ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸರ್ವಜ್ಞ ಪೀಠಾರೋಹಣ ಮಾಡಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

Published 18 ಜನವರಿ 2024, 6:51 IST
Last Updated 18 ಜನವರಿ 2024, 6:51 IST
ಅಕ್ಷರ ಗಾತ್ರ

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಗುರುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಚತುರ್ಥ ಪರ್ಯಾಯ ಆರಂಭಿಸಿದರು. ಈ ಮೂಲಕ ಪುತ್ತಿಗೆ ಮಠದ ಪರ್ಯಾಯಕ್ಕೆ ಅಧಿಕೃತ ಚಾಲನೆ ದೊರೆಯಿತು.

ಪರ್ಯಾಯ ಪೂಜಾಧಿಕಾರ ಹಸ್ತಾಂತರ ಮಾಡಬೇಕಿದ್ದ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರ ಅನುಪಸ್ಥಿತಿಯಲ್ಲಿ ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ಸರ್ವಜ್ಞ ಪೀಠಾರೋಹಣದ ವಿಧಿ ವಿಧಾನಗಳನ್ನು ಪೂರೈಸಿದರು. ಅದ್ಧೂರಿ ಪರ್ಯಾಯ ಮೆರವಣಿಗೆಯ ಮೂಲಕ ಕೃಷ್ಣಮಠ ಪ್ರವೇಶಿಸಿದ ಪುತ್ತಿಗೆ ಶ್ರೀಗಳಿಗೆ ಸ್ವಾಗತ ಕೋರಿ ಶತಮಾನಗಳಷ್ಟು ಪುರಾತನವಾದ ಮಧ್ವಾಚಾರ್ಯರಿಂದ ಕೊಡಮಾಡಿದ ಅಕ್ಷಯ ಪಾತ್ರೆ ಹಾಗೂ ಬೆಳ್ಳಿಯ ಸಟ್ಟುಗವನ್ನು ನೀಡಿದರು.

ಬಳಿಕ ಪುತ್ತಿಗೆ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕೂರಿಸಿ ಪರ್ಯಾಯಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು. ಈ ಸಂದರ್ಭ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಜತೆಗಿದ್ದರು.

ಭವ್ಯ ಪರ್ಯಾಯ ಮೆರವಣಿಗೆ:

ಸರ್ವಜ್ಞ ಪೀಠಾರೋಹಣಕ್ಕೂ ಮುನ್ನ ನಗರದಲ್ಲಿ ಭವ್ಯ ಪರ್ಯಾಯ ಮೆರವಣಿಗೆ ನಡೆಯಿತು. ತಡರಾತ್ರಿ 1.30ಕ್ಕೆ ಕಾಪುವಿನ ದಂಡ ತೀರ್ಥದಲ್ಲಿ ಪವಿತ್ರ ಸ್ಥಾನ ಪೂರೈಸಿ ಉಡುಪಿಯ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಪ್ರವೇಶಿಸಿದ ಪುತ್ತಿಗೆ ಮಠದ ಉಭಯ ಯತಿಗಳಿಗೆ ಭಕ್ತರು ಅದ್ಧೂರಿ ಸ್ವಾಗತ ಕೋರಿದರು. ಕೊಂಬು ಕಹಳೆ, ಚಂಡೆ ಹಾಗೂ ಸಿಡಿಮದ್ದುಗಳ ಸದ್ದು ಮುಗಿಲು ಮುಟ್ಟಿತು.

ಸಂಪ್ರದಾಯದಂತೆ ನಗರದ ಜೋಡುಕಟ್ಟೆಯ ಮಂದಿರ ಪ್ರವೇಶಿಸಿದ ಉಭಯ ಯತಿಗಳು ದೇವರಿಗೆ ಪೂಜೆ ಸಲ್ಲಿಸಿ ಅಲಂಕೃತ ಮೇನೆಯಲ್ಲಿ (ಪಲ್ಲಕ್ಕಿ) ಆಸೀನರಾಗುತ್ತಿದ್ದಂತೆ ಪರ್ಯಾಯ ಮೆರವಣಿಗೆಗೆ ಚಾಳನೆ ದೊರೆಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸಹಿತ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದು ಪರ್ಯಾಯ ವೈಭವವನ್ನು ಕಣ್ತುಂಬಿಕೊಂಡರು.

ಬಿರುದಾವಳಿಗಳೊಂದಿಗೆ ಶುರುವಾದ ಮೆರವಣಿಗೆಯಲ್ಲಿ ತಟ್ಟಿರಾಯ, ಕೀಲು ಕುದುರೆ, ವೇಷಧಾರಿಗಳು, ಪೌರಾಣಿಕ ಪಾತ್ರಧಾರಿಗಳು ರಂಜಿಸುತ್ತಾ ಸಾಗಿದರು. ವ್ಯಾಯಾಮ ಶಾಲೆಯ ಪಟುಗಳ ಅಗ್ನಿ ಸಾಹಸ ಮೈ ಜುಮ್ಮೆನಿಸುವಂತಿತ್ತು. ಕರಾವಳಿಯ ಸಂಸ್ಕೃತಿ, ಜೀವನ ಪದ್ಧತಿ ಸಾರುವ ಸ್ತಬ್ಧಚಿತ್ರ ಹಾಗೂ ಕಂಬಳದ ಕೋಣಗಳು ಎಲ್ಲರ ಗಮನ ಸೆಳೆಯಿತು.

ಕಂಗೀಲು ವೃತ್ಯ, ಬುಡಕಟ್ಟು ಜನರ ಕೊಳಲು ವಾದನ, ವೀರಗಾಸೆ, ಮರಗಾಲು ಕುಣಿತ, ಪಟ ಕುಣಿತ, ಡೋಲು, ನಾಸಿಕ್ ಬ್ಯಾಂಡ್, ಡೊಳ್ಳು, ಭಜನಾ ತಂಡಗಳು, ಹುಲಿವೇಷ ಧಾರಿಗಳ ಕುಣಿತದ ಅಬ್ಬರ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿತು. ದೈತ್ಯ ವೇಷಧಾರಿಗಳು ನೆರೆದಿದ್ದವರನ್ನು ರಂಜಿಸಿದರು.

ಉಯ್ಯಾಲೆಯಲ್ಲಿ ವಿರಾಜಮಾನವಾಗಿದ್ದ ಕಟಿಲು ದುರ್ಗಾಪರಮೇಶ್ವರಿ, ಶಾರದೆ, ಆಂಜನೇಯ, ರಾಮಮಂದಿರ, ಬಲಿ ಚಕ್ರವರ್ತಿ ವಾಮನ, ಗರುಡನ ಮೇಲೆ ಕುಳಿತ ಕೃಷ್ಠ, ಮಧ್ವಾಚಾರ್ಯರು, ವಾದಿರಾಜ ಆಚಾರ್ಯ, ಕನಕದಾಸ, ಕೃಷ್ಣ ಕುಚೇಲ, ಕಡೆಗೋಲು ಕೃಷ್ಣ, ಮಹಾಭಾರತ, ದ್ರೌಪತಿ ವಸ್ತ್ರಾಪಹರಣ, ಕಿರುಬೆರಳಲ್ಲಿ ಗೋವರ್ಧನ ಗಿರಿ ಬೆಟ್ಟ ಎತ್ತಿಹಿಡಿದ ಕೃಷ್ಣ ಸೇರಿದಂತೆ ಕೃಷ್ಣನ ಅವತಾರಗಳನ್ನು ಅನಾವರಣಗೊಳಿಸುವ ಧಾರ್ಮಿಕ ಹಿನ್ನೆಲೆಯ ಸ್ತಬ್ಧಚಿತ್ರಗಳು ಮೆರವಣಿಗೆಯ ಅಂದ ಹೆಚ್ಚಿಸಿದವು.

ಮೆರವಣಿಗೆಯಲ್ಲಿ ಭಗವದ್ಗೀತೆ, ರಾಯಾಮಯಣ ‘ದರ್ಶನ’:

‘ವಿಶ್ವಗೀತಾ ಪರ್ಯಾಯ’ಕ್ಕೆ ಪೂರಕವಾಗಿ ಪರ್ಯಾಯ ಮೆರವಣಿಗೆಯಲ್ಲಿ ಭಗವದ್ಗೀತೆ ಹಾಗೂ ರಾಯಾಮಯಣಕ್ಕೆ ಸಂಬಂಧಿಸಿದ ಸ್ತಬ್ದಚಿತ್ರಗಳು ಎಲ್ಲರ ಗಮನ ಸಳೆದವು. ಭಗವದ್ಗೀತೆಯ ಸಾಲುಗಳು ಹಾಗೂ ರಾಮಾಯಣ ಶ್ಲೋಕಗಳನ್ನು ಒಳಗೊಂಡ ಭಿತ್ತಿಚಿತ್ರಗಳು ಸಾರ್ವಜನಿಕರಿಗೆ ಗೀತೆ ಹಾಗೂ ರಾಮಾಯಣ ‘ದರ್ಶನ’ ಮಾಡಿಸಿದವು.

ನಗರಸಭೆಯಿಂದ ಹಸಿ, ಒಣಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಜಾಗೃತಿ, ಅರಣ್ಯ ಇಲಾಖೆಯಿಂದ ಅರಣ್ಯ ಹಾಗೂ ವನ್ಯಜೀವಿಗಳ ಉಳಿಸುವ ಬಗ್ಗೆ ಜಾಗೃತಿ, ನರೇಗಾ ಯೋಜನೆಯ ಮಹತ್ವ, ಕೆರೆಗಳ ನಿರ್ಮಾಣದ ಅಗತ್ಯತೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಂದ ಆಕರ್ಷಕ ಸ್ತಬ್ಧಚಿತ್ರಗಳನ್ನು ನಿರ್ಮಾಣ ಮಾಡಲಾಗಿತ್ತು.

ಮೆರವಣಿಗೆಯ ಕೊನೆಯಲ್ಲಿ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಹಿರಿಯ ಯತಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಾಗಿದರು. ಯತಿಗಳ ಮುಂದೆ ಚಿನ್ನದ ಪಲ್ಲಕ್ಕಿಯಲ್ಲಿ ಮಠದ ಆರಾಧ್ಯದೈವ ವಿಠಲನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.

ಮೆರವಣಿಗೆ ರಥಬೀದಿ ತಲುಪುತ್ತಿದ್ದಂತೆ ಉಭಯ ಯತಿಗಳು ಮೇನೆಯಿಂದಿಳಿದು ಕನಕನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿದರು. ಬಳಿಕ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕೃಷ್ಣಮಠ ಪ್ರವೇಶಿಸಿ ಗರ್ಭಗುಡಿಯ ಬಳಿ ನವರತ್ನ ಕಿಂಡಿಯಲ್ಲಿ ಕೃಷ್ಣನ ದರ್ಶನ ಮಾಡಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಪರ್ಯಾಯ ವಿಧಿವಿಧಾನಗಳನ್ನು ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT