ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಜಾಗವಿದ್ದರೂ ಶೆಡ್ಡಿನಲ್ಲಿ ವಾಸ !

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಪರ್ಕಳದಲ್ಲಿ ಜಾಗ ಕಳೆದುಕೊಂಡ ಸಂತ್ರಸ್ತರ ಗೋಳು
Last Updated 9 ಮೇ 2021, 15:31 IST
ಅಕ್ಷರ ಗಾತ್ರ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 ‘ಎ’ ರಸ್ತೆ ವಿಸ್ತರಣೆಗೆ ಪರ್ಕಳದಲ್ಲಿ ವಾಸದ ಮನೆಯನ್ನು ಕಳೆದುಕೊಂಡ ಕುಟುಂಬವೊಂದು ಮನೆಯ ಹಿಂದಿದ್ದ ಮುರುಕು ಶೆಡ್‌ನಲ್ಲಿ ಅನಿವಾರ್ಯವಾಗಿ ವಾಸ ಮಾಡಬೇಕಾದ ದುಸ್ಥಿತಿ ಎದುರಾಗಿದೆ.

ಪರ್ಕಳದಲ್ಲಿ ಮುಖ್ಯ ರಸ್ತೆಗೆ ಅಂಟಿಕೊಂಡಂತಿದ್ದ ಜಾಗದಲ್ಲಿದ್ದ ಮನೆಯನ್ನು ಕಳೆದುಕೊಂಡಿರುವ ಶಂಕರಣ್ಣ(74), ಪ್ರಫುಲ್ಲ ಶೆಟ್ಟಿಗಾರ್ (65), ಪ್ರಮಿಳಾ ಶೆಟ್ಟಿಗಾರ್ (50) ಕುಟುಂಬ ವಾಸಕ್ಕೆ ಯೋಗ್ಯ ಜಾಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಭೂಮಿ ಮನೆ ಕಳೆದುಕೊಂಡಿದ್ದು, ಹಿಂಬದಿ ಜಾಗ ಕುಟುಂಬದವರಿಗೆ ಸೇರಿದ್ದು, ಆಸ್ತಿ ವಿಂಗಡಣೆಯಾಗಬೇಕಿದೆ. ಹಾಗಾಗಿ, ಸದ್ಯ ಶೆಡ್‌ನಲ್ಲಿಯೇ ವಾಸ ಮಾಡಬೇಕಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಮಳೆ ಬಂದರೆ ಇಡೀ ಕುಟುಂಬ ಸಂಬಂಧಿಕರ ಮನೆಗೆ ಹೋಗಿ ಉಳಿಯಬೇಕು. ಹಿರಿಯಣ್ಣ ಶಂಕರಣ್ಣ ಮನೆಯ ಎದುರಿಗಿದ್ದ ಪ್ರೆಸ್‌ನಲ್ಲಿ ಬುಕ್ ಬೈಂಡಿಂಗ್‌ ಮಾಡುವ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ರಸ್ತೆ ವಿಸ್ತರಣೆಯಿಂದ ಪ್ರೆಸ್‌ ಕೂಡ ಸ್ಥಳಾಂತರವಾಗಿದ್ದು ಉದ್ಯೋಗ ಕಳೆದುಕೊಂಡಿದ್ದಾರೆ.

ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ಭೂಮಿ ಪರಿಹಾರ ಕೂಡ ಬಿಡುಗಡೆಯಾಗಿಲ್ಲ. ಕೊರೊನಾ ಸಂಕಷ್ಟದ ಸಂದರ್ಭ ಜೀವನ ಸಾಗಿಸುವುದು ಹೇಗೆ ಎಂದು ಕುಟುಂಬ ಪ್ರಶ್ನಿಸಿದೆ. ಅಧಿಕಾರಿಗಳಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಕಾಮಗಾರಿಗೆ ತಡೆಯಾಜ್ಞೆ ಇದೆ ಎಂದು ಹೇಳುತ್ತಾರೆ. ತರಾತುರಿಯಲ್ಲಿ ಮನೆ ನೆಲಸಮ ಮಾಡಿದ ಜಿಲ್ಲಾಡಳಿತ ಕೈಕಟ್ಟಿ ಕುಳಿತಿರುವುದು ಸರಿಯಲ್ಲ ಎಂದು ಪ್ರಪುಲ್ಲಾ ಶೆಟ್ಟಿಗಾರ್ ಕಣ್ಣೀರು ಹಾಕುತ್ತಾರೆ.

ಸ್ವಂತ ಜಾಗದಲ್ಲಿ ಮನೆಕಟ್ಟಿಕೊಳ್ಳಲು ನಗರಸಭೆಯ ಅನುಮತಿ ಪ್ರಾಧಿಕಾರದ ಅನುಮತಿ ಅಗತ್ಯವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವುದರಿಂದ ಸಾಧ್ಯವಾಗುತ್ತಿಲ್ಲ. ಭೂಮಿ ಪರಿಹಾರ ನೀಡಿದರೆ ಚಿಕ್ಕ ಸೂರನ್ನಾದರೂ ಕಟ್ಟಿಕೊಳ್ಳುತ್ತೇವೆ ಎಂದು ಅಂಗಲಾಚುತ್ತಿದೆ ಕುಟುಂಬ. ಕೂಡಲೇ ಜಿಲ್ಲಾಡಳಿತ ನೊಂದ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್‌ರಾಜ್ ಸರಳೆಬೆಟ್ಟು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT