ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಕಗ್ಗತ್ತಲಿನಲ್ಲಿ ಹೆದ್ದಾರಿ: ಸವಾರರಿಗೆ ಕಿರಿಕಿರಿ

Published 28 ಆಗಸ್ಟ್ 2023, 6:33 IST
Last Updated 28 ಆಗಸ್ಟ್ 2023, 6:33 IST
ಅಕ್ಷರ ಗಾತ್ರ

ಬಾಲಚಂದ್ರ ಎಚ್‌.

ಉಡುಪಿ: ಉಡುಪಿ–ಮಣಿಪಾಲ ನಗರಗಳ ಮಧ್ಯೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 169 ‘ಎ’ ಕತ್ತಲೆಯ ಕೂ‍ಪದಲ್ಲಿ ಮುಳುಗಿ ಬರೋಬ್ಬರಿ 5 ವರ್ಷಗಳು ಕಳೆದಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದೆ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಉಡುಪಿ–ಮಣಿಪಾಲ ಹೆದ್ದಾರಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಸಂಭವಿಸಿರುವ ಅಪಘಾತಗಳಲ್ಲಿ ನೂರಾರು ಮಂದಿ ಪ್ರಾಣ ಬಿಟ್ಟಿದ್ದಾರೆ. ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾದವರು, ಕೈ–ಕಾಲು ಮುರಿದುಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದವರ ಸಂಖ್ಯೆ ಸಾವಿರಾರು.

ಮನುಷ್ಯರು ಮಾತ್ರವಲ್ಲ; ಅಪಘಾತದಲ್ಲಿ ಮೃತಪಟ್ಟ ಜಾನುವಾರುಗಳ ಸಂಖ್ಯೆಯೂ ಬಹಳಷ್ಟಿದೆ. ಹೆದ್ದಾರಿ ಬದಿಯಲ್ಲಿ ಹುಲುಸಾಗಿ ಬೆಳೆದ ಹುಲ್ಲು ಮೇಯುವಾಗ, ರಸ್ತೆ ಮೇಲೆ ಮಲಗಿರುವಾಗ, ನಡೆದುಕೊಂಡು ಹೋಗುವಾಗ ಕತ್ತಲಿನಲ್ಲಿ ದಾರಿ ಕಾಣದೆ ವಾಹನಗಳು ಜಾನುವಾರುಗಳಿಗೆ ಡಿಕ್ಕಿ ಹೊಡೆದು ನೂರಾರು ಮೂಕ ಪ್ರಾಣಿಗಳು ಬಲಿಯಾಗಿವೆ.

ಇಷ್ಟೆಲ್ಲ ಜನ–ಜಾನುವಾರುಗಳ ಸಾವು–ನೋವು ಸಂಭವಿಸಿದರೂ ಜಿಲ್ಲಾಡಳಿತವಾಗಲಿ, ಹೆದ್ದಾರಿ ಪ್ರಾಧಿಕಾರವಾಗಲಿ, ನಗರಾಡಳಿತವಾಗಲಿ ಬೀದಿ ದೀಪಗಳ ಅಳವಡಿಕೆಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿಯಲ್ಲಿ ಬೀದಿದೀಪಗಳನ್ನು ಅಳವಡಿಸುವಂತೆ ಐದು ವರ್ಷಗಳಿಂದ ಪ್ರತಿಭಟನೆಗಳು ನಡೆದರೂ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ಕಿಲ್ಲ.

ಉಡುಪಿಯ ಕಡಿಯಾಳಿ ಬಳಿಯ ಓಷಿಯನ್‌ ಪರ್ಲ್‌ ಹೋಟೆಲ್‌ನಿಂದ ಮಣಿಪಾಲದ ಪರ್ಕಳದವರೆಗೂ ಚಾಚಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳು ಇಲ್ಲ. ಸೂರ್ಯ ಮುಳುಗುತ್ತಿದ್ದಂತೆ ಹೆದ್ದಾರಿಯೂ ಸಂಪೂರ್ಣವಾಗಿ ಕತ್ತಲಿನಲ್ಲಿ ಮುಳುಗುತ್ತದೆ.

ಬೈಕ್‌, ಕಾರು, ಬಸ್‌, ಲಾರಿ, ಟ್ರಕ್‌ ಸೇರಿದಂತೆ ಸಾವಿರಾರು ವಾಹನಗಳು ಕಗ್ಗತ್ತಲಿನಲ್ಲಿಯೇ ಸಾಗುತ್ತವೆ. ಹೀಗೆ ಸಂಚರಿಸುವಾಗ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಗಳು ಖಚಿತ. ಹೆದ್ದಾರಿಯಲ್ಲಿ ಪ್ರತಿದಿನ ಅಪಘಾತಗಳು ತಪ್ಪಿದ್ದಲ್ಲ ಎನ್ನುತ್ತಾರೆ ಪೊಲೀಸರು.

ಉಡುಪಿ–ಮಣಿಪಾಲ ಹೆದ್ದಾರಿ ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಯಾಗಿದ್ದು, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವನ್ನು ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದೆ ಸಾರ್ವಜನಿಕರ ಪ್ರಾಣಕ್ಕೆ ಕಂಟಕ ಎದುರಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು  ಬೀದಿ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಪಾದಚಾರಿಗಳ ಪ್ರಾಣಕ್ಕೂ ಕಂಟಕ

ಮಣಿಪಾಲದ ಕೈಗಾರಿಕಾ ಪ್ರದೇಶ, ಮಾಹೆ ವಿಶ್ವವಿದ್ಯಾಲಯ, ಎಂಐಟಿ, ಕೆಎಂಸಿ ಆಸ್ಪತ್ರೆ, ಬಾರ್ ಆ್ಯಂಡ್ ರೆಸ್ಟೋರೆಟ್‌, ಪಬ್‌, ಹೋಟೆಲ್‌ಗಳಲ್ಲಿ ಸಾವಿರಾರು ಮಂದಿ ದುಡಿಯುತ್ತಿದ್ದಾರೆ. ತೀರಾ ಕಡಿಮೆ ವೇತನಕ್ಕೆ ಕೈಗಾರಿಕೆಗಳು, ಸಣ್ಣ ಹೋಟೆಲ್‌ಗಳು, ಬಾರ್, ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುವ ಮಣಿಪಾಲ–ಉಡುಪಿ ನಗರಗಳ ಮಧ್ಯೆ ನೆಲೆಸಿರುವ ಸಾವಿರಾರು ಕಾರ್ಮಿಕರು ಕೆಲಸ ಮುಗಿಸಿ ರಾತ್ರಿಯ ಹೊತ್ತು ಹೆದ್ದಾರಿಯಲ್ಲಿ ನಡೆದುಕೊಂಡೇ ಸಾಗುತ್ತಾರೆ.

ಪ್ರತಿನಿತ್ಯವೂ ಹೆದ್ದಾರಿಯಲ್ಲಿ ಸಾಗುವಾಗ ಜೀವ ಕೈಲಿಡಿದು ಸಾಗಬೇಕಾಗುತ್ತದೆ. ಪಾದಚಾರಿ ಮಾರ್ಗ ಇಲ್ಲದ ಕಡೆಗಳಲ್ಲಿ ರಸ್ತೆಯ ಮೇಲೆ ನಡೆಯುತ್ತಾರೆ. ಹೀಗೆ, ಹೋಗುವಾಗ ಲೆಕ್ಕವಿಲ್ಲದಷ್ಟು ಅಪಘಾತಗಳು ಸಂಭವಿಸಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೈಕಾಲು ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದಾರೆ.

ಬೈಕ್‌, ನಾಲ್ಕು ಚಕ್ರದ ವಾಹನಗಳಿಗೆ ಹೆಡ್‌ಲೈಟ್‌ಗಳಿದ್ದರೂ ಎದುರಿಗೆ ಬರುವ ವಾಹನಗಳ ಪ್ರಖರ ಬೆಳಕು ಕಣ್ಣಿಗೆ ಕತ್ತಲೆ ಕವಿಯುವಂತೆ ಮಾಡುತ್ತಿದ್ದು ವಾಹನಗಳು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಪಾದಚಾರಿಗಳಿಗೆ ಡಿಕ್ಕಿ ಹೊಡೆಯುತ್ತಿವೆ. ಹಲವು ವಾಹನಗಳು ಬ್ಯಾರಿಕೇಡ್‌ಗಳಿಗೆ ಗುದ್ದಿ ಪಲ್ಟಿಯಾಗಿ ಅನಾಹುತಗಳು ಸಂಭವಿಸುತ್ತಿವೆ.

ಬ್ಲಾಕ್ ಸ್ಪಾಟ್‌

ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಉಡುಪಿ ಕಡೆಗೆ ಸಾಗುವಾಗ ಕೆಎಫ್‌ಸಿ ಎದುರಿಗಿರುವ ಅಪಾಯಕಾರಿ ತಿರುವು, ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಬಳಿ, ಎಂಜಿಎಂ ಕಾಲೇಜು ಸಮೀಪ, ಕಡಿಯಾಳಿ ಬಳಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಅಪಘಾತಗಳಿಗೆ ಬೀದಿದೀಪಗಳು ಇಲ್ಲದಿರುವುದು ಪ್ರಮುಖ ಕಾರಣ ಎನ್ನುತ್ತಾರೆ ಪೊಲೀಸರು.

ಸಮಸ್ಯೆಗೆ ಅರ್ಧ ದಶಕ

5 ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 169 ‘ಎ’ ವಿಸ್ತರಣೆ ಕಾಮಗಾರಿಗಾಗಿ ಹಳೆಯ ಬೀದಿದೀಪಗಳನ್ನು ತೆರವುಗೊಳಿಸಲಾಯಿತು. ನಿಯಮಗಳ ಪ್ರಕಾರ ಕಾಮಗಾರಿ ಪೂರ್ಣಗೊಂಡ ಬಳಿಕ ಬೀದಿದೀಪಗಳನ್ನು ಅಳವಡಿಸಬೇಕಿತ್ತು. ಹೆದ್ದಾರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಿ 3 ವರ್ಷ ಕಳೆದರೂ ಬೀದಿದೀಪಗಳ ಅಳವಡಿಕೆ ಮಾಡಲಿಲ್ಲ.

ಹೆದ್ದಾರಿಯ ಬೀದಿ ದೀಪಗಳ ನಿರ್ವಹಣೆ ನಗರಸಭೆಗೆ ಸೇರಿಲ್ಲ ಎಂದು ಸ್ಥಳೀಯ ಆಡಳಿತ ನುಣುಚಿಕೊಂಡರೆ, ಟೆಂಡರ್ ಪ್ರಕ್ರಿಯೆಯಲ್ಲಿ ಬೀದಿದೀಪಗಳ ಅಳವಡಿಕೆಯ ಪ್ರಸ್ತಾಪ ಇಲ್ಲ ಎಂಬುದು ಗುತ್ತಿಗೆದಾರ ಕಂಪನಿ ಹಾಗೂ ಹೆದ್ದಾರಿ ಪ್ರಾಧಿಕಾರದ ವಾದ. ಆದರೆ, ಸಮಸ್ಯೆ ಅನುಭವಿಸಿದ್ದು ಮಾತ್ರ ಸಾರ್ವಜನಿಕರು.

ಉಡುಪಿ ನಗರಸಭೆ ವ್ಯಾಪ್ತಿಯಲ್ಲೂ ಬೀದಿ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿದೆ. ಇಂದ್ರಾಳಿ, ಈಶ್ವರ ನಗರ, ಮಣಿಪಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗಿದೆ. ಮಣಿಪಾಲದಿಂದ ಪೆರಂಪಳ್ಳಿ ರಸ್ತೆಯೂ ಕತ್ತಲಿನಲ್ಲಿ ಮುಳುಗಿದೆ. ಕೆಲವು ವಾರ್ಡ್‌ಗಳಲ್ಲಿ ಬೀದಿದೀಪಗಳು ಕಣ್ಣಾ ಮುಚ್ಚಾಲೆ ಆಟವಾಡುತ್ತಿದ್ದರೆ, ಕೆಲವು ಕಡೆ ಸಮರ್ಪಕ ಬೆಳಕು ಸೂಸುತ್ತಿಲ್ಲ.

ಕಾರ್ಕಳ ವರದಿ

ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಅವ್ಯವಸ್ಥೆ ಕಾಡುತ್ತಿದೆ. ಬಸ್ ನಿಲ್ದಾಣ, ಅನಂತಶಯನ ಹಾಗೂ ದಾನಶಾಲೆ ಜಂಕ್ಷನ್‌ಗಳಲ್ಲಿ ಹೈಮಾಸ್ಟ್ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಅನಂತಶಯನದಿಂದ ನಾಗರಬಾವಿ ಮೂಲಕ ಹನುಮಾನ್ ಪೆಟ್ರೋಲ್ ಬಂಕ್‌ವರೆಗೂ ಸಾಗುವ ಮಾರ್ಗದಲ್ಲಿ ಬೀದಿ ದೀಪಗಳು ಮಂಕಾಗಿವೆ. ಪುರಸಭೆಯಿಂದ ಹಿಂದೆ ಅಳವಡಿಸಿದ್ದ ಸೋಲಾರ್ ದೀಪಗಳು ಹಾಳಾಗಿವೆ. ಬ್ಯಾಟರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಪುರಸಭೆ ಆರಂಭ ಶೂರತ್ವ ತೋರಿ ಕೈಚೆಲ್ಲಿ ಕುಳಿತಿದೆ.

ಕೈಗಾರಿಕಾ ಪ್ರದೇಶವೂ ಕತ್ತಲೆ

ನೂರಾರು ಕೈಗಾರಿಕೆಗಳು ನೆಲೆಸಿರುವ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ತೆರಿಗೆ ಪಾವತಿಸುವ ಮಣಿಪಾಲದ ಕೈಗಾರಿಕಾ ಪ್ರದೇಶ ಕೂಡ ಬೀದಿದೀಪಗಳ ಸಮಸ್ಯೆಯಿಂದ ಬಳಲುತ್ತಿದೆ. ಸಣ್ಣ ಕೈಗಾರಿಕೆಗಳಲ್ಲಿ ದುಡಿಯವು ಕಾರ್ಮಿಕರು ಕೆಲಸ ಮುಗಿಸಿ ರಾತ್ರಿ ಮನೆಗೆ ಬರುವಾಗ ಭಯದಲ್ಲಿ ನಡೆದುಕೊಂಡು ಬರಬೇಕು. ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಬಡಾವಣೆಯ ಜನರೂ ಆತಂದಕಲ್ಲಿ ಬದುಕುವಂತಾಗಿದೆ.

ಬೀದಿ ದೀಪ ಇದ್ದರೂ ಉರಿಯುವುದಿಲ್ಲ

ಉಚ್ಚಿಲ ಪೆಟ್ರೋಲ್ ಬಂಕ್‌ನಿಂದ ಮಸೀದಿಯವರೆಗೆ ರಾಷ್ಟ್ರೀಯ ಹೆದ್ದಾರಿ ಡಿವೈಡರ್ ಮಧ್ಯೆ ದಾರಿದೀಪಗಳನ್ನು ಅಳವಡಿಸಿ ವರ್ಷ ಕಳೆದರೂ ಇದುವರೆಗೂ ಉರಿಯುತ್ತಿಲ್ಲ. ಕಾಪುವಿನ ಪಾಂಗಳದಿಂದ ಉಳಿಯಾರಗೋಳಿವರೆಗೂ ಇದೇ ಸಮಸ್ಯೆ ಇದೆ. ಪರಿಣಾಮ ಹೆದ್ದಾರಿಯಲ್ಲಿ ರಾತ್ರಿಯ ಹೊತ್ತು ಸಾಗುವ ವಾಹನಗಳಿಗೆ ಸಮಸ್ಯೆಯಾಗಿದ್ದು ಅಪಘಾತಗಳು ಹೆಚ್ಚಾಗಿವೆ. ಪ್ರಮುಖ ಸರ್ಕಲ್‌ಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಬೇಕು ಎಂಬ ಬೇಡಿಕೆಯೂ ಈಡೇರಿಲ್ಲ. ಹೆಜಮಾಡಿ ಟೋಲ್‌ಗೇಟ್‌ ಬಳಿ ನೂರಾರು ಸರಕು ಸಾಗಣೆ ವಾಹನಗಳು ವಿಶ್ರಾಂತಿ ಪಡೆಯಲು ನಿಲ್ಲಿಸುತ್ತವೆ. ಆದರೆ ಇಲ್ಲಿಯೂ ಬೀದಿದೀಪಗಳು ಉರಿಯದೆ ಚಾಲಕರು ಆತಂಕದಲ್ಲಿ ನಿದ್ರೆ ಮಾಡಬೇಕಾಗಿದೆ.

ಪೊಲೀಸ್ ಇಲಾಖೆಗೂ ಸವಾಲು

ಉಡುಪಿ–ಮಣಿಪಾಲ ಹೆದ್ದಾರಿಯಲ್ಲಿ ಬೀದಿದೀಪಗಳು ಉರಿಯದ ಪರಿಣಾಮ ಅಪಘಾತ ಪ್ರಕರಣಗಳ ತನಿಖೆಗೆ ಅಡ್ಡಿಯಾಗಿದೆ. ಸಿಸಿಟಿವಿ ಕ್ಯಾಮೆರಾಗಳು ಇದ್ದರೂ ಪ್ರಯೋಜನವಾಗದಂತಾಗಿದೆ. ಹೆದ್ದಾರಿಯಲ್ಲಿ ಹಲವು ಬಾರ್ ಆ್ಯಂಡ್ ರೆಸ್ಟೊರೆಂಟ್‌ಗಳಿದ್ದು ಮದ್ಯವ್ಯಸನಿಗಳು ರಾತ್ರಿಯ ಹೊತ್ತು ಸಾರ್ವಜನಿಕರಿಗೆ ತೊಂದರೆ ಕೊಡುವ ಘಟನೆಗಳು ನಡೆಯುತ್ತಿವೆ. ಕಳವು ಸುಲಿಗೆಯಂತಹ ಕೃತ್ಯಗಳನ್ನು ಮಾಡಲು ಕಳ್ಳರಿಗೆ ಹೆದ್ದಾರಿ ಪ್ರಶಸ್ತವಾದ ಜಾಗವಾಗಿದೆ.

ಬೀದಿದೀಪ ಅಳವಡಿಕೆ ಪ್ರಕ್ರಿಯೆ ಆರಂಭ

ರಾಷ್ಟ್ರೀಯ ಹೆದ್ದಾರಿ 169 ಎ ವಿಸ್ತರಣೆ ಮಾಡುವ ಸಂದರ್ಭ ಬೀದಿದೀಪಗಳನ್ನು ತೆರವುಗೊಳಿಸಿ ನಂತರ ಅಳವಡಿಕೆ ಮಾಡಿರಲಿಲ್ಲ. ರಾತ್ರಿಯ ಹೊತ್ತು ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ತಕ್ಷಣ ಬೀದಿದೀಪ ಅಳವಡಿಕೆಗೆ ನಗರಸಭೆಗೆ ಸೂಚನೆ ನೀಡಲಾಗಿದೆ. ಉಡುಪಿ–ಮಣಿಪಾಲ ನಗರಗಳ ಮಧ್ಯೆ 191 ಕಡೆ ಬೀದಿದೀಪ ಅಳವಡಿಕೆಗೆ ಸ್ಥಳ ಗುರುತಿಸಿ ಗುಂಡಿಗಳನ್ನು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶೀಘ್ರ ಹೆದ್ದಾರಿಯಲ್ಲಿ ಬೆಳಕು ಹರಿಯಲಿದೆ. –ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ

ಅಪರಾಧ ಪ್ರಕರಣಗಳು ಹೆಚ್ಚು

ಹೆದ್ದಾರಿಯಲ್ಲಿ ಬೀದಿದೀಪಗಳು ಇಲ್ಲದಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಚಾಲಕರಿಗೆ ದಾರಿ ಕಾಣದೆ ಅಲ್ಲಲ್ಲಿ ಅಪಘಾತಗಳು ನಡೆಯುತ್ತಿವೆ. ವಿಶೇಷವಾಗಿ ಅಪಾಯಕಾರಿ ತಿರುವುಗಳಲ್ಲಿ ಅಪಘಾತಗಳು ಹೆಚ್ಚಾಗಿವೆ. ಇದಲ್ಲದೆ ರಾತ್ರಿಯ ಹೊತ್ತು ಅಹಿತಕರ ಘಟನೆಗಳು ವರದಿಯಾಗುತ್ತಿದ್ದು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಗಸ್ತು ನಡೆಯುತ್ತಿದೆ. –ಅಕ್ಷಯ್ ಎಂ.ಹಾಕೆ ಎಸ್‌ಪಿ

ಮಣಿಪಾಲ ನಗರದಲ್ಲಿ ಕತ್ತಲಿನಲ್ಲಿ ಮುಳುಗಿರುವುದು
ಮಣಿಪಾಲ ನಗರದಲ್ಲಿ ಕತ್ತಲಿನಲ್ಲಿ ಮುಳುಗಿರುವುದು
ಉಡುಪಿಯ ಹೃದಯಭಾಗ ಕೆಎಂ ರಸ್ತೆಯಲ್ಲಿ ಬೀದಿದೀಪಗಳ ಸಮಸ್ಯೆ
ಉಡುಪಿಯ ಹೃದಯಭಾಗ ಕೆಎಂ ರಸ್ತೆಯಲ್ಲಿ ಬೀದಿದೀಪಗಳ ಸಮಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT