ಸೋಮವಾರ, ಮಾರ್ಚ್ 27, 2023
29 °C
ಸಂಸ್ಕೃತಿ ವಿಶ್ವಪ್ರತಿಷ್ಠಾನದ ವಿಭಿನ್ನ ಪ್ರಯತ್ನಕ್ಕೆ ಕಲಾವಿದರ ಮೆಚ್ಚುಗೆ

ಉಡುಪಿ | ಆನ್‌ಲೈನ್‌ನಲ್ಲಿ ‘ಹೀಗೊಂದು ರಂಗಕಲಿಕೆ’

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸದಾ ಲವಲವಿಕೆಯಿಂದ ಪುಟಿಯುತ್ತಿದ್ದ ರಂಗಭೂಮಿ ಕೊರೊನಾ ಲಾಕ್‌ಡೌನ್‌ನಿಂದ ಕಳೆಗುಂದಿದೆ. ರಂಗ ಚಟುವಟಿಕೆಗಳು ಸ್ತಬ್ಧವಾಗಿವೆ. ಕಲಾವಿದರು ಏಕತಾನತೆಯಲ್ಲಿ ಬಂಧಿಯಾಗಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ರಂಗಚಟುವಟಿಕೆಗಳನ್ನು ಉದ್ದೀಪನಗೊಳಿಸಲು ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ‘ಹೀಗೊಂದು ರಂಗಕಲಿಕೆ’ ಎಂಬ ವಿಭಿನ್ನ ಆನ್‌ಲೈನ್ ಕಲಿಕಾ ಪ್ರಯೋಗಕ್ಕೆ ಮುಂದಾಗಿದೆ.

ಏನಿದು ‘ರಂಗಕಲಿಕೆ’: ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡು ಕಲಾವಿದರ ನಟನಾ ಕೌಶಲಕ್ಕೆ ಸಾಣೆ ಹಿಡಿಯುವುದು, ಕಲಿಕಾಸಕ್ತರಿಗೆ ಮನೆಯಲ್ಲಿಯೇ ಆನ್‌ಲೈನ್‌ನಲ್ಲಿ ರಂಗಕಲಿಕೆಗೆ ವೇದಿಕೆ ಸೃಷ್ಟಿಸುವುದು, ರಂಗ ಚಟುವಟಿಕೆಗಳು ಸದಾ ಲವಲವಿಕೆಯಿಂದ ಇರುವಂತೆ ಮಾಡುವುದು ‘ರಂಗಕಲಿಕೆ’ಯ ಪ್ರಮುಖ ಉದ್ದೇಶ.

ಸಂಸ್ಕೃತಿ ವಿಶ್ವಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್‌.ಪಿ. ಅವರ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ‘ಹೀಗೊಂದು ರಂಗಕಲಿಕೆ’ ಪ್ರಯೋಗವು ದೇಶ, ವಿದೇಶಗಳ ಗಡಿ ದಾಟಿದೆ. ಫೇಸ್‌ಬುಕ್‌, ಯೂ ಟ್ಯೂಬ್‌ನಲ್ಲಿ ಸಾವಿರಾರು ರಂಗಾಸಕ್ತರನ್ನು ಸೆಳೆದಿದೆ. ಹೊಸ ಪ್ರಯೋಗಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ರಂಗ ಕಲಿಕೆ ಹೇಗೆ?
ಸಂಸ್ಕೃತಿ ವಿಶ್ವಪ್ರತಿಷ್ಠಾನವು ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ನೆಲೆಸಿರುವ ರಂಗಕಲಾವಿದರ ದೊಡ್ಡ ಬಳಗವನ್ನೇ ಹೊಂದಿದೆ. ಜತೆಗೆ, ಹಲವು ಥಿಯೇಟರ್‌ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳ ಸಂಪರ್ಕವೂ ಇದೆ. ಇವೆಲ್ಲವನ್ನೂ ಬಳಸಿಕೊಂಡು ಪ್ರತಿವಾರ ನಿರ್ಧಿಷ್ಟ ರಂಗ ಕಲಿಕೆಯ ವಿಷಯದ ಕುರಿತು ಕಲಾವಿದರಿಂದ ವಿಡಿಯೋಗಳನ್ನು ಆಹ್ವಾನಿಸುತ್ತದೆ.

ಜತೆಗೆ, ನಾಡಿನ ಪ್ರಸಿದ್ಧ ರಂಗನಟರು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಕಲಾವಿದರಿಗೆ ನೀಡಿದ ನಿರ್ಧಿಷ್ಟ ರಂಗಕಲಿಕೆಯ ಬಗ್ಗೆ ಸಮಗ್ರ ಮಾಹಿತಿಯನ್ನೊಳಗೊಂಡ ವಿಡಿಯೋ ತರಿಸಿಕೊಳ್ಳಲಾಗುತ್ತದೆ. ನಟನಾ ಕೌಶಲ, ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಹೇಗಿರಬೇಕು ಎಂಬ ವಿಚಾರಗಳು ವಿಡಿಯೋದಲ್ಲಿ ಇರಲಿವೆ.

ಕಲಾವಿದರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಕಳಿಸಿದ ವಿಡಿಯೋಗಳನ್ನು ಸಂಕಲನ ಮಾಡಿ 10 ರಿಂದ 15 ನಿಮಿಷದ ತುಣುಕನ್ನು ಸಿದ್ಧಪಡಿಸಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಯೂಟ್ಯೂಬ್, ಫೇಸ್‌ಬುಕ್‌ ಪುಟದಲ್ಲಿ ಹಾಕಲಾಗುತ್ತದೆ. ಕಲಾವಿದರ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳಿಗೂ ಕಳಿಸಲಾಗುತ್ತದೆ. ಇದರಿಂದ ಕಲಾವಿದರ ನಟನಾ ಕೌಶಲ ಹೆಚ್ಚುವುದರ ಜತೆಗೆ, ಹೊಸ ಕಲಾವಿದರ ಕಲಿಕೆಗೆ ಮಾರ್ಗದರ್ಶನ ಸಿಕ್ಕಂತಾಗುತ್ತದೆ ಎನ್ನುತ್ತಾರೆ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್‌.ಪಿ.

ಪ್ರಯೋಜನ ಏನು?
ಲಾಕ್‌ಡೌನ್ ಸಮಯದ ಸದುಪಯೋಗ, ರಂಗಾಭ್ಯಾಸಕ್ಕೆ ವೇದಿಕೆ, ದೇಶ ವಿದೇಶಗಳಲ್ಲಿ ನೆಲೆಸಿರುವ ಹಿರಿಯ–ಕಿರಿಯ ಕಲಾವಿದರ ಸಂಗಮ, ಬಹುಭಾಷೆಗಳ ವಿನಿಯಮ, ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಅಸಂಗತ ನಾಟಕ ಕೃತಿಗಳ ಸಮನ್ವಯ, ಮುಖ್ಯವಾಗಿ ರಂಗಭೂಮಿಯತ್ತ ಯುವ ಮನಸ್ಸುಗಳನ್ನು ಸೆಳೆಯಲು ಇದರಿಂದ ಸಾಧ್ಯವಾಗಲಿದೆ ಎನ್ನುತ್ತಾರೆ ರವಿರಾಜ್‌.

ನವರಸಗಳ ಸರಣಿ
ಲಾಕ್‌ಡೌನ್ ಸಮಯವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳುವುದು ಎಂದು ಯೋಚಿಸುವಾಗ ‘ರಂಗಕಲಿಕೆ’ ವಿಚಾರ ಹೊಳೆಯಿತು. ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ರಂಗಕಲಿಕೆಗೆ ಪೂರಕವಾದ ಮಾಹಿತಿ ನೀಡುವಂತೆ ಕೋರಲಾಯಿತು. ಅದರಂತೆ ಆರಂಭದಲ್ಲಿ ಜೀವನ್‌ರಾಂ ಸುಳ್ಯ ಅವರು ಮಾತುಗಾರಿಕೆ ಹಾಗೂ ಅಭಿನಯ ಹೇಗಿರಬೇಕು ಎಂಬ ಬಗ್ಗೆ ವಿಡಿಯೋ ಕಳಿಸಿದರು. ಬಳಿಕ ನವರಸಗಳ ಸರಣಿ ಆರಂಭಿಸಿದೆವು. ಹಾಸ್ಯ ರಸದ ಬಗ್ಗೆ ಮಂಡ್ಯ ರಮೇಶ್‌, ಕರುಣಾರಸದ ಬಗ್ಗೆ ಕಾಸರಗೋಡು ಚಿನ್ನ, ಶೃಂಗಾರ ರಸದ ಬಗ್ಗೆ ಡಾ.ಶ್ರೀಪಾದ್ ಭಟ್‌ ವಿಡಿಯೋಗಳನ್ನು ಕಳಿಸಿಕೊಟ್ಟರು. ಹೀಗೆ ನವರಸಗಳ ಅಭಿನಯ ಹೇಗಿರಬೇಕು ಎಂಬುದನ್ನು ಯುವ ಕಲಾವಿದರಿಗೆ ತಿಳಿಸಿಕೊಡುವ ಪ್ರಯತ್ನವನ್ನು ಸಂಸ್ಕೃತಿ ವಿಶ್ವಪ್ರತಿಷ್ಠಾನ ಮಾಡುತ್ತಿದೆ ಎಂದು ರವಿರಾಜ್ ಎಚ್‌.ಪಿ ತಿಳಿಸಿದರು.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು