ ಈ ರಸ್ತೆಯಲ್ಲಿ ಓಡಾಡಲು ಸಾಧ್ಯವೇ ಇಲ್ಲ ಎನ್ನುತ್ತಾರೆ ವಿಘ್ನೇಶ್‌.

ಪಾದಚಾರಿ ಮಾರ್ಗಗಳಲ್ಲಿ ವಾಣಿಜ್ಯ ಮಳಿಗೆ ಕಟ್ಟಡದ ಮಾಲೀಕರು ಫಲಕಗಳನ್ನು ಇಟ್ಟಿರುತ್ತಾರೆ. ಇದನ್ನು ಗಮನಿಸದೆ ಹಲವರು ಎಡವಿಬಿದ್ದು ಗಾಯ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಂಗಡಿ ಮಾಲೀಕರನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಾರೆ ಸಾರ್ವಜನಿಕರು.

ಕಿರಿದಾದ ರಸ್ತೆಯಲ್ಲಿ ಅಬ್ಬರಿಸಿಕೊಂಡು ಬರುವ ಬಸ್‌ಗಳನ್ನು ನೋಡಿದರೆ ಜೀವ ಕೈಗೆ ಬಂದಂತಹ ಅನುಭವವಾಗುತ್ತದೆ. ಹರಸಾಹಸಪಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕು. ಹಲವು ಬಾರಿ ಅಪಘಾತಗಳು ಸಂಭವಿಸಿದ್ದು, ಜೀವಕ್ಕೆ ಹಾನಿಯಾಗಿದೆ. ಕೆಲವರು ಅಂಗ ಊನರಾಗಿದ್ದಾರೆ ಎಂದರು ಸ್ಥಳೀಯರಾದ ರಾಜು.

ಮುಖ್ಯರಸ್ತೆಯಿಂದ ಚಿತ್ತರಂಜನ್ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಪಾದಚಾರಿ ಮಾರ್ಗವೇ ಇಲ್ಲ. ಪಕ್ಕದಲ್ಲೇ ಶ್ರೀಕೃಷ್ಣಮಠ ಇರುವುದರಿಂದ ನಿತ್ಯ ಸಾವಿರಾರು ಪ್ರವಾಸಿಗರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಪ್ರವಾಸಿ ವಾಹನಗಳು ಹೆಚ್ಚಾಗಿ ಸಂಚರಿಸುತ್ತವೆ. ಪ್ರತಿಷ್ಠಿತ ಶಾಲೆ–ಕಾಲೇಜುಗಳಗೆ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆಯಲ್ಲಿ ಮಕ್ಕಳು ಹೆಚ್ಚಾಗಿ ಸಂಚರಿಸುತ್ತಾರೆ. ಅವಘಡಗಳು ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಫುಟ್‌ಪಾತ್‌ ತೆರವುಗಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು ನಿವಾಸಿ ರಾಜೇಶ್ವರಿ.

ಕೆಲವು ಅಂಗಡಿ ಮಾಲೀಕರು ಫುಟ್‌ಪಾತ್ ಒತ್ತುವರಿ ಮಾಡಿಕೊಂಡು ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಪಾರ್ಕಿಂಗ್ ಸೌಲಭ್ಯ ನೀಡುತ್ತಿದ್ದಾರೆ. ಜತೆಗೆ, ಹಣ್ಣಿನ ವ್ಯಾಪಾರಿಗಳು, ಚಾಟ್ಸ್‌ ವ್ಯಾಪಾರಿಗಳು ಫುಟ್‌ಪಾತ್‌ಗೆ ಅಡ್ಡಲಾಗಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು ಅವರು.

ಫುಟ್‌ಪಾತ್ ಒತ್ತುವರಿದಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಬೇಕು. ಮಕ್ಕಳು, ವೃದ್ಧರು ಸೇರಿದಂತೆ ನಾಗರಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

**

ಪಾದಚಾರಿಗಳ ಬೇಡಿಕೆ ಏನು

*ಫುಟ್‌ಪಾತ್ ಒತ್ತುವರಿ ತೆರವುಗೊಳಿಸಿ ಓಡಾಡಲು ವ್ಯವಸ್ಥೆ ಕಲ್ಪಿಸಬೇಕು

* ಪಾದಚಾರಿ ಮಾರ್ಗ, ವಾಹನಗಳನ್ನು ನಿಲುಗಡೆ ಮಾಡಬಾರದು ಎಂಬ ಎಚ್ಚರಿಕೆ ಫಲಕ ಹಾಕಬೇಕು

* ಅಂಗಡಿ ಮಾಲೀಕರು ಒತ್ತುವರಿ ಮಾಡಿಕೊಂಡಿರುವ ಫುಟ್‌ಪಾತ್ ತೆರವುಗೊಳಿಸಬೇಕು.

* ಫುಟ್‌ಪಾತ್‌ ಮೇಲೆ ಜಾಹೀರಾತು ಫಲಕಗಳನ್ನು ಹಾಕಲು ನಿಷೇಧ ಹೇರಬೇಕು

* ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಬೇಕು

* ಪಾದಚಾರಿಗಳಿಗೆ ರಸ್ತೆ ದಾಟಲು ಅನುವಾಗುವಂತೆ ಅಡ್ಡಪಟ್ಟಿಯನ್ನು ಬರೆಸಬೇಕು

* ಫುಟ್‌ಪಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು

* ಪಾದಚಾರಿ ಮಾರ್ಗದ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು

* ವೃದ್ಧರಿಗೆ, ಶಾಲಾ ಮಕ್ಕಳಿಗೆ ರಸ್ತೆ ದಾಟಲು ಅನುಕೂಲವಾಗುವಂತೆ ವೃತ್ತಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT