ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಅಭಿವೃದ್ಧಿಯ ಹಿಂದೆ ಆಸ್ಕರ್ ಶ್ರಮ ದೊಡ್ಡದು: ವಿನಯ ಕುಮಾರ್ ಸೊರಕೆ

ಕಾಂಗ್ರೆಸ್ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ
Last Updated 18 ಸೆಪ್ಟೆಂಬರ್ 2021, 13:56 IST
ಅಕ್ಷರ ಗಾತ್ರ

ಉಡುಪಿ: ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಾಯಕಲ್ಪ, ಬೆಂಗಳೂರು–ಮೈಸೂರು ಹೆದ್ದಾರಿ ಮೇಲ್ದರ್ಜೆ, ಕೊಂಕಣ ರೈಲ್ವೆ ಯೋಜನೆಗಳ ಅನುಷ್ಠಾನ, ಆಗುಂಬೆ, ಶಿರಾಡಿ ಘಾಟಿ ರಸ್ತೆಗಳ ನಿರ್ಮಾಣ, ಎಂಆರ್‌ಪಿಎಲ್‌, ವಾರಾಹಿ ಯೋಜನೆ, ಕರಾವಳಿಯಲ್ಲಿ ದೂರದರ್ಶನ ಕೇಂದ್ರ ಸ್ಥಾಪನೆಯಾವುದರ ಹಿಂದೆ ಆಸ್ಕರ್ ಫರ್ನಾಂಡಿಸ್‌ ಶ್ರಮವಿದೆ. ಉಡುಪಿ ಜಿಲ್ಲೆಗೆ ಆಸ್ಕರ್ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವವರಿಗೆ ಇದು ಉತ್ತರ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಶನಿವಾರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಆಸ್ಕರ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬ್ರಹ್ಮಾವರದಲ್ಲಿ ರೈತರೊಟ್ಟಿಗೆ ನಿಂತು ಸಕ್ಕರೆ ಕಾರ್ಖಾನೆಯನ್ನು ಹೇಗೆ ಲಾಭದಾಯಕವನ್ನಾಗಿ ಕಟ್ಟಬಹುದು ಎಂದು ಆಸ್ಕರ್ ತೋರಿಸಿಕೊಟ್ಟರು. ಬದುಕಿನುದ್ದಕ್ಕೂ ಸರಳ, ಸಜ್ಜನ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿ ಬದುಕಿದ್ದ ಆಸ್ಕರ್ ಅವರು ನೆಹರೂ ಇಂದಿರಾ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದರು ಎಂದರು.

ಸೈದ್ಧಾಂತಿಕವಾಗಿ ವಿರೋಧಿಸುವ ಬಿಜೆಪಿ ಕೂಡ ಆಸ್ಕರ್ ಅವರ ನಿಧನಕ್ಕೆ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಗೌರವ ಸೂಚಿಸಿತು. ಹಿಂದೆ, ವಿ.ಎಸ್‌.ಆಚಾರ್ಯ ಅವರು ಮೃತಪಟ್ಟಾಗ ಕಾಂಗ್ರೆಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುವಂತೆ ಆಸ್ಕರ್ ಸೂಚನೆ ನೀಡಿದ್ದರು. ರಾಜಕೀಯ ಬದಿಗಿಟ್ಟು ಆಸ್ಕರ್ ಎಲ್ಲರನ್ನೂ ಗೌರವಿಸಿ ಪ್ರೀತಿಸುತ್ತಿದ್ದರು ಎಂದು ಸ್ಮರಿಸಿದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಆಸ್ಕರ್ ಅವರಂಥ ಪ್ರಾಮಾಣಿಕತೆ, ತಾಳ್ಮೆ ಆಸ್ಕರ್ ಬದುಕಿನುದ್ದಕ್ಕೂ ಸಂಪಾದಿಸಿದ ಆಸ್ತಿ. ರಾಜಕಾರಣಿಗಳು ಮಾಡದ ಹಾಗೂ ಮಾಡಿದ ಕೆಲಸಗಳನ್ನು ಬಿಂಬಿಸಿಕೊಳ್ಳುವ ಕಾಲಘಟ್ಟದಲ್ಲಿ ಆಸ್ಕರ್ ಒಮ್ಮೆಯೂ ವೇದಿಕೆಯಲ್ಲಿ ಸಾಧನೆಗಳನ್ನು ಹೇಳಿಕೊಳ್ಳಲಿಲ್ಲ. ಪ್ರಚಾರ ಬಯಸದೆ ಎಲೆಮರೆಯ ಕಾಯಿಯಂತೆ ಪಕ್ಷಕ್ಕೆ ದುಡಿದರು. ಕಠಿಣ ಪರಿಶ್ರಮದಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದರು ಎಂದು ಸ್ಮರಿಸಿದರು.

ಒಳಿತಿಗೆ ಎಂದಿಗೂ ಮನ್ನಣೆ ಸಿಗುತ್ತದೆ ಎಂಬುದಕ್ಕೆ ಆಸ್ಕರ್ ನಿದರ್ಶನ. ಆಸ್ಕರ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯವಂತಾಗಬೇಕು ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಪಕ್ಷದ ಹೋರಾಟ, ಸಂಘಟನೆ ವಿಚಾರ ಬಂದಾಗ ಆಸ್ಕರ್ ಬೆನ್ನು ತೋರಿದವರಲ್ಲ. ಈಚೆಗೆ ಬಿಜೆಪಿ ವಿರುದ್ಧ ಜನಧನಿ ಕಾರ್ಯಕ್ರಮ ಹಮ್ಮಿಕೊಂಡಾಗ, ಡಯಾಲಿಸಿಸ್‌ ತೆರಳುವ ಮಾರ್ಗಮಧ್ಯೆಯೂ ಮಂಗಳೂರಿನಿಂದ ವರ್ಚುವಲ್ ವೇದಿಕೆಯ ಮೂಲಕ ಮಾತನಾಡಿ ಕಾರ್ಯಕ್ರಮ ಉದ್ಘಾಟಿಸಿ, ಅಭಿಯಾನಕ್ಕೆ ಶಕ್ತಿ ತುಂಬಿದ್ದರು ಎಂದು ಸ್ಮರಿಸಿದ್ದರು.

ಜಿಲ್ಲಾ ಅಧ್ಯಕ್ಷನಾದ ಬಳಿಕ ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಲು, ಬೆಳೆಸಲು, ಪುನರ್ ಸಂಘಟಿಸಲು ಆಸ್ಕರ್ ಹಲವು ಸಲಹೆ ಹಾಗೂ ಸೂಚನೆಗಳನ್ನು ಕೊಟ್ಟಿದ್ದರು. ವಲಸೆ ಕಾರ್ಮಿಕರ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು, ಅವರಿಗೊಂದು ಕಟ್ಟಡ ಕಟ್ಟಿಸಿಕೊಡಲು ನಿವೇಶನ ಗುರುತಿಸುವಂತೆ ಬಹಳ ಒತ್ತಾಯ ಮಾಡಿದ್ದರ. ಕೊನೆಗೂ ಅವರ ಆಸೆ ಈಡೇರಿಸಲಿಲ್ಲ ಎಂಬ ನೋವಿದೆ ಎಂದು ಅಶೋಕ್ ಕುಮಾರ್ ಕೊಡವೂರು ಭಾವುಕರಾದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಮುರಲೀಧರ ಉಪಾಧ್ಯಾಯ, ಜನಾರ್ದನ ತೋನ್ಸೆ, ಕುದಿ ವಸಂತ ಶೆಟ್ಟಿ, ಡಾ. ಶ್ರೀಕಾಂತ ಸಿದ್ಧಾಪುರ ಪಾ.ವಿಲಿಯಂ ಮಾರ್ಟಿಸ್, ಶ್ಯಾಮಲಾ ಭಂಡಾರಿ, ವೆರೋನಿಕಾ ಕರ್ನೇಲಿಯೋ, ಕೆದೂರು ಸದಾನಂದ ಶೆಟ್ಟಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT