ಶನಿವಾರ, ಜೂನ್ 25, 2022
21 °C

ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಕಾರ್ಯಕ್ರಮ ರೂಪಿಸಿ: ಜಿ.ಜಗದೀಶ್ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಹಾಗೂ ಫಲಿತಾಂಶ ವೃದ್ಧಿ ಸಂಬಂಧ ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಶ ಸುಧಾರಣೆಗೆ ಹಾಕಿಕೊಂಡಿರುವ ಶೈಕ್ಷಣಿಕ ಕಾರ್ಯಕ್ರಮಗಳ ಕುರಿತು ಡಿಡಿಪಿಐ ಎನ್‌.ಎಚ್‌.ನಾಗೂರ ಮಾತನಾಡಿ, ವಾರ್ಷಿಕ ಶೈಕ್ಷಣಿಕ ಕ್ರಿಯಾ ಯೋಜನೆ, ಮಕ್ಕಳ ಕಲಿಕಾ ಆಧಾರದ ಮೇಲೆ ವಿಂಗಡಣೆ, ವೈಯಕ್ತಿಕ ಕಡತ ನಿರ್ವಹಣೆ, ನಿರಂತರ ಪರೀಕ್ಷೆಗಳ ಆಯೋಜನೆ, ತಾಲೂಕು ಹಂತದಲ್ಲಿ ಮುಖ್ಯ ಗುರುಗಳ ಮಾಸಿಕ ಸಭೆ ಆಯೋಜನೆ, ವಿಷಯವಾರು ಶಿಕ್ಷಕರಿಗೆ ತಾಲ್ಲೂಕು ಹಂತದಲ್ಲಿ ಪ್ರೇರಣಾ ಶಿಬಿರ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಫೆ.2ರಿಂದ 8ರವರೆಗೆ ಸಹ ಶಿಕ್ಷಕರಿಗೆ ಪ್ರೇರಣಾ ಶಿಬಿರ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್ ಕಾರ್ಯಕ್ರಮ ಮೇ ಅಂತ್ಯದವರೆಗೂ ನಡೆಯುತ್ತಿದೆ. ಕಲಿಕಾ ದೋಷಗಳನ್ನು ತಿದ್ದುವಿಕೆ, ಅಧಿಕಾರಿಗಳಿಗೆ ಒಂದು ಶಾಲೆಗಳನ್ನು ದತ್ತು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 2019-20ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 70ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ 33 ಶಾಲೆಗಳನ್ನು ದತ್ತು ನೀಡಲಾಗಿದೆ ಎಂದು ತಿಳಿಸಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿ ತಯಾರಿಕೆ, ತಾಲ್ಲೂಕು ಹಂತದಲ್ಲಿ ವಿಷಯ ವೇದಿಕೆ ರಚನೆ, ವಿಷಯ ಸಂಪನ್ಮೂಲ ತಂಡ ರಚನೆ, ವಿದ್ಯಾರ್ಥಿಗಳೊಂದಿಗೆ ಸಂವಾದ, ಪಾಲಕರ ಮನೆಗಳಿಗೆ ಶಿಕ್ಷಕರ ಭೇಟಿ, 15 ದಿನಗಳಿಗೊಮ್ಮೆ ವಿಷಯಾವಾರು ರಸಪ್ರಶ್ನೆ ಕಾರ್ಯಕ್ರಮ, ಮಕ್ಕಳನ್ನು ಶಾಲೆಯ ಶಿಕ್ಷಕರಿಗೆ ದತ್ತು ನೀಡುವುದು, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳ ಬಿಡಿಸುವುದು, ಸೆಮಿನಾರ್, ಕಂಠಪಾಠಕ್ಕೆ ಇರುವ ಪದ್ಯಗಳ ಅಭ್ಯಾಸಕ್ಕೆ ವಾರದಲ್ಲಿ ಒಂದು ಅವಧಿ ಮೀಸಲು, ಶಿಕ್ಷಕರಿಗೆ ಫಲಿತಾಂಶ ಗುರಿ ನಿಗದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ನಾಗೂರ ತಿಳಿಸಿದರು.

ಪ್ರಶ್ನೆ ಪತ್ರಿಕೆಯ ಮನನ, 5 ಮಾದರಿ ಪರೀಕ್ಷೆಗಳನ್ನು ಸಿದ್ಧಪಡಿಸುವಿಕೆ, ಅನುತ್ತೀರ್ಣ ಸಾಧ್ಯತೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸರಳ ಮಾರ್ಗೋಪಾಯಗಳನ್ನು ತಿಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು, ವಿದ್ಯಾರ್ಥಿಗಳ ಹಾಗೂ ಪಾಲಕರ ಸಭೆ ಕರೆದು ಚರ್ಚಿಸಬೇಕು, ವಿದ್ಯಾರ್ಥಿಗಳು ಅನುತ್ತೀರ್ಣರಾಗದಂತೆ ಎಚ್ಚರವಹಿಸಬೇಕು, ಫಲಿತಾಂಶ ಸುಧಾರಣೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿಯನ್ನು ಶಾಲಾವಾರು ಗುರುತಿಸಿ, ತಾಲ್ಲೂಕು ಮಟ್ಟದಲ್ಲಿ ಕ್ರೋಢೀಕರಿಸಿ ಜಿಲ್ಲಾ ಮಟ್ಟಕ್ಕೆ ಸಲ್ಲಿಸಿ, ವಿಷಯವಾರು ಪಾಸಿಂಗ್ ಪ್ಯಾಕೇಜ್ ಸಿದ್ದಪಡಿಸಲು ತಿಳಿಸಿದರು.

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಮಾಹಿತಿಯನ್ನು ಶಿಕ್ಷಣಾಧಿಕಾರಿ ಜಾಹ್ನವಿ ಮಂಡಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು