ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಸ್ಕಾರ, ಇದು ಆಕಾಶವಾಣಿ ಮಂಗಳೂರು...

ದಶಕಗಳ ಕಾಲ ಮೌನಕ್ಕೆ ಜಾರಿದ್ದ ರೇಡಿಯೊ ಟವರ್‌ಗೆ ಮರುಜೀವ: ಗಾಂಧಿ ಜಯಂತಿಯಂದು ಪ್ರಸಾರಕ್ಕೆ ಚಾಲನೆ
Last Updated 2 ಅಕ್ಟೋಬರ್ 2020, 12:07 IST
ಅಕ್ಷರ ಗಾತ್ರ

ಉಡುಪಿ: ಗಾಂಧೀಜಿ ನಡೆದಾಡಿದ ಐತಿಹಾಸಿಕ ಅಜ್ಜರಕಾಡು ಭುಜಂಗ ಉದ್ಯಾನದಲ್ಲಿ ದಶಕಗಳಿಂದ ಸ್ತಬ್ಧವಾಗಿದ್ದ ರೇಡಿಯೊ ಟವರ್‌ ಮತ್ತೆ ಸದ್ದು ಮಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ, ಉಡುಪಿಯ ಜನರ ಜತೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದ ರೇಡಿಯೊ ಟವರ್‌ ಪ್ರಸಾರ ಆರಂಭಿಸಿದೆ. ಗಾಂಧಿ ಜಯಂತಿ ದಿನವಾದ ಶುಕ್ರವಾರ ಶಾಸಕ ರಘುಪತಿ ಭಟ್‌ ರೇಡಿಯೊ ಟವರ್‌ ಪ್ರಸಾರಕ್ಕೆ ಚಾಲನೆ ನೀಡಿದರು.

ರೇಡಿಯೋ ಟವರ್‌ ಕುರಿತು...

ಅಜ್ಜರಕಾಡು ಉದ್ಯಾನದಲ್ಲಿ ವಿಶಾಲವಾದ ಕಲ್ಲುಬಂಡೆಯ ಮೇಲೆ 1938ರಲ್ಲಿ ರೇಡಿಯೋ ಟವರ್ ಸ್ಥಾಪಿಸಲಾಗಿತ್ತು. ಉದ್ಯಮಿ ಡಾ.ಯು.ಎಲ್‌. ನಾರಾಯಣ ರಾವ್‌ ತಮ್ಮ ತಂದೆ ಯು.ಭುಜಂಗ ರಾವ್‌ ಸ್ಮರಣಾರ್ಥ ‘ಭುಜಂಗ ನಿಲಯ’ ಹೆಸರಿನಲ್ಲಿ ಟವರ್ ಸ್ಥಾಪಿಸಿದರು ಎಂಬ ಮಾಹಿತಿ ಅಲ್ಲಿನ ಫಲಕದಲ್ಲಿ ಅಚ್ಚಾಗಿದೆ.

ಜಿಲ್ಲೆಯ ಅಸ್ಮಿತೆ ಎಂದೇ ಕರೆಸಿಕೊಳ್ಳುತ್ತಿದ್ದ ಈ ರೇಡಿಯೋ ಟವರ್‌ ಅಂದು ಪ್ರಪಂಚದ ಹಾಗುಹೋಗುಗಳನ್ನು ನಿತ್ಯ ಜನ ಸಾಮಾನ್ಯರಿಗೆ ತಲುಪಿಸುವ ಪ್ರಮುಖ ಮಾಧ್ಯಮವಾಗಿತ್ತು. ಅಂದು ರೇಡಿಯೊ ಕೊಳ್ಳಲು ಶಕ್ತಿಯಿಲ್ಲದವರು ಟವರ್ ಬಳಿ ಬಂದು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತಿದ್ದರು. ಕ್ರೀಡೆ, ಕೃಷಿ, ಮನೋರಂಜನೆ, ಶಿಕ್ಷಣ, ರಾಜಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕೇಳುತ್ತಿದ್ದರು.

ರಾಜಕೀಯ ಚರ್ಚೆ, ಹೋರಾಟ, ಹರಟೆ, ಸುಖಃ, ದುಃಖ, ವಿಚಾರ ವಿನಿಮಯಗಳ ಹಂಚಿಕೆಗೆ ವೇದಿಕೆಯಾಗಿದ್ದ ರೇಡಿಯೋ ಟವರ್, ನಿರ್ವಹಣೆ ಕೊರತೆಯಿಂದಾಗಿ ಪ್ರಸಾರ ಸ್ಥಗಿತಗೊಳಿಸಿ ಮೌನಕ್ಕೆ ಜಾರಿತ್ತು. ಟಿವಿ ಮಾಧ್ಯಮಗಳ ಭರಾಟೆಯ ನಡುವೆ ಅದರ ದುರಸ್ತಿಯ ಬಗ್ಗೆ ಆಡಳಿತ ವ್ಯವಸ್ಥೆಯೂ ಅಸ್ಥೆ ವಹಿಸಲಿಲ್ಲ. ಆಗಾಗ, ಹಿರಿಯ ನಾಗರಿಕರು ಮನವಿ ಸಲ್ಲಿಸಿ ಒತ್ತಾಯ ಮಾಡಿದರೂ ಸ್ಪಂದನ ಸಿಕ್ಕಿರಲಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರು.

ಈಗ, ಮತ್ತೆ ರೇಡಿಯೊ ಟವರ್ ಸದ್ದು ಮಾಡುತ್ತಿದೆ. ಪ್ರತಿದಿನ ಸಂಜೆ 5.30 ರಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರು ಬಂಡೆಯ ಮೇಲೆ ಕುಳಿತು ರೇಡಿಯೊ ಆಲಿಸಬಹುದು. ಆಕಾಶವಾಣಿ ಮಂಗಳೂರಿನ ಕಾರ್ಯಕ್ರಮಗಳನ್ನು ಕೇಳಿ ಆನಂದಿಸಬಹುದು.

ಟವರ್‌ನ ಮೂಲಸ್ವರೂಪದಲ್ಲಿ ಬದಲಾವಣೆ ಮಾಡದೆ, ಸುತ್ತಲೂ ಹೊಸ ಮೈಕ್‌ಗಳನ್ನು ಅಳವಡಿಸಲಾಗಿದೆ. ಕೇಳುಗರಿಗೆ ಹೊಸ ಅನುಭವ ನೀಡುವಂತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಹಿಂದಿನಂತೆಯೇ ಬೆಳಿಗ್ಗೆ 8, ಮಧ್ಯಾಹ್ನ 12.30 ಹಾಗೂ ರಾತ್ರಿ 8 ಗಂಟೆಗೆ ಟವರ್‌ನಿಂದ ಅಲಾರಂ ಮೊಳಗಲಿದೆ ಎಂದು ಅಲ್ಲಿನ ಸಿಬ್ಬಂದಿ ಮಾಹಿತಿ ನೀಡಿದರು.

ಟವರ್ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರೇಡಿಯೋ ಕಾರ್ಯಕ್ರಮಗಳ ಪ್ರಸಾರಕ್ಕೆ ಸ್ವಯಂಚಾಲಿತ ತಂತ್ರಜ್ಞಾನದ ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT