ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪ್ಲಾಸ್ಮಾ ದಾನಕ್ಕೆ ಪೊಲೀಸ್ ಇಲಾಖೆ ಸಿದ್ಧ

ಮಣಿಪಾಲದ ಕೆಎಂಸಿಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಸಿದ್ಧತೆ
Last Updated 16 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಉಡುಪಿ: ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆ, ಇದೀಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಕೋವಿಡ್‌ ಸೋಂಕಿತರ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಲು ಸಿದ್ಧವಾಗಿದೆ. ಸೋಂಕು ತಗುಲಿ ಗುಣಮುಖರಾದ ಜಿಲ್ಲೆಯ 8 ರಿಂದ 10 ಪೊಲೀಸರು ಪ್ಲಾಸ್ಮಾ ಚಿಕಿ‌ತ್ಸೆಗೆ ಅಗತ್ಯವಿರುವ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಸಿದ್ಧತೆಗಳು ನಡೆದಿದ್ದು, ರಕ್ತದಿಂದ ಪ್ಲಾಸ್ಮಾ ಕಣಗಳ ಬೇರ್ಪಡಿವಿಕೆ ಪ್ರಕ್ರಿಯೆಗೆ ಪರವಾನಗಿ ಕೋರಿ ಆಸ್ಪತ್ರೆಯು ಡಿಸಿಜಿಐಗೆ ಅರ್ಜಿ ಸಲ್ಲಿಸಿದೆ. ಅನುಮತಿ ಸಿಕ್ಕ ಬಳಿಕ ಪ್ಲಾಸ್ಮಾ ಚಿಕಿತ್ಸೆ ಆರಂಭವಾಗಲಿದ್ದು, ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ಜೀವ ಉಳಿಸಲು ಸಹಕಾರಿಯಾಗಲಿದೆ.

ಏನಿದು ಪ್ಲಾಸ್ಮಾ:

ಸೋಂಕಿನಿಂದ ಗುಣಮುಖರಾದವರ ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು (ಆ್ಯಂಟಿಬಾಡಿ) ನೈಸರ್ಗಿಕವಾಗಿ ಸೃಷ್ಟಿಯಾಗಿರುತ್ತವೆ. ಅಂಥವರ ರಕ್ತದಲ್ಲಿರುವ ಪ್ಲಾಸ್ಮಾ ಕಣಗಳನ್ನು ತೆಗೆದು ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ದೇಹಕ್ಕೆ ನೀಡಿದರೆ, ವೈರಸ್‌ ನಾಶವಾಗಿ, ರೋಗಿಗಳು ಗುಣಮುಖರಾಗಬಹುದು. ಇದಕ್ಕೆ ಕನ್ವಲ್‌ಸೆಂಟ್ ಪ್ಲಾಸ್ಮಾ ಥೆರಫಿ ಎನ್ನಲಾಗುತ್ತದೆ ಎನ್ನುತ್ತಾರೆ ಡಾ.ಟಿ.ಎಂ.ಪೈ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಶಶಿಕಿರಣ್ ಉಮಾಕಾಂತ್.

ಪ್ಲಾಸ್ಮಾ ಚಿಕಿತ್ಸೆಗೆಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರನ್ನು ಸಂಪರ್ಕಿಸಿ ಪ್ಲಾಸ್ಮಾ ದಾನಿಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಇದರ ಬೆನ್ನಲ್ಲೇ ಪೊಲೀಸರು ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದಾನ ಮಾಡಲು ಸಿದ್ಧರಾಗಿರುವುದಾಗಿ ಎಸ್‌ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ ಎಂದರುಡಾ.ಶಶಿಕಿರಣ್ ಉಮಾಕಾಂತ್.

ಚಿಕಿತ್ಸೆ ಹೇಗೆ:

ಪ್ಲಾಸ್ಮಾ ಚಿಕಿತ್ಸೆ ಸಂಕೀರ್ಣವಾಗಿದ್ದು, ಕೋವಿಡ್‌ನಿಂದ ಗುಣಮುಖರಾದವರ ರಕ್ತವನ್ನು ಪಡೆದು ನೇರವಾಗಿ ಸೋಂಕಿತರಿಗೆ ನೀಡಲು ಸಾಧ್ಯವಿಲ್ಲ. ರಕ್ತದಲ್ಲಿರುವ ಪ್ಲಾಸ್ಮಾ ಕಣಗಳನ್ನು ಬೇರ್ಪಡಿಸಬೇಕು. ದಾನಿ ಹಾಗೂ ದಾನ ಪಡೆಯುವ ವ್ಯಕ್ತಿಯ ರಕ್ತದ ಗುಂಪು ಒಂದೇ ಆಗಿರಬೇಕು.

ಯಾರು ಪ್ಲಾಸ್ಮಾ ನೀಡಬಹುದು:

ಎಲ್ಲರೂ ಪ್ಲಾಸ್ಮಾ ಕೊಡಲು ಬರುವುದಿಲ್ಲ. ಸೋಂಕು ತಗುಲಿ ಗುಣಮುಖರಾದವರು ಮಾತ್ರ ನೀಡಬಹುದು. ಗುಣಮುಖರಾದ 2 ವಾರಗಳ ನಂತರ, ಮೂರು ತಿಂಗಳ ಒಳಗೆ ಪ್ಲಾಸ್ಮಾ ಕೊಡಬಹುದು. ರಕ್ತ ಪರೀಕ್ಷೆ ನಡೆಸಿ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಲಭ್ಯವಿದ್ದರೆ ಮಾತ್ರ ಪ್ಲಾಸ್ಮಾ ಪಡೆಯಲಾಗುವುದು. ಸಾಮಾನ್ಯವಾಗಿ ಗುಣಮುಖರಾದವರ ದೇಹದಲ್ಲಿ 3 ತಿಂಗಳವರೆಗೆ ಪ್ರತಿಕಾಯಗಳು ಇರುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ ಎನ್ನುತ್ತಾರೆ ಡಾ.ಶಶಿಕಿರಣ್.

ಯಾರು ಕೊಡುವಂತಿಲ್ಲ:

60 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಬಾಣಂತಿಯರು, ಮಕ್ಕಳು, ಮಧುಮೇಹ, ರಕ್ತದೊತ್ತಡ, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಹಾಗೂ ಇತರೆ ಗಂಭೀರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಪ್ಲಾಸ್ಮಾ ಕೊಡುವಂತಿಲ್ಲ.

ಯಾರಿಗೆ ಚಿಕಿತ್ಸೆ ಅವಶ್ಯಕತೆ ಇದೆ:

ಎಲ್ಲ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ಅವಶ್ಯಕತೆ ಇಲ್ಲ. ಶೇ 90ರಷ್ಟು ಸೋಂಕಿತರ ದೇಹದಲ್ಲಿ ನೈಸರ್ಗಿಕವಾಗಿ ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳು ಸೃಷ್ಟಿಯಾಗಿರುತ್ತವೆ. ಉಳಿದ ಶೇ 10ರಷ್ಟು ಜನರಿಗೆ ಅಂದರೆ, ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಮಾತ್ರ ಪ್ಲಾಸ್ಮಾ ಚಿಕಿತ್ಸೆ ಅಗತ್ಯವಿದೆ.

ಪರವಾನಗಿಗೆ ಅರ್ಜಿ: ಕೆಎಂಸಿ

ಮಣಿಪಾಲದ ಕೆಎಂಸಿ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದಿಂದ ಪ್ಲಾಸ್ಮಾ ಕಣವನ್ನು ಬೇರ್ಪಡಿಸುವಂತಹ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಲಭ್ಯವಿದೆ. ನುರಿತ ಸಿಬ್ಬಂದಿಯೂ ಇದ್ದಾರೆ. ಪ್ಲಾಸ್ಮಾ ಚಿಕಿತ್ಸೆಗೆ ಪರವಾನಗಿ ಪಡೆಯಲು ಡಿಸಿಜಿಐಗೆ ಅರ್ಜಿ ಸಲ್ಲಿಸಲಾಗಿದ್ದು, ವಾರದೊಳಗೆ ಸಿಗುವ ಸಾಧ್ಯತೆಗಳಿವೆ. ಸಿಕ್ಕರೆ ಪ್ಲಾಸ್ಮಾ ಚಿಕಿತ್ಸೆ ಆರಂಭವಾಗಲಿದ್ದು, ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ಜೀವ ಉಳಿಸಲು ನೆರವಾಗಲಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ತಿಳಿಸಿದರು.

‘ಜೀವ ಉಳಿಸುವುದು ಪೊಲೀಸರ ಕರ್ತವ್ಯ’

ಕೋವಿಡ್ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಹಲವು ಪೊಲೀಸರಿಗೆ ಸೋಂಕು ತಗುಲಿತ್ತು. ಅದೃಷ್ಟವಶಾತ್ ಎಲ್ಲರೂ ಗುಣಮುಖರಾಗಿದ್ದು, ಇದೀಗ ಪ್ಲಾಸ್ಮಾ ನೀಡಲು ಮುಂದೆ ಬಂದಿದ್ದಾರೆ. ಪ್ಲಾಸ್ಮಾ ಅಗತ್ಯಬಿದ್ದಾಗ ಸಂಪರ್ಕಿಸುವಂತೆ ವೈದ್ಯರಿಗೆ ತಿಳಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲ; ಸಾ‌ರ್ವಜನಿಕ ಜೀವ ಉಳಿಸುವುದು ಇಲಾಖೆಯ ಕರ್ತವ್ಯದ ಒಂದು ಭಾಗ ಎಂದು ಎಸ್‌ಪಿ ವಿಷ್ಣುವರ್ಧನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT