ಉಡುಪಿ: ಪರಶುರಾಮ ಥೀಂ ಪಾರ್ಕ್ ಪ್ರಕರಣದ ತನಿಖೆ ನಡೆಸುತ್ತಿರುವ ಕಾರ್ಕಳ ಪೊಲೀಸರು ಬೆಂಗಳೂರಿನ ಗೋದಾಮೊಂದರಲ್ಲಿ ಮಹಜರು ನಡೆಸಿ, ಮೂರ್ತಿಯ ಭಾಗಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುದ್ದೇನ ಹಳ್ಳಿಯಲ್ಲಿರುವ ಶಿಲ್ಪಿ ಕೃಷ್ಣ ನಾಯಕ್ ಎಂಬುವವರಿಗೆ ಸೇರಿದ ಗೋದಾಮಿನಿಂದ ಶನಿವಾರ ಮೂರ್ತಿಯ ಭಾಗಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರ್ಕಳ ಸರ್ಕಲ್ ಇನ್‌ಸ್ಪೆಕ್ಟರ್ ಮಂಜಪ್ಪ ಡಿ.ಆರ್. ಅವರ ನೇತೃತ್ವದ ಪೊಲೀಸರು ಮಹಜರು ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ಶಿಲ್ಪಿ ಕೃಷ್ಣ ನಾಯ್ಕ್ ಅವರು, ಪೊಲೀಸರು ನೋಟಿಸ್ ನೀಡದೇ ತಮ್ಮ ವರ್ಕ್‌ಶಾಪ್‌ನಿಂದ ಬಲವಂತವಾಗಿ ವಿಗ್ರಹದ ಬಿಡಿಭಾಗವನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಕಾರ್ಕಳದ ಕಾಂಗ್ರೆಸ್ ನಾಯಕ ಉದಯಕುಮಾರ್ ಮುನಿಯಾಲು ಅವರೂ ಈ ವೇಳೆ ಉಪಸ್ಥಿತರಿದ್ದರು. ಪೊಲೀಸರು ವಿಚಾರಣೆ ನೆಪದಲ್ಲಿ ಮಾನಸಿಕ ದೌರ್ಜನ್ಯ ಎಸಗಿದ್ದಾರೆ. ಮೂರ್ತಿಯ ಜಪ್ತಿ ಪ್ರಕ್ರಿಯೆಯನ್ನು ಚಿತ್ರೀಕರಣ ಕೂಡ ಮಾಡಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಲೈವ್ ಬಂದು ಆರೋಪಿಸಿದ್ದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಕಾನೂನು ಪ್ರಕಾರ ನೋಟಿಸ್ ನೀಡಿ, ಮಹಜರು ನಡೆಸಲಾಗಿದೆ. ವಿಗ್ರಹಕ್ಕೆ ಸಂಬಂಧಿಸಿರುವ ವಸ್ತುಗಳನ್ನು ವಶಕ್ಕೆ ಪಡೆಯುವುದಕ್ಕೆ ಹೈಕೋರ್ಟ್ ಯಾವುದೇ ನಿರ್ಬಂಧ ಹೇರಿರಲಿಲ್ಲ ಎಂದಿದ್ದಾರೆ.
ವಶಕ್ಕೆ ಪಡೆದ ಮೂರ್ತಿಯ ಬಿಡಿ ಭಾಗಗಳನ್ನು ಭಾನುವಾರ ಕಾರ್ಕಳದಲ್ಲಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ