ಮಂಗಳವಾರ, ಜುಲೈ 5, 2022
27 °C
ಬನ್ನಂಜೆ ಬಾಬು ಅಮೀನ್, ಯು.ಬಿ.ರಾಜಲಕ್ಷ್ಮೀ, ರೋಹಿತ್, ಪ್ರವೀಣ್ ಶೆಟ್ಟಿಗೆ ಪುರಸ್ಕಾರ

ಉಡುಪಿ: ನಾಲ್ವರು ಸಾಧಕರಿಗೆ ರಾಜ್ಯೋತ್ಸವ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ನಾಲ್ವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾನಪದ ಕ್ಷೇತ್ರದಿಂದ ಬನ್ನಂಜೆ ಬಾಬು ಅಮೀನ್‌, ಕ್ರೀಡಾ ಕ್ಷೇತ್ರದಿಂದ ರೋಹಿತ್ ಕುಮಾರ್ ಕಟೀಲ್, ಪತ್ರಿಕೋದ್ಯಮ ಕ್ಷೇತ್ರದಿಂದ ಯು.ಬಿ.ರಾಜಲಕ್ಷ್ಮಿ ಹಾಗೂ ಹೊರನಾಡು ಕನ್ನಡಿಗ ಕ್ಷೇತ್ರದಿಂದ ಪ್ರವೀಣ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಬನ್ನಂಜೆ ಬಾಬು ಅಮೀನ್‌:

ತುಳು ಭಾಷೆ, ಸಮಗ್ರ ಜನಪದ ಹಾಗೂ ದೈವಾರಾಧನೆಯ ಕುರಿತು ಅಧ್ಯಯನ ಮಾಡಿರುವ ಬನ್ನಂಜೆ ಬಾಬು ಅಮೀನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಆ.4, 1944ರಲ್ಲಿ ತೋಮ ಪೂಜಾರಿ ದಾರಮ್ಮ ಪೂಜಾರಿ ದಂಪತಿಯ ಪುತ್ರನಾಗಿ ಜನಿಸಿದ ಬನ್ನಂಜೆ ಬಾಬು ಅಮೀನ್ ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ಕೃತಿಗಳನ್ನು ಸಂಪಾದಿಸಿದ್ದಾರೆ.

ಯಕ್ಷಗಾನದಲ್ಲಿ ಅರ್ಥ ಸಹಿತ ‘ಕೋಟಿ ಚೆನ್ನಯ್ಯ’ ಪ್ರಸಂಗ ರಚನೆಯಲ್ಲಿ ಮುಖ್ಯ ಪಾತ್ರ, ಕೋಟಿ ಚೆನ್ನಯ್ಯ ಕೃತಿ ರಚನೆ, ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ, ತುಳು ಜಾನಪದ ಆಚರಣೆಗಳ ಕೃತಿ ರಚನೆ, ತುಳು ಕಾದಂಬರಿ ಪೂ ಪದ್ದೂಲ್, ದೈವಗಳ ಮಡಿಲಲ್ಲಿ ಜಾನಪದ ಸಂಕಲನ, ‘ಉಗುರಿಗೆ ಮುಡಿಯಕ್ಕೆ ಮತ್ತು ಇತರ ಕೃತಿಗಳು’ ರಚನೆ, ಐಸಿರಿ ಅಭಿನಂದನಾ ಗ್ರಂಥ ಸಮರ್ಪಣೆ, ಮಾನೆಚ್ಚಿ ತುಳು ಕಾದಂಬರಿ ರಚನೆ, ‘ನುಡಿಕಟ್ಸ್ ತುಳು’ ಜಾನಪದೀಯ ಪ್ರಾರ್ಥನೆ ಕೃತಿ, ‘ದೈವೋಲೆ ಕತೆಕುಲ್’, ತುಲು ಜಾನಪದ ಆಚರ್ನೆ, ‘ತುಳುನಾಡ ದೈವಗಳು’ ‘ತುಳುವರ್ ಮದಿಮೆ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯಿಂದ ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥಕ್ಕೆ ಪುರಸ್ಕಾರ, ಕುಶಿ ಜಾನಪದ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿಯಿಂದ ಪುರಸ್ಕಾರ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿಯಿಂದ ತುಳು ಸಾಹಿತ್ಯ ಸಂಶೋಧನೆ ಪ್ರಶಸ್ತಿ ಹಾಗೂ ಹಲವು ಪುರಸ್ಕಾರಗಳು ಬನ್ನಂಜೆ ಬಾಬು ಅಮೀನ್ ಅವರಿಗೆ ಸಂದಿವೆ.

ಡಾ.ಯು.ಬಿ.ರಾಜಲಕ್ಷ್ಮೀ:

ತರಂಗ ವಾರಪತ್ರಿಕೆ ಸಂಪಾದಕರಾಗಿರುವ ಡಾ.ಯು.ಬಿ.ರಾಜಲಕ್ಷ್ಮೀ ಪತ್ರಿಕಾ ಕ್ಷೇತ್ರದಲ್ಲಿ 38 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ್ದಾರೆ. ಹಿರಿಯ ಸಾಹಿತಿ ಕೊಡಡ್ಕಲ್ ಶ್ರೀನಿವಾಸ್ ರಾವ್ ಅವರ ಜೀವನ ಚರಿತ್ರೆ, ಉಡುಪಿ ಅಡುಗೆ ಪುಸ್ತಕವನ್ನು ಕನ್ನಡ, ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದಾರೆ. ನೂಪುರ, ಶಂಖನಾದ ಆಯ್ದ ಪ್ರಕಟಿತ ಕೃತಿಗಳು. ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯಲ್ಲಿ ಪರಿಣತಿ ಹೊಂದಿರುವ ರಾಜಲಕ್ಷ್ಮೀ ಅವರಿಗೆ ರಂಗಭೂಮಿಯ ನಂಟಿದೆ.

ಇವರ ಸಾಧನೆಗೆ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಪಾಟೀಲ ಪುಟ್ಟಪ್ಪ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಜೇಸಿ ಪುರಸ್ಕಾರ, ಮಂತ್ರಾಲಯದ ಸುಜಯಶ್ರೀ ಪ್ರಶಸ್ತಿ, ಅತ್ಯುತ್ತಮ ಪತ್ರಕರ್ತೆ ಪ್ರಶಸ್ತಿ ಲಭಿಸಿದೆ.

ರೋಹಿತ್ ಕುಮಾರ್ ಕಟೀಲ್:

ಕಾರ್ಕಳ ತಾಲ್ಲೂಕಿನ ರೋಹಿತ್ ಕುಮಾರ್ ಕಟೀಲ್ ಅಂತರ ರಾಷ್ಟ್ರ್ರೀಯ ಕ್ರೀಡಾಪಟು. ಭುವನೇಂದ್ರ ಪ್ರೌಢಶಾಲೆ ಹಾಗೂ ಭುವನೇಂದ್ರ ಕಾಲೇಜಿನಲ್ಲಿ ಅಧ್ಯಯನ ಮಾಡಿರುವ ರೋಹಿತ್ ಬಾಲ್ಯದಿಂದಲೇ ಕ್ರೀಡೆಗಳ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

1984ರಿಂದ 88ರವರೆಗೆ ಜಿಲ್ಲೆಯ ಅತ್ಯುತ್ತಮ ಕ್ರೀಡಾಪುಟ ಎಂಬ ಹೆಗ್ಗಳಿಕೆ ಪಾತ್ರಗಿದ್ದು, 2.04 ಮೀಟರ್ ಎತ್ತರ ಜಿಗಿದು ದಾಖಲೆ ನಿರ್ಮಿಸಿದ್ದಾರೆ. 8 ಬಾರಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

ರೋಹಿತ್ ಅವರ ಸಾಧನೆ ಪರಿಗಣಿಸಿ ಜೀವವಿಮಾ ನಿಗಮದಲ್ಲಿ ವೃತ್ತಿ ಲಭಿಸಿದ್ದು, ಕ್ರೀಡೆಯ ಜತೆಗೆ ನಟನೆಯಲ್ಲೂ ಗುರುತಿಸಿಕೊಂಡಿದ್ದಾರೆ. ತುಳುನಾಡಿನ ವೀರರಾದ ಕೋಟಿ ಚೆನ್ನಯ್ಯ, ಅಗೋಳಿ ಮಂಜಣ್ಣ ಪಾತ್ರ, ಕಟೀಲು ಶ್ರೀದೇವಿ ಚರಿತೆಯಲ್ಲಿ ಪರಶುರಾಮನಾಗಿ ಪ್ರಸಿದ್ಧರಾಗಿದ್ದಾರೆ  ರೋಹಿತ್. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು