ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಪು: ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಕೃಷಿಕರಿಗೆ ಕಷ್ಟಕಾಲದಲ್ಲಿ ಸಂಕಷ್ಟ

ಭತ್ತದ ಬೆಳೆಗೆ ಅಪಾರ ಹಾನಿ–ಪರಿಹಾರಕ್ಕೆ ರೈತರ ಆಗ್ರಹ
Last Updated 20 ಅಕ್ಟೋಬರ್ 2021, 5:25 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಕೆಲವು ದಿನಗಳಿಂದ ಸುರಿದ ಭಾರಿ ಮಳೆಗೆ ತಾಲ್ಲೂಕಿನ ವಿವಿಧೆಡೆ ಭತ್ತದ ಗದ್ದೆಗಳಲ್ಲಿ ನೀರು ಸಂಗ್ರಹವಾಗಿದ್ದು,ಬೆಳೆದು ನಿಂತ ಭತ್ತದ ಪೈರುಗಳು ಹಾನಿಯಾಗಿವೆ. ‘ಕೆಲಸ, ವ್ಯವಹಾರಗಳ ನಷ್ಟದ ಕಾಲದಲ್ಲಿ ಬೆಳೆದಿದ್ದ ಬೆಳೆಯೂ ಹಾನಿಯಾಗಿದ್ದು, ದಿಕ್ಕೇ ತೋಚದಾಗಿದೆ’ ಎಂದು ನೋವು ತೋಡಿಕೊಂಡಿರುವ ಕೃಷಿಕರು, ತಾವು ಕಷ್ಟಪಟ್ಟು ಬೆಳೆಸಿದ ಬೆಳೆ ನಾಶವಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ.

ಕಾಪು ತಾಲ್ಲೂಕಿನ ಕಾಪು, ಮಜೂರು, ಕಳತ್ತೂರು, ಮಲ್ಲಾರು, ಬೆಳಪು, ಎಲ್ಲೂರು ಕುಂಜೂರು, ಎರ್ಮಾಳು, ಪಡುಬಿದ್ರಿ ಶಿರ್ವ, ಕಟಪಾಡಿ, ಪಾಂಗಾಳ, ಇನ್ನಂಜೆ, ಪಲಿಮಾರು, ಹೇರೂರು, ಪಾದೂರು ಸಹಿತವಾಗಿ ಹೊಳೆ ಬದಿಯಲ್ಲಿರುವ ಭತ್ತದ ಗದ್ದೆಗಳಲ್ಲಿ ಮಳೆ ನೀರು ನಿಂತ ಪರಿಣಾಮ ಭತ್ತದ ಪೈರುಗಳು ನೀರಿನಲ್ಲಿ ತೇಲುತ್ತಿದೆ. ಇನ್ನೂ ಹಲವೆಡೆಗದ್ದೆಯಲ್ಲೇ ಭತ್ತ ಮೊಳೆಕೆ ಒಡೆಯಲಾರಂಭಿಸಿದೆ.

ಅಕಾಲಿಕ ಮಳೆಯಿಂದ ಹಾಳಾಗಿರುವ ಭತ್ತದ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಹಾನಿಯ ಬಗ್ಗೆ ಅಂದಾಜು ಪಟ್ಟಿ ಮಾಡಬೇಕು. ಕೃಷಿಕರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು ಎಂದು ಕಳತ್ತೂರು, ಹೆಜಮಾಡಿ, ಮಜೂರು, ಕುಂಜೂರು, ಎಲ್ಲೂರು, ಬೆಳಪು ಮುಂತಾದ ವಿವಿಧ ಪ್ರದೇಶಗಳಲ್ಲಿನ ಭತ್ತ ಬೆಳೆಗಾರರು ಆಗ್ರಹಿಸಿದ್ದಾರೆ.

‘ಕಟಾವಿನ ಸಮಯದಲ್ಲೇ ಮಳೆ ಬಂದಿದ್ದು, ಕಟಾವು ನಡೆಸದಂತೆ ಆಗಿದೆ. ಕೊಯಿಲು ಮಾಡದಿದ್ದರೆ, ಭತ್ತ ಗದ್ದೆಯಲ್ಲೇ ಬಿದ್ದು ಮೊಳಕೆ ಒಡೆಯುವ ಭೀತಿ ಎದುರಾಗಿದೆ. ಆಗಾಗ್ಗೆ ಮಳೆ ಸುರಿಯುತ್ತಿದ್ದು, ಬೈ ಹುಲ್ಲು ಕೂಡಾ ಹಾಳಾಗುವ ಭೀತಿ ಎದುರಾಗಿದೆ. ಆದರೆ, ಸರ್ಕಾರವು ಇನ್ನೂ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸಿಲ್ಲ. ಇದರಿಂದಾಗಿ ಕಟಾವಿನ ಬಳಿಕ ಭತ್ತವನ್ನು ಮಾರುವುದು ಹೇಗೆ? ಎಂಬ ಗೊಂದಲ ಕಾಡುತ್ತಿದೆ’ ಎನ್ನುತ್ತಾರೆ ಕೃಷಿಕ ಪ್ರವೀಣ್ ಕುಮಾರ್ ಗುರ್ಮೆ.

‘ಅಕಾಲಿಕ ಮಳೆಯಿಂದಾಗಿ ವಿವಿಧೆಡೆ ಭತ್ತದ ಬೆಳೆಗೆ ಹಾನಿಯಾಗಿದ್ದು, ಹೆಜಮಾಡಿ ಗ್ರಾಮದ ಕೃಷಿಕರ ದೂರಿನ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗಿದೆ. ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಕಾಪು ತಾಲ್ಲೂಕು ಕೃಷಿ ಅಧಿಕಾರಿ ಪುಷ್ಪಲತಾ ತಿಳಿಸಿದರು.

ಆರ್ಥಿಕ ಕಷ್ಟದಲ್ಲಿ ನಷ್ಟ

ಈ ಬಾರಿ ಲಾಕ್‌ಡೌನ್ ಪರಿಣಾಮ ಹಲವರು ವ್ಯವಹಾರ‌ ಹಾಗೂ ಉದ್ಯೋಗ ಕಳೆದುಕೊಂಡಿದ್ದರು. ಅಲ್ಲದೇ ಬೆಲೆಯೇರಿಕೆಯಿಂದಾಗಿ ವಿವಿಧ ವ್ಯಾಪಾರ– ವಹಿವಾಟುಗಳಲ್ಲೂ ನಷ್ಟ ಉಂಟಾಗಿತ್ತು. ಈ ನಷ್ಟದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯತ್ತ ಒಲವು ತೋರಿದ್ದರು. ತಾಲ್ಲೂಕಿನಲ್ಲಿ ಹಡೀಲು ಬಿದ್ದಿದ್ದ ಗದ್ದೆಗಳಲ್ಳೂ ಭತ್ತದ ಬೆಳೆ ಬೆಳೆಯಲಾಗಿತ್ತು.‘ಕಷ್ಟಕಾಲದಲ್ಲಿ ಬೆಳೆದ ಬೆಳೆಯೂ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ನಿರಾಶರಾಗಿದ್ದೇವೆ’ ಎಂದು ರೈತರು ನೋವು ತೋಡಿಕೊಂಡರು.

ಪರಿಹಾರಕ್ಕೆ ಒತ್ತಾಯ

ಮಜೂರು, ಹೇರೂರು, ಪಾದೂರು ಸುತ್ತಲಿನ ವ್ಯಾಪ್ತಿಯಲ್ಲಿ ಕಟಾವು ಹಂತದಲ್ಲಿನ ಭತ್ತದ ಬೆಳೆ ಗಾಳಿ ಮತ್ತು ಮಳೆಗೆ ನೆಲ ಕಚ್ಚಿವೆ. ಕೃಷಿ ಇಲಾಖೆಯ ಅಧಿಕಾರಿಗಳು ತುರ್ತಾಗಿ ಸ್ಪಂದಿಸಿ,ಇಲಾಖೆಯಿಂದ ಪರಿಹಾರ ದೊರಕಿಸಿ ಕೊಡಬೇಕು. ಸರ್ಕಾರ ಈ ಬಗ್ಗೆ ವಿಶೇಷ ಗಮನ ಹರಿಸಿ, ವಿಶೇಷ ಆರ್ಥಿಕ ಪರಿಹಾರ ಘೋಷಿಸಬೇಕು. ಕಟಾವಿಗೆ ಮೊದಲೇ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಕೃಷಿಕರಾದ ಪ್ರಭಾವತಿ, ಭಾಸ್ಕರ ಪೂಜಾರಿ ಕರಂದಾಡಿ, ಪುನೀತ್ ಕುಮಾರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT