ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವಧಿ ಮುಗಿದವರು ಸಂದೇಶ ಬರದಿದ್ದರೂ ಲಸಿಕೆ ಹಾಕಿಸಿಕೊಳ್ಳಿ’

ಕೋವಿಡ್ ಲಸಿಕೆ ಕುರಿತು ಸಾರ್ವಜನಿಕರ ಸಂದೇಹ ನಿವಾರಿಸಿದ ಫೋನ್ ಇನ್ ಕಾರ್ಯಕ್ರಮ
Last Updated 16 ಸೆಪ್ಟೆಂಬರ್ 2021, 16:59 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್ ಲಸಿಕೆ ಪಡೆಯುವ ಬಗ್ಗೆ ಸಾರ್ವಜನಿಕರಲ್ಲಿರುವ ಗೊಂದಲಗಳನ್ನು ನಿವಾರಿಸಲು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಫೋನ್ ಇನ್ ಕಾರ್ಯಕ್ರಮ ನಡೆಸಿದರು.

ಬೆಳಿಗ್ಗೆ 10 ರಿಂದ 11ರವರೆಗೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ 28 ಮಂದಿ ಲಸಿಕೆ ಪಡೆಯುವ ಬಗ್ಗೆ ಇದ್ದ ಗೊಂದಲಗಳನ್ನು ಬಗೆಹರಿಸಿಕೊಂಡರು.

‘ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಸ್ವಚ್ಚತೆ ಕಾಪಾಡಬೇಕು ಎಂಬ ನಿಯಮವಿದೆ. ಆದರೆ, ಹೋಟೆಲ್‌ಗಳಲ್ಲಿ ಊಟ ಮಾಡುವವರು ಪ್ಲೇಟ್‌ಗಳಲ್ಲಿ ಕೈತೊಳೆಯುತ್ತಾರೆ. ಇಂತಹ ಕ್ರಮವನ್ನು ತಪ್ಪಿಸಬೇಕು ಎಂದು ಮಣಿಪಾಲದ ಮಾಧವ ಪೈ ಕರೆ ಮಾಡಿ ತಿಳಿಸಿದರು.

ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಯಮಗಳು ಪಾಲನೆಯಾಗುತ್ತಿವೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಮೊದಲನೇ ಡೋಸ್ ಲಸಿಕೆ ಹಾಕಿಸಿಕೊಂಡಿದ್ದು, 2ನೇ ಡೋಸ್ ಪಡೆಯಲು ಮೊಬೈಲ್‌ಗೆ ಸಂದೇಶ ಬಂದಿಲ್ಲ. ಏನು ಮಾಡಬೇಕು’ ಎಂದು ಸಾವಿತ್ರಿ ಎಂಬುವರು ದೂರು ಹೇಳಿಕೊಂಡರು. ಸಂದೇಶ ಬಾರದಿದ್ದರೂ, ಲಸಿಕೆ ಪಡೆದು ನಿಗದಿತ ಅವಧಿ ಮುಗಿದಿದ್ದರೆ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವಂತೆ ಡಿಸಿ ಸಲಹೆ ನೀಡಿದರು.

‘ಮೊದಲ ಡೋಸ್ ಪಡೆದು 80 ದಿನಗಳು ಆಗಿದ್ದು, ಮಹಾಮೇಳದಲ್ಲಿ ಲಸಿಕೆ ಪಡೆಯಬಹುದೇ’ ಎಂಬ ಮಂಗಳೂರಿನ ರಾಜೇಶ್ ಪ್ರಶ್ನೆಗೆ ಉತ್ತರಿಸಿದ ಡಿಸಿ ನಿಗದಿತ ಅವಧಿಗೆ ಮುಂಚೆ ಲಸಿಕೆ ಪಡೆಯಲು ಸಾದ್ಯವಿಲ್ಲ. ಕೋವಿಡ್ ಆ್ಯಪ್‌ನಲ್ಲಿ ಕೂಡ ಮಾಹಿತಿ ಬರುವುದಿಲ್ಲ. 84 ದಿನಗಳ ನಂತರವೇ ಲಸಿಕೆ ಪಡೆಯಿರಿ ಎಂದರು.

‘ಟಿಬಿ ಕಾಯಿಲೆಯಿಂದ ಗುಣಮುಖನಾಗಿದ್ದು, ಲಸಿಕೆ ಪಡೆಯಬಹುದೇ’ ಎಂಬ ವ್ಯಕ್ತಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಲಸಿಕೆ ಪಡೆಯಲು ತೊಂದರೆಯಿಲ್ಲ. ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪಡೆಯುವಂತೆ ತಿಳಿಸಿದರು.

‘ಎರಡೂ ಡೋಸ್ ಲಸಿಕೆ ಪಡೆದಿದ್ದು, ಪ್ರಮಾಣ ಪತ್ರವೂ ಸಿಕ್ಕಿದೆ. ಆದರೂ ಲಸಿಕೆ ಪಡಯುವಂತೆ ಸಂದೇಶ ಬರುತ್ತಿದೆ’ ಎಂಬ ಚಿಟ್ಪಾಡಿಯ ಪವನ್ ಕುಮಾರ್ ಪ್ರಶ್ನೆಗೆ, ಎರಡೂ ಡೋಸ್ ಲಸಿಕೆ ಪಡೆದಿದ್ದರೆ ಮತ್ತೆ ಪಡೆಯುವುದು ಬೇಡ. ಸಂದೇಶವನ್ನು ನಿರ್ಲಕ್ಷಿಸಿ ಎಂದರು.

ಸಿದ್ದಾಪುರದ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯಾ ಕರೆಮಾಡಿ, ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿ 3 ದಿನವಾಗಿದ್ದು ಇನ್ನೂ ವರದಿ ನೀಡಿಲ್ಲ. ಪರಿಣಾಮ ಕಾಲೇಜಿಗೆ ತೆರಳಲು ತೊಂದರೆಯಾಗಿದೆ ಎಂದರು. ಕೂಡಲೇ ಆರ್‌ಟಿಪಿಸಿಆರ್ ಪರೀಕ್ಷಾ ವರದಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ಥಳದಲ್ಲಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಲಸಿಕಾಕರಣ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ ಎಂದು ಸಾಸ್ತಾನದ ರಾಘವೇಂದ್ರ ಅಭಿನಂದನೆ ಸಲ್ಲಿಸಿದರು.

‘ಮಗನಿಗೆ ಪೆನ್ಸಿಲಿನ್ ಸೇರಿದಂತೆ ಯಾವುದೇ ಚುಚ್ಚುಮದ್ದು ಪಡೆದರೂ ಇನ್‌ಫೆಕ್ಷನ್ ಆಗುತ್ತದೆ. ಇಂತಹ ಸ್ಥಿತಿಯಲ್ಲಿ ಕೋವಿಡ್ ಲಸಿಕೆ ಪಡೆಯಬಹುದೇ ಎಂದು ಶಾಜಿಯಾ ಪ್ರಶ್ನಿಸಿದರೆ, ಹೃದ್ರೋಗ, ಮಧುಮೇಹ, ರಕ್ತದೊತ್ತಡ ಇದ್ದವರು ಲಸಿಕೆ ಪಡೆಯಬಹುದೇ ಎಂದು ಶೋಭಿತಾ ಕೇಳಿದರು. ಇದಕ್ಕೆ ಉತ್ತರಿಸಿದ ಡಾ.ಅಶ್ವಿನ್‌ ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆಯಬಹುದು. ಜ್ವರ ಇದ್ದರೆ ಗುಣಮುಖರಾದ ಬಳಿಕ ಹಾಗೂ ಕೋವಿಡ್ ಪಾಸಿಟಿವ್ ಬಂದವರು 3 ತಿಂಗಳ ನಂತರ ಲಸಿಕೆ ಪಡೆಯಬಹುದು ಎಂದು ಮಾಹಿತಿ ನೀಡಿದರು.

ಸೆ.17 ರಂದು ಲಸಿಕಾ ಮಹಾಮೇಳ ನಡೆಯುತ್ತಿದ್ದು, ಸಮೀಪದ ಸ್ಥಳ, ಲಸಿಕೆ ಲಭ್ಯತೆಯ ವಿವರದ ಬಗ್ಗೆ 9663957222 ಕರೆ ಮಾಡಿ ಮಾಹಿತಿ ಪಡೆಯಬಹುದು. ಬೆಳಿಗ್ಗೆ 9ರಿಂದ ಸಂಜೆ 4ರವೆರೆಗೆ ಜಿಲ್ಲೆಯಾದ್ಯಂತ 300ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ 3 ಗ್ರಾಮ ಪಂಚಾಯಿತಿಗಳು ಮೊದಲ ಡೋಸ್‌ನಲ್ಲಿ ಶೇ 100ರಷ್ಟು ಸಾಧನೆ ಮಾಡಿವೆ. ಮಹಾಮೇಳದ ಮೂಲಕ 20ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಸಾಧನೆ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವೈ. ನವೀನ್ ಭಟ್ ಹೇಳಿದರು.

ಡಿಎಚ್‌ಒ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಉಡುಪಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಡಾ.ಪ್ರೇಮಾನಂದ್, ಎನ್‌ಐಸಿ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT